ಜಮೀನು, ನಿವೇಶನ, ಮನೆ, ವಾಣಿಜ್ಯ ಕಟ್ಟಡ ಇನ್ನಿತರ ಸ್ಥಿರಾಸ್ತಿಗಳ ಕ್ರಯ, ವಿಲ್, ದಾನಪತ್ರ, ಕರಾರು ಸೇರಿ ವಿವಿಧ ರೀತಿಯ ದಸ್ತಾವೇಜುಗಳ ನೋಂದಣಿಗೆ ಕಾಗದದ ಮೇಲೆ ಪಕ್ಷಕಾರರ ನಡುವಿನ ವ್ಯವಹಾರವನ್ನು ಮುದ್ರಿಸಲಾಗುತ್ತದೆ. ನಂತರ ಕಾವೇರಿ 2.0ನ ಸಿಟಿಜನ್ ಲಾಗಿನ್‌ನಲ್ಲಿ ದಸ್ತಾವೇಜು ಅಪ್‌ಲೋಡ್ ಮಾಡಿ ಆಸ್ತಿ ವಿವರವನ್ನು ಸರ್ಕಾರದ ದತ್ತಾಂಶದಿಂದ ಸ್ವೀಕರಿಸಿ ಅಪ್‌ಲೋಡ್ ಮಾಡಲಾಗುತ್ತದೆ. ಸಬ್‌ರಿಜಿಸ್ಟ್ರಾರ್ ಪರಿಶೀಲನೆ ನಡೆಸಿ ಸರಿ ಇದ್ದರೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿಗೆ ವಾಪಸ್ ಸಿಟಿಜನ್ ಲಾಗಿನ್‌ಗೆ ಕಳುಹಿಸುತ್ತಾರೆ. ದೋಷ ಇದ್ದರೂ ಹಿಂತಿರುಗಿಸುತ್ತಾರೆ. ಇದಾದ ಮೇಲೆ ಪಕ್ಷಕಾರರು, ಆನ್‌ಲೈನ್ ಪೇಮೆಂಟ್ ಗೇಟ್‌ವೇನಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಪಾವತಿ ಮಾಡಬೇಕು. ಎರಡೂ ಕಡೆಯ ಪಕ್ಷಕಾರರು ಆಧಾರ್ ಆಧಾರಿತ ಇ-ಸೈನ್ ಅಥವಾ ಡಿಜಿಟಲ್ ಸಿಗ್ನೇಚರ್ ಪ್ರಮಾಣಪತ್ರ (ಡಿಎಸ್‌ಸಿ) ಮೂಲಕ ರುಜು ಮಾಡಬೇಕು. ಡಿಜಿಟಲ್ ಸಹಿ ಮಾಡಿ ನೋಂದಣಿಗಾಗಿ ಸಬ್‌ರಿಜಿಸ್ಟ್ರಾರ್‌ಗಳ ಲಾಗಿನ್‌ಗೆ ಕಳುಹಿಸಬೇಕು. ಭೌತಿಕ ದಾಖಲೆ ಅಥವಾ ಕಾಗದವನ್ನು ಅಧಿಕಾರಿ ಮುಂದೆ ಕೊಡುವ ಅಗತ್ಯ ಇರುವುದಿಲ್ಲ. ಲಾಗಿನ್‌ನಲ್ಲಿ ಬಂದ ಕಾಗದರಹಿತ ದಾಖಲೆಯನ್ನು ನೋಂದಣಿ ಕಾಯ್ದೆ ಮತ್ತು ನಿಯಮಗಳ ಅನ್ವಯ ಪರಿಶೀಲನೆ ನಡೆಸಿ ಸಬ್‌ರಿಜಿಸ್ಟ್ರಾರ್, ಪಕ್ಷಕಾರರು, ಸಾಕ್ಷಿಗಳ ಛಾಯಚಿತ್ರ ಮತ್ತು ಬೆರಳಚ್ಚು ಗುರುತನ್ನು ಡಿಜಿಟಲ್ ಯಂತ್ರದ ಮೂಲಕವೇ ಸೆರೆಹಿಡಿದುಕೊಳ್ಳಲಿದ್ದಾರೆ. ಅಂತಿಮವಾಗಿ ಸಬ್‌ರಿಜಿಸ್ಟ್ರಾರ್, ಡಿಜಿಟಲ್ ಸಹಿ ಮಾಡಿ ದಸ್ತಾವೇಜು ರಿಜಿಸ್ಟ್ರೇಷನ್ ಪ್ರಕ್ರಿಯೆ ಪೂರ್ಣ ಮಾಡಲಿದ್ದಾರೆ. ಶುಲ್ಕ ಪಾವತಿ ರಸೀದಿ ಮತ್ತು ದಾಖಲೆ ಸಂಗ್ರಹಿಸಿ ಪಕ್ಷಕಾರರಿಗೆ (ಸಂಬಂಧಪಟ್ಟ ವ್ಯಕ್ತಿಗೆ) ಲಾಗಿನ್‌ನಲ್ಲಿ ಲಭ್ಯವಾಗುವಂತೆ ಮಾಡುತ್ತಾರೆ.