ಅನುಷ್ಠಾನಗೊಂಡಿಲ್ಲ ‘ಒನ್‌ಟೈಮ್ ಸೆಟಲ್ಮೆಂಟ್ ಸ್ಕೀಂ: ಹೊರಬೀಳದ ಅಂತಿಮ ಆದೇಶ-One-time settlement scheme

ಒನ್‌ಟೈಮ್ ಸೆಟಲ್ಮೆಂಟ್ ಸ್ಕೀಂ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
ಒನ್‌ಟೈಮ್ ಸೆಟಲ್ಮೆಂಟ್ ಸ್ಕೀಂ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
Published on
ಬೆಂಗಳೂರು: ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಅಧೀನದ ನಿಗಮಗಳಲ್ಲಿ ವಿವಿಧ ಯೋಜನೆಗಳಡಿ ಪಡೆದಿರುವ ಸಾಲದ ಅಸಲು ಪಾವತಿಸುವವರಿಗೆ ಬಡ್ಡಿ ಮನ್ನಾ ಮಾಡುವ ‘ಒಂದು ಬಾರಿ ಪರಿಹಾರ ಯೋಜನೆ’ (ಒನ್‌ಟೈಮ್ ಸೆಟಲ್ಮೆಂಟ್ ಸ್ಕೀಂ) ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
ಮಾರ್ಚ್‌ನಲ್ಲಿ ಸಿದ್ದರಾಮಯ್ಯ ಸರ್ಕಾರವು, ವಿವಿಧ ಇಲಾಖೆಗಳ ವ್ಯಾಪ್ತಿಯ ನಿಗಮಗಳಲ್ಲಿ 2021ರ ಮಾ.31ರ ಅಂತ್ಯದವರೆಗೆ ಹಲವು ಯೋಜನೆಗಳಡಿ ಸಾಲ ಪಡೆದಿರುವವರು ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದರು. ಆದರೆ, ಬಜೆಟ್ ಮಂಡನೆಯಾಗಿ 3 ತಿಂಗಳು ಕಳೆದರೂ ಯೋಜನೆ ಕಾರ್ಯರೂಪಕ್ಕೆ ಬರಲು ವಿಳಂಬವಾಗುತ್ತಿದೆ. ಅಧಿಕಾರಿಗಳು ರೂಪುರೇಷೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ, ಸರ್ಕಾರದ ಮಟ್ಟದಲ್ಲಿ ಅನುಷ್ಠಾನಕ್ಕೆ ಅಂತಿಮ ಆದೇಶವಾಗಿಲ್ಲ. ಇದೀಗ, ಹೊಸ ಸರ್ಕಾರ ರಚನೆಯಾಗುತ್ತಿರುವ ಹಿನ್ನೆಲೆಯಲ್ಲಿ ಯೋಜನೆ ಜಾರಿಗೆ ಆದೇಶ ಹೊರಡಿಸಲು ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ.
ಯೋಜನೆ ಸದ್ಬಳಕೆಗೆ ಒಲವು:
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಡಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಒಕ್ಕಲಿಗ, ವೀರಶೈವ ಲಿಂಗಾಯತ, ವಿಶ್ವಕರ್ಮ, ಉಪ್ಪಾರ, ನಿಜಶರಣ ಅಂಬಿಗರ ಚೌಡಯ್ಯ, ಮಡಿವಾಳ ಮಾಚಿದೇವ, ಸವಿತಾ ಸಮಾಜ, ಕಾಡುಗೊಲ್ಲ, ಅಲೆಮಾರಿ ಮತ್ತು ಅರೆ ಅಲೆಮಾರಿ ಸೇರಿ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮಗಳಿವೆ. ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನಿಗಮಗಳಿವೆ. ಈ ನಿಗಮಗಳಿಂದ ಎನ್‌ಬಿಸಿಎಫ್​ಡಿಸಿ ಯೋಜನೆ, ಅರಿವು ಶೈಕ್ಷಣಿಕ ಸಾಲ, ಸ್ವಯಂ ಉದ್ಯೋಗ, ಸ್ವಾವಲಂಬಿ ಸಾರಥಿ, ಹೊಲಿಗೆಯಂತ್ರ, ಕಾಯಕಿರಣ, ಬಸವಬೆಳಕು ಸೇರಿ ಇತರ ಯೋಜನೆಗಳ ಮೂಲಕ ಸಾವಿರಾರು ಅಭ್ಯರ್ಥಿಗಳು ಸಾಲ ಪಡೆದಿದ್ದಾರೆ. ಹಲವರು ಸಾಲ ಪಡೆದು ಆರ್ಥಿಕ ಮತ್ತು ಅಭಿವೃದ್ಧಿ ಚಟುವಟಿಕೆ ಆರಂಭಿಸಿ ಸ್ವಾವಲಂಬಿಗಳಾಗಿದ್ದಾರೆ. ಸರ್ಕಾರ ಪ್ರಸ್ತಾಪಿಸಿರುವ ಯೋಜನೆ ಸದ್ಬಳಕೆಗೆ ಸಾಕಷ್ಟು ಫಲಾನುಭವಿಗಳು ಸಿದ್ಧರಾಗಿದ್ದಾರೆ. ಹಾಗಾಗಿ, ಬೇಗ ಯೋಜನೆ ಅನುಷ್ಠಾನಕ್ಕೆ ಬಂದರೆ ಅನುಕೂಲವಾಗಲಿದೆ ಎನ್ನುತ್ತಾರೆ ಲಾನುಭವಿಗಳು.
ಲಕ್ಷಾಂತರ ರೂ.ಬಡ್ಡಿ ಮನ್ನಾ:
ನಿಗಮಗಳಲ್ಲಿ 3 ಲಕ್ಷ ರೂ.ನಿಂದ 10 ಲಕ್ಷ ರೂ.ವರೆಗೆ ಸಾಲ ಪಡೆದಿದ್ದಾರೆ. ಕೆಲ ಫಲಾನುಭವಿಗಳು 4-5 ಕಂತು ಪಾವತಿಸಿ ಸುಮ್ಮನಾಗಿದ್ದಾರೆ. ಇನ್ನೂ ಕೆಲವರು ವರ್ಷದವರೆಗೆ ಕಂತು ಪಾವತಿಸಿದ್ದು, ಸಾಲ ತೀರಿಸಲು ಸಾಧ್ಯವಾಗಿಲ್ಲ. ಅಂಥವರಿಗೆ ‘ಒಂದು ಬಾರಿ ಪರಿಹಾರ ಯೋಜನೆ’ ಸಹಕಾರಿಯಾಗಲಿದೆ. ನಿಗಮಗಳು ಲಾನುಭವಿ ಪಡೆದಿರುವ ಸಾಲ, ಅದಕ್ಕೆ ಪಾವತಿಸಿರುವ ಮೊತ್ತ ಮತ್ತು ಸಾಲಕ್ಕೆ ವಿಧಿಸಿರುವ ಬಡಿಯನ್ನು ಲೆಕ್ಕ ಹಾಕಲಾಗುತ್ತಿದೆ. ಆಮೇಲೆ, ಇಂತಿಷ್ಟು ಮೊತ್ತ ಕಟ್ಟುವಂತೆ ಸೂಚಿಸುತ್ತಾರೆ. ಅಂದಾಜು 2ಲಕ್ಷ ರೂ.ವರೆಗೆ ಬಡ್ಡಿ ಮನ್ನಾಗೊಳ್ಳುವ ಸಾಧ್ಯತೆ ಇದೆ ಎನ್ನುತ್ತಾರೆ ಅಧಿಕಾರಿಗಳು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net