ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶನಿವಾರ ಆನ್‌ಲೈನ್ ಕ್ಲಾಸ್: ವಿಟಿಯು ದೂರದೃಷ್ಟಿ ಕ್ರಮಕ್ಕೆ ಮೆಚ್ಚುಗೆ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ
Published on

ಪ್ರಮುಖ ಮುಖ್ಯಾಂಶಗಳು

  • ಹೊಸ ನಿಯಮದಿಂದ ವಿಟಿಯು ವ್ಯಾಪ್ತಿಯಲ್ಲಿರುವ ಎಲ್ಲ 220 ಇಂಜಿನಿಯರಿಂಗ್ ಕಾಲೇಜಿನ 3 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಅನ್ವಯ
  • ಈ ನಿಯಮವೂ ತಕ್ಷಣದಿಂದಲೇ ಜಾರಿಯಾಗಲಿದ್ದು, ಎಲ್ಲ ಕಾಲೇಜಿನ ಪ್ರಾಂಶುಪಾಲರು ಇದನ್ನು ಅಳವಡಿಸಿಕೊಳ್ಳುವಂತೆ ಸೂಚನೆ
  • ವಿದ್ಯಾರ್ಥಿಗಳು ಮನೆಯಿಂದಲೇ ತರಗತಿಗಳಿಗೆ ಹಾಜರಾಗಬಹುದು. ವಾಹನ ಬಳಕೆಯಾಗದಿರುವ ಕಾರಣ ವಾಯು ಮಾಲಿನ್ಯ ತಗ್ಗಿಸುವ ಪ್ರಯತ್ನ
ಬೆಂಗಳೂರು: ಸಂಚಾರ ದಟ್ಟಣೆ ಕಡಿತಗೊಳಿಸುವುದು ಹಾಗೂ ಇಂಧನ ಉಳಿಸುವ ನಿಟ್ಟಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಶನಿವಾರದ ತರಗತಿಗಳನ್ನು ಆನ್‌ಲೈನ್ ಮೂಲಕ ನಡೆಸಲು ನಿರ್ಧರಿಸಿದೆ.
ಇತ್ತೀಚೆಗೆ ನಡೆದ ವಿವಿ ಕಾರ್ಯಕಾರಿ ಪರಿಷತ್ತಿನ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ವಿವಿ ಕುಲಸಚಿವರು ಸುತ್ತೋಲೆ ಹೊರಡಿಸಿದ್ದಾರೆ.
ಹೊಸ ನಿಯಮದಿಂದ ವಿಟಿಯು ವ್ಯಾಪ್ತಿಯಲ್ಲಿರುವ ಎಲ್ಲ 220 ಇಂಜಿನಿಯರಿಂಗ್ ಕಾಲೇಜಿನ 3 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಅನ್ವಯವಾಗಲಿದೆ. ಸಾಮಾನ್ಯವಾಗಿ ವಿಟಿಯು 1 ಮತ್ತು 3ನೇ ಶನಿವಾರ ಸಾರ್ವತ್ರಿಕ ರಜೆ ದಿನವಾಗಿ ಘೋಷಿಸಿದೆ. ಉಳಿದ 2,4 ಮತ್ತು 5ನೇ ಶನಿವಾರ ಎಂದಿನಂತೆ ತರಗತಿಗಳು ನಡೆಯುತ್ತಿದ್ದವು. ಇದೀಗ ಈ ಶನಿವಾರದ ದಿನಗಳಂದು ಸಹ ಆನ್‌ಲೈನ್ ಬೋಧನೆ ಮೊರೆ ಹೋಗಿದೆ.
ಈ ನಿಯಮವೂ ತಕ್ಷಣದಿಂದಲೇ ಜಾರಿಯಾಗಲಿದ್ದು, ಎಲ್ಲ ಕಾಲೇಜಿನ ಪ್ರಾಂಶುಪಾಲರು ಇದನ್ನು ಅಳವಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಇದಕ್ಕೆ ತಕ್ಕಂತೆ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆಯೂ ನಿರ್ದೇಶನ ನೀಡಿದೆ.
ದಿನೇ ದಿನೇ ನಗರ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ತರಗತಿಗಳು ನಡೆಯುವ ದಿನ ವಿದ್ಯಾರ್ಥಿಗಳು ಆಗಮಿಸಲು ಸ್ವಂತ ವಾಹನ, ಸಮೂಹ ಸಾರಿಗೆ, ಕಾಲೇಜಿನ ಬಸ್‌ಗಳನ್ನು ಅವಲಂಬಿಸುತ್ತಾರೆ. ಈ ಮೂಲಕ ಇಂಧನ ಬಳಕೆ ಕಡಿತಗೊಳಿಸಿ ವಾಯುಮಾಲಿನ್ಯ ತಗ್ಗಿಸುವ ಪ್ರಯತ್ನವಾಗಿದೆ.
"

ವಾರದಲ್ಲಿ ಒಂದು ದಿನ ಆನ್‌ಲೈನ್ ತರಗತಿಗಳನ್ನು ನಡೆಸುವುದರಿಂದ ವಿದ್ಯಾರ್ಥಿಗಳು ಮನೆಯಿಂದಲೇ ತರಗತಿಗಳಿಗೆ ಹಾಜರಾಗಬಹುದು. ವಾಹನ ಬಳಕೆಯಾಗದಿರುವ ಕಾರಣ ವಾಯು ಮಾಲಿನ್ಯ ತಗ್ಗಿಸುವ ಪ್ರಯತ್ನವಾಗಿದೆ.

— - ಪ್ರೊ. ಎಸ್. ವಿದ್ಯಾಶಂಕರ್, ಕುಲಪತಿ, ವಿಟಿಯು


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net