ತಿರುಮಲ ದೇಗುಲದ ಮೊದಲ ಆರತಿಗೆ ಜನಪ್ರತಿನಿಧಿಗಳಿಗೆ ಅವಕಾಶ: ಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ- first Aarti at Tirumala temple

ಸಿಎಂ ಡಿ.ಕೆ.ಶಿವಕುಮಾರ್
ಸಿಎಂ ಡಿ.ಕೆ.ಶಿವಕುಮಾರ್
Published on
ಬೆಂಗಳೂರು: ತಿರುಪತಿಯಲ್ಲಿ ನಿತ್ಯ ನಡೆಯುವ ಮೊದಲ ಆರತಿ ಕರ್ನಾಟಕದ್ದು. ಈ ಆರತಿಯನ್ನು ಕರ್ನಾಟಕದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸೇರಿ ಇತರೆ ಗಣ್ಯರಿಗೆ ಶಿಷ್ಟಾಚಾರ ಪ್ರಕಾರ ನೀಡುವ ಸಂಬಂಧ ನಮ್ಮ ಸರ್ಕಾರದಿಂದ ಆದೇಶ ಹೊರಡಿಸುವುದಾಗಿ ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬನಶಂಕರಿಯ 6ನೇ ಹಂತದ ಲಿಂಗಧೀರನಹಳ್ಳಿಯಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಶ್ರೀ ಷಣ್ಮುಖ ಸುಬ್ರಮಣ್ಯ ದೇಗುಲದ’ ಶೀಲಾನ್ಯಾಸ ನೆರವೇರಿಸಿ ಮಾತನಾಡಿದರು.
ತಿರುಮಲ ವೆಂಕಟೇಶ್ವರ ದೇಗುಲದ ಒಳ ಮುಖ್ಯದ್ವಾರದ ಬಳಿ ತೆರಳಿ ಪೂಜೆ ಮಾಡಲು ರಾಜ್ಯದ ಸಿಎಂಗೆ ಮಾತ್ರ ಅವಕಾಶವಿದೆ. ಈ ಆರತಿಯನ್ನು ಪ್ರತಿದಿನ ನಮ್ಮ ಸರ್ಕಾರದ ವಿಶೇಷ ಅಧಿಕಾರಿ ಪಡೆಯುತ್ತಾರೆ. ಮುಂದಿನ ದಿನಗಳಲ್ಲಿ, ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳು ಮತ್ತು ನ್ಯಾಯಾಧೀಶರು ಸೇರಿ ಯಾರಾದರೂ ಭೇಟಿ ನೀಡಿದ್ದರೆ ಅಥವಾ ಸರ್ಕಾರ ಪರವಾಗಿ ಯಾರೇ ಹೋಗಿದ್ದರೂ ಅವರಿಗೆ ಈ ಆರತಿ ನೀಡಬೇಕು ಎನ್ನುವ ಆದೇಶ ಹೊರಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ನಾನು ಜೈಲುನಿಂದ ಬಿಡುಗಡೆಯಾಗಿ ಬಂದ ದಿನದಿಂದು ಮನೆದೇವರು ತಿರುಪತಿಗೆ ಹೋಗಿರಲಿಲ್ಲ. ಎಸ್.ಎಂ.ಕೃಷ್ಣ, ತಿರುಪತಿಯಲ್ಲಿ ಕರ್ನಾಟಕ ಟ್ರಸ್ಟ್ ರಚಿಸಿ, ವೈಭವವಾದ ಕಟ್ಟಡ ಕಟ್ಟುವ ಉದ್ದೇಶದಿಂದ ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿದ್ದರು. ಅಷ್ಟೊತ್ತಿಗೆ ನಮ್ಮ ಸರ್ಕಾರದ ಅವಧಿ ಮುಗಿಯಿತು. ನನ್ನನ್ನು ಮುಂದುವರಿಸದ ಕಾರಣ ಆ ಕೆಲಸ ಮಾಡಲು ಆಗಿರಲಿಲ್ಲ. ಮಹಾರಾಜರ ಕಾಲದಲ್ಲೇ ನೀಡಿದ್ದ 7 ಎಕರೆ ಜಾಗ ಅಲ್ಲಿತ್ತು ಸಿಎಂ ಹೇಳಿದರು.
ಸಂಸದರಾದ ಡಾ. ಸುಧಾಕರ್, ಡಾ. ಜಿ.ಸಿ.ಚಂದ್ರಶೇಖರ್, ಶಾಸಕರಾದ ಅಜಯ್ ಸಿಂಗ್, ಎಸ್.ಟಿ. ಸೋಮಶೇಖರ್, ಕಂಪ್ಲಿ ಗಣೇಶ್,ಶೃಂಗೇರಿ ಶಾರದಾ ಮಠದ ಆಡಳಿತಾಧಿಕಾರಿ ಗೌರಿಶಂಕರ್, ರಾಜಗುರು ದ್ವಾರಕನಾಥ್, ಕಾಂಗ್ರೆಸ್ ಮುಖಂಡ ಡಾ.ಶಂಕರ್ ಗುಹಾ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಶಾಮ್ ಭಟ್ ಮತ್ತಿತರರಿದ್ದರು.
ರಾಜಗುರು ದ್ವಾರಕನಾಥ್ ನನಗೆ ಪೂಜ್ಯ ಗುರು
ಸುಬ್ರಹ್ಮಣ್ಯ ದೇವಾಲಯ ಕಟ್ಟುವ ವಿಚಾರದ ಬಗ್ಗೆ ರಾಜಗುರು ದ್ವಾರಕನಾಥ್ ನನಗೆ ಹೇಳುತ್ತಲೇ ಇದ್ದರು. ನಾನು ಸಂದರ್ಭ ಬರಲಿ ಎಂದು ಅವರಿಗೆ ಹೇಳಿದ್ದೆ. ಈಗ ಸಂದರ್ಭ ಬಂದಿದೆ. ದ್ವಾರಕನಾಥ್ ನನಗೆ ಪೂಜ್ಯ ಗುರು ಸಮಾನರು. ಅವರ ಕುಟುಂಬ ಬಹಳ ಉತ್ತಮವಾಗಿ ಬೆಳೆಯುತ್ತಿದೆ. ಅವರು ಹಿಂದೆ ಒಂದು ಭವಿಷ್ಯ ನುಡಿದಿದ್ದರು. ಅದನ್ನು ನಾನು ಇಲ್ಲಿ ಹೇಳಿದರೆ ದೊಡ್ಡ ಸುದ್ದಿಯಾಗುತ್ತದೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ದೇವಾಲಯ ಎಂದರೆ ಭಕ್ತಿ, ಶಕ್ತಿ, ಸಂಸ್ಕಾರ, ಧರ್ಮದ ನೆಲೆ ಮತ್ತು ಭಕ್ತ ಭಗವಂತನಿಗೆ ಪ್ರಾರ್ಥನೆ ನಡೆಯುವ ಸ್ಥಳ. ಈ ದೇವಾಲಯದಲ್ಲಿ ಭಕ್ತರು ಬಂದು ಶಾಂತಿ ಪಡೆದುಕೊಳ್ಳಬೇಕು.ವೀರ ಗಂಗಾಧರ ಅಜ್ಜಯ್ಯ, ಮಾನವ ಧರ್ಮಕ್ಕೆ ಒಳ್ಳೆಯದು ಆಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಸಿಗಲಿ ಎಂದು ಹೇಳಿದ್ದರು. ಭಕ್ತಿ ಮೂಲಕ ಆಧ್ಯಾತ್ಮದ ದೊಡ್ಡ ಬೀಜ ಬಿತ್ತುವ ಕೆಲಸ ಮಾಡಲಾಗಿದೆ. ಭಾರತೀತೀರ್ಥ ಸ್ವಾಮೀಜಿ ಮತ್ತು ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ ಅವರು ನನಗೆ ಆಶೀರ್ವಾದ ಮಾಡಿಕೊಂಡು ಬಂದಿದ್ದಾರೆ. ಈ ಪವಿತ್ರವಾದ ಸ್ಥಳದಲ್ಲಿ ಶಾಂತಿ ಮತ್ತು ನೆಮ್ಮದಿ ಜನರಿಗೆ ದೊರೆಯಲಿ ಎಂದು ಸಿಎಂ ಆಶಿಸಿದರು.
ಧಮ್ಕಿಗಳಿಗೆ ದ್ವಾರಕನಾಥ್ ಹೆದರಿಲ್ಲ
ಸಿ.ವಿ.ಶಾಸ್ತ್ರೀ, ದ್ವಾರಕನಾಥ್ ಅವರನ್ನು ನನಗೆ ಪರಿಚಯ ಮಾಡಿಕೊಟ್ಟರು. 35 ವರ್ಷದಿಂದ ನನಗೆ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ನನ್ನ ಹಾಗೂ ಅವರ ನಡುವೆ ನಡೆದ ವ್ಯವಹಾರಗಳು, ಚಟುವಟಿಕೆಗಳು, ಅವರು ಕೊಟ್ಟಂತ ಮಾರ್ಗದರ್ಶನ ಹೀಗೆ ಎಲ್ಲಾ ಸನ್ನಿವೇಶಗಳನ್ನು ಹೇಳಿದರೆ ಒಂದು ದೊಡ್ಡ ಚರಿತ್ರೆಯ ಪುಸ್ತಕವನ್ನೇ ಬರೆಯಬಹುದು ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು. ದ್ವಾರಕನಾಥ್ ಟೀಕೆಗೆ ಒಳಗಾಗಿದ್ದಾರೆ. ಅವರ ಮೇಲೆ ಮಾಧ್ಯಮದವರೂ ದಾಳಿ ಮಾಡಿದ್ದಾರೆ.ಶಿವಕುಮಾರ್ ಪರವಾಗಿ ಮಾತನಾಡುತ್ತಿದ್ದೀರಿ ಎಂದು ಕೇಳಿದ್ದಾರೆ. 25 ವರ್ಷದಿಂದ ಬೇಕಾದಷ್ಟು ಧಮ್ಕಿಗಳನ್ನು ಅವರಿಗೆ ಹಾಕಿದ್ದಾರೆ. ಆ ಧಮ್ಕಿಗಳಿಗೆ ಹೆದರಿಕೊಂಡಿಲ್ಲ. ದೇವರಾಜ ಅರಸು, ಎಸ್.ಎಂ.ಕೃಷ್ಣ ಮತ್ತು ಧರ್ಮಸಿಂಗ್ ಸೇರಿ ಅನೇಕ ಮುಖ್ಯಮಂತ್ರಿಗಳು ಅವರ ಸಲಹೆ ಪಡೆದಿದ್ದಾರೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net