ಟಾಟಾ ಪವರ್​ ಪ್ರಸ್ತಾವನೆಗೆ ಆಕ್ಷೇಪ

,
,
Published on

ಪ್ರಮುಖ ಮುಖ್ಯಾಂಶಗಳು

  • ಸಬ್ಸಿಡಿ ಆಧಾರಿತ ಗ್ರಾಹಕರಿಗೆ ಸಂಕಷ್ಟ ಸಾಧ್ಯತೆ
  • ಜೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್​ ವಿತರಣಾ ಪರವಾನಗಿ
ಕಲಬುರಗಿ: ವಿದ್ಯುತ್​ ಕಾಯ್ದೆ 2003ರ 14 ಮತ್ತು 15 ಕಲಂನಡಿ ಟಾಟಾ ಪವರ್​ ಕಂಪನಿ ಜೆಸ್ಕಾಂ ವ್ಯಾಪ್ತಿಯ ಬಳ್ಳಾರಿ, ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಗಳ ಮೂರು ಮಹಾನಗರ ಪಾಲಿಕೆ ಹಾಗೂ ಆರು ನಗರ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಿದ್ಯುತ್​ ವಿತರಣಾ ಪರವಾನಗಿ ನೀಡುವಂತೆ ಕರ್ನಾಟಕ ವಿದ್ಯುತ್​ ನಿಯಂತ್ರಣ ಆಯೋಗಕ್ಕೆ (ಕೆಇಆರ್​ಸಿ) ಸಲ್ಲಿಸಿದ ಪ್ರಸ್ತಾವನೆ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾಗುವ ಸಾಧ್ಯತೆ ಇರುವುದರಿಂದ ಕೆಇಆರ್​ಸಿ ಮುಂದೆ ಗುಲ್ಬರ್ಗ ವಿದ್ಯುತ್​ ಸರಬರಾಜು ಕಂಪನಿ ಆಕ್ಷೇಪಣೆ ಸಲ್ಲಿಸಿದೆ.
ಪ್ರಸ್ತುತ ಜೆಸ್ಕಾಂ ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಂತೆ ಸಮಗ್ರವಾಗಿ ವಿದ್ಯುತ್​ ವಿತರಣಾ ಸೇವೆ ಒದಗಿಸುತ್ತಿದೆ ಎಂದು ಅಧ್ಯಕ್ಷ ಪ್ರವಿಣ್​ ಪಾಟೀಲ್​ ಹರವಾಳ ತಿಳಿಸಿದ್ದಾರೆ.
ಆಕ್ಷೇಪಣೆ ಏನು?: ಪ್ರಸ್ತಾವಿತ ಪ್ರದೇಶದಲ್ಲಿ ಸ್ವತಂತ್ರ ವಿದ್ಯುತ್​ ವಿತರಣಾ ಜಾಲ ನಿರ್ಮಿಸುವ ಕುರಿತು ಟಾಟಾ ಪವರ್​ ಸ್ಪಷ್ಟ ಯೋಜನೆ ಸಲ್ಲಿಸಿಲ್ಲ. ಬದಲಾಗಿ ಜೆಸ್ಕಾಂನ ಮೂಲಸೌಕರ್ಯ ಅವಲಂಬಿಸಿ ವಿದ್ಯುತ್​ ಸರಬರಾಜು ಮಾಡಲು ಉದ್ದೇಶಿಸಿರುವುದಾಗಿ ಹೇಳಿದೆ. ವಿದ್ಯುತ್​ ಖರೀದಿ ಯೋಜನೆ ಕುರಿತಾಗಿಯೂ ಜೆಸ್ಕಾಂ ಆಕ್ಷೇಪ ಸಲ್ಲಿಸಿದ್ದು, ಅಲ್ಪಾವಧಿ ವಿದ್ಯುತ್​ ಖರೀದಿ ಅವಲಂಬನೆ ಗ್ರಾಹಕರಿಗೆ ಹೆಚ್ಚುವರಿ ವೆಚ್ಚದ ಭಾರ ಉಂಟುಮಾಡುವ ಸಾಧ್ಯತೆಯಿದೆ ಎಂದು ಹೇಳಿದೆ.
ಹೆಚ್ಚಿನ ಆದಾಯ ತರುವ ಕೈಗಾರಿಕೆ ಹಾಗೂ ವಾಣಿಜ್ಯ ವಲಯದ ಗ್ರಾಹಕರನ್ನೇ ಗುರಿಯಾಗಿಸಿ ಟಾಟಾ ಸಂಸ್ಥೆ ಸೇವೆ ನೀಡುವ ಸಾಧ್ಯತೆ ಇರುವುದರಿಂದ ಸಬ್ಸಿಡಿ ಪಡೆಯುವ ಸಾಮಾನ್ಯ ಗ್ರಾಹಕರಿಗೆ ತೊಂದರೆ ಆಗಬಹುದು. ಜತೆಗೆ ಜೆಸ್ಕಾಂನ ಆರ್ಥಿಕ ಸ್ಥಿರತೆಗೆ ಧಕ್ಕೆ ಉಂಟಾಗಬಹುದು. ಗೃಹ, ಕೃಷಿ ಇತರ ಸಬ್ಸಿಡಿ ಆಧಾರಿತ ಗ್ರಾಹಕರಿಗೆ ನೀಡುತ್ತಿರುವ ಕ್ರಾಸ್​ ಸಬ್ಸಿಡಿ ವ್ಯವಸ್ಥೆ ದುರ್ಬಲಗೊಳ್ಳುವ ಸಾಧ್ಯತೆ ಇದೆ. ಪ್ರಸ್ತುತ ಹಾಗೂ ಭವಿಷ್ಯದ ಬೇಡಿಕೆ ಪೂರೈಸುವ ಉದ್ದೇಶದಿಂದ ವಿವಿಧ ವಿದ್ಯುತ್​ ಉತ್ಪಾದನಾ ಸಂಸ್ಥೆಗಳೊಂದಿಗೆ ದೀರ್ಘಾವಧಿಯ ವಿದ್ಯುತ್​ ಖರೀದಿ ಒಪ್ಪಂದವನ್ನು ಜೆಸ್ಕಾಂ ಮಾಡಿಕೊಂಡಿದ್ದು, ವಿದ್ಯುತ್​ ವಿತರಣಾ ಜಾಲದ ವಿಸ್ತರಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗಾಗಿ ಗಣನೀಯ ಪ್ರಮಾಣದ ಸಾಲವನ್ನೂ ಪಡೆದಿದೆ. ಸಂಸ್ಥೆ ಗ್ರಾಹಕರು, ರೈತರು, ಸಾರ್ವಜನಿಕರ ಹಿತಾಸಕ್ತಿ ಕಾಪಾಡಲು ಹಾಗೂ ಗ್ರಾಹಕರ ಬೇಡಿಕೆಗಳ ಜತೆ ಹೊಸ ವಿದ್ಯುತ್​ ಸಂಪರ್ಕ ಒದಗಿಸುವ ಸಾಮರ್ಥ್ಯವೂ ಜೆಸ್ಕಾಂ ಹೊಂದಿದೆ ಎಂದು ಹರವಾಳ ತಿಳಿಸಿದ್ದಾರೆ.
"

ಲಾಭದಾಯಕ ನಗರ ಪ್ರದೇಶಗಳಲ್ಲಿ ಖಾಸಗಿ ಕಂಪನಿಗಳಿಗೆ ವಿದ್ಯುತ್​ ವಿತರಣಾ ಪರವಾನಗಿ ನೀಡಿದರೆ ಜೆಸ್ಕಾಂ ಆದಾಯದಲ್ಲಿ ಕುಸಿತ ಉಂಟಾಗಿ ಆರ್ಥಿಕ ಸ್ಥಿರತೆ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಕೆಇಆರ್​ಸಿಗೆ ಆೇಪಣೆ ಸಲ್ಲಿಸಲಾಗಿದೆ.

— > ಪ್ರವಿಣ್​ ಪಾಟೀಲ್​ ಹರವಾಳ ಅಧ್ಯಕ್ಷ, ಜೆಸ್ಕಾಂ ಕಲಬುರಗಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net