ಬೆಂಗಳೂರು: ಅಕಾಡೆಮಿ ಆಫ್ ಮ್ಯೂಸಿಕ್ ವತಿಯಿಂದ ಶುಕ್ರವಾರದಿಂದ ಭಾನುವಾರವರೆಗೆ (ಜು.10- 12) ವೈಯಾಲಿಕಾವಲ್‌ನ ಚೌಡಯ್ಯ ಸ್ಮಾರಕ ಭವನದಲ್ಲಿ ‘ನೃತ್ಯ ರಂಗೋಲಿ- 2026’ ರಾಷ್ಟ್ರೀಯ ನೃತ್ಯ ಮಹೋತ್ಸವ ಆಯೋಜಿಸಲಾಗಿದೆ. ಭಾರತೀಯ ಶಾಸ್ತ್ರೀಯ ನೃತ್ಯ ಪರಂಪರೆಯ ವೈಭವ ಮತ್ತು ವೈವಿಧ್ಯತೆ ಸಂಭ್ರಮಿಸುವ ಉತ್ಸವದಲ್ಲಿ ವಿವಿಧ ತಂಡಗಳು ಭರತನಾಟ್ಯ, ಕಥಕ್ ಮತ್ತು ಒಡಿಸ್ಸಿ ಪ್ರಕಾರಗಳ ಪ್ರದರ್ಶಿಸಲಿದ್ದಾರೆ. 10ರಂದು ನೂಪುರ ಸ್ಕೂಲ್ ಆಫ್ ಭರತನಾಟ್ಯಂ ನಿರ್ದೇಶಕಿ ಲಲಿತಾ ಶ್ರೀನಿವಾಸನ್ ಉತ್ಸವಕ್ಕೆ ಚಾಲನೆ ನೀಡಲಿದ್ದು, ಕಲಾವಿದರಾದ ಪಾರ್ಶ್ವನಾಥ ಉಪಾಧ್ಯೆ ಮತ್ತು ಪೂಜಾ ಪಂತ್ ಕಥಕ್- ಭರತನಾಟ್ಯ ಜುಗಲ್‌ಬಂದಿ ‘ರಾಗ್ ರಾಗಿಣಿ’ ಪ್ರಸ್ತುತಪಡಿಸಲಿದ್ದಾರೆ. 11ರಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಶುಭಾ ಧನಂಜಯ್ ಮುಖ್ಯ ಅತಿಥಿಯಾಗಿರುವರು. ಡಾ. ಆರ್.ಕೆ. ಉಷಾ ನಿರ್ದೇಶನದಲ್ಲಿ ರೂಪುಗೊಂಡ ವಿಶಿಷ್ಟ ಸಂಗೀತ ಕಾರ್ಯಕ್ರಮ ವಿಶ್ವವ್ಯಾಪಿ ದೀಕ್ಷಿತರ್ ಅವರಿಂದ ಪ್ರದರ್ಶನಗೊಳ್ಳಲಿದೆ. 12ರ ಸಮಾರೋಪ ಸಮಾರಂಭದಲ್ಲಿ ಕಲಾವಿದೆ ಪದ್ಮಿನಿ ರವಿ ಅತಿಥಿಯಾಗಿ ಭಾಗವಹಿಸಲಿದ್ದು, ಅದಿತಿ ಮಂಗಳದಾಸ್ ‘ವೈಡನಿಂಗ್ ಸರ್ಕಲ್ಸ್’ ಶೀರ್ಷಿಕೆಯಡಿ ಕಥಕ್ ಪ್ರದರ್ಶಿಸಲಿದ್ದಾರೆ.