ಎಫ್‌ಡಿಎ, ಎಸ್‌ಡಿಎ ನೇಮಕಾತಿಗೆ ಅಧಿಸೂಚನೆ ಪ್ರಕಟ: ಹಲವು ನಿಯಮಗಳ ಬದಲಾವಣೆ

ವಿಧಾನಸೌಧ
ವಿಧಾನಸೌಧ
Published on

ಪ್ರಮುಖ ಮುಖ್ಯಾಂಶಗಳು

  • ಸ್ಪರ್ಧಾತ್ಮಕ ಪರೀಕ್ಷೆಯ ಎರಡೂ ಪತ್ರಿಕೆಗಳಿಗೂ ಋಣಾತ್ಮಕ ಅಂಕಗಳ ಪರಿಗಣನೆ, ಅರ್ಹತೆಗೆ ಕನಿಷ್ಠ ಅಂಕಗಳ ನಿಗದಿ ಸೇರಿ ನೇಮಕಾತಿ 2021ರ ನಿಯಮಗಳಲ್ಲಿ ಹಲವು ತಿದ್ದುಪಡಿ
  • ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಅಧಿನ ಕಾರ್ಯದರ್ಶಿ ಕರಡು ನಿಯಮಗಳ ಅಧಿಸೂಚನೆ
  • ಅಧಿಸೂಚನೆಗೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ. ಬಳಿಕ ಅಂತಿಮ ಅಧಿಸೂಚನೆ ಪ್ರಕಟವಾಗಲಿದೆ.
ಬೆಂಗಳೂರು:

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕರ ನೇಮಕಾತಿ ಪರೀಕ್ಷೆ ನಡೆಸುವ ಸಂಬಂಧ ಕರ್ನಾಟಕ ನಾಗರಿಕ ಸೇವೆಗಳು (ನೇರ ನೇಮಕಾತಿ), (ಸಾಮಾನ್ಯ), ತಿದ್ದುಪಡಿ ನಿಯಮಗಳು-2026 ರೂಪಿಸಿ ಗೆಜೆಜ್ ಕರಡು ಅಧಿಸೂಚನೆ ಪ್ರಕಟಿಸಲಾಗಿದೆ.

ಸ್ಪರ್ಧಾತ್ಮಕ ಪರೀಕ್ಷೆಯ ಎರಡೂ ಪತ್ರಿಕೆಗಳಿಗೂ ಋಣಾತ್ಮಕ ಅಂಕಗಳ ಪರಿಗಣನೆ, ಅರ್ಹತೆಗೆ ಕನಿಷ್ಠ ಅಂಕಗಳ ನಿಗದಿ ಸೇರಿ ನೇಮಕಾತಿ 2021ರ ನಿಯಮಗಳಲ್ಲಿ ಹಲವು ತಿದ್ದುಪಡಿ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಅಧಿನ ಕಾರ್ಯದರ್ಶಿ ಕರಡು ನಿಯಮಗಳ ಅಧಿಸೂಚನೆಯನ್ನು ಹೊರಡಿಸಿದ್ದಾರೆ.
ಅಧಿಸೂಚನೆಗೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ. ಬಳಿಕ ಅಂತಿಮ ಅಧಿಸೂಚನೆ ಪ್ರಕಟವಾಗಲಿದೆ.
ಸಹಾಯಕ, ಪ್ರಥಮ ದರ್ಜೆ ಸಹಾಯಕ ಸಮಾನ ಹುದ್ದೆಗಳ ನೇರ ನೇಮಕಾತಿಗೆ ಪದವಿ ಹಾಗೂ ಕಿರಿಯ ಸಹಾಯಕ, ದ್ವಿತೀಯ ದರ್ಜೆ ಸಹಾಯಕ ಸಮಾನ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆಯನ್ನು ನಿಗದಿಪಡಿಸಿದೆ.

ಇಲಾಖೆ ಜತೆ ಚರ್ಚಿಸಿ ಪಠ್ಯಕ್ರಮ

ಪತ್ರಿಕೆ-1ಕ್ಕೆ ಪದವಿಗಿಂತ ಕಡಿಮೆ ಶೈಕ್ಷಣಿಕ ಅರ್ಹತೆಯ ಅಗತ್ಯವಿರುವ ಹುದ್ದೆಗಳಿಗೆ ನಿರ್ದಿಷ್ಟ ಪಠ್ಯಕ್ರಮವನ್ನು ಸೂಚಿಸುವಂತೆ ಉಲ್ಲೇಖಿಸಿದೆ. ಪತ್ರಿಕೆ-2 ಪಠ್ಯಕ್ರಮವನ್ನು ಹುದ್ದೆಯ ಸ್ವರೂಪ ಮತ್ತು ಅಗತ್ಯವಿರುವ ಶೈಕ್ಷಣಿಕ ಅರ್ಹತೆಯನ್ನು ಪರಿಗಣಿಸಿ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರು ಅಥವಾ ನೇಮಕಾತಿ ಪ್ರಾಧಿಕಾರದೊಂದಿಗೆ ಸಮಾಲೋಚನೆ ನಡೆಸಿದ ನಂತರ ಆಯ್ಕೆ ಪ್ರಾಧಿಕಾರವು ನಿರ್ಧರಿಸುವಂತೆ ತಿಳಿಸಲಾಗಿದೆ.

ಋಣಾತ್ಮಕ ಅಂಕಗಳು

ಸ್ಪರ್ಧಾತ್ಮಕ ಪರೀಕ್ಷೆಯ ಎರಡೂ ಪತ್ರಿಕೆಗಳಿಗೂ ಋಣಾತ್ಮಕ ಅಂಕಗಳು ಅನ್ವಯವಾಗಲಿವೆ. ಪ್ರತಿ ತಪ್ಪು ಉತ್ತರಕ್ಕೆ ಆಯಾ ಪ್ರಶ್ನೆಗೆ ನಿಗದಿಪಡಿಸಿರುವ ಅಂಕಗಳ ನಾಲ್ಕನೇ ಒಂದು ಭಾಗದಷ್ಟು ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. ಈ ಹಿಂದಿನ ನೇಮಕಾತಿ ಅಧಿಸೂಚನೆಗಳಲ್ಲಿ ಋಣಾತ್ಮಕ ಅಂಕಗಳನ್ನು ಉಲ್ಲೇಖಿಸಿರಲಿಲ್ಲ.

ಕನಿಷ್ಠ ಅರ್ಹತಾ ಅಂಕ ನಿಗದಿ

ಅಭ್ಯರ್ಥಿಯು ಗಳಿಸಿರುವ ಒಟ್ಟು ಅಂಕಗಳ ಶೇಕಡವಾರು ಆಧಾರದ ಮೇಲೆ ನಿರ್ಧರಿಸಲಾದ ಮೆರಿಟ್ ಕ್ರಮದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಅರ್ಹತೆ ಪಡೆಯಲು ಕನಿಷ್ಠ ಶೇ.35 ಅಂಕಗಳನ್ನು ಗಳಿಸಿರಬೇಕು.

2 ಗಂಟೆ ಅವಧಿ ನಿಗದಿ

ಹಿಂದಿನ ನೇಮಕಾತಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ 90 ನಿಮಿಷಗಳನ್ನು ನಿಗದಿ ಮಾಡಲಾಗಿತ್ತು. ಆದರೆ, ಅದನ್ನು ಎರಡು ತಾಸಿಗೆ ವಿಸ್ತರಿಸಲಾಗುತ್ತಿದೆ. ಪ್ರತಿ ಪತ್ರಿಕೆಗೆ ಗರಿಷ್ಠ 120 ನಿಮಿಷಗಳನ್ನು ನೀಡುವಂತೆ ತಿಳಿಸಲಾಗಿದೆ.

ಯಾವುದೇ ಭಾಗದಲ್ಲಿ ಸೇವೆ

ನೇಮಕಾತಿ ಆದೇಶಗಳನ್ನು ನೀಡಲಾದ ಅಭ್ಯರ್ಥಿಗಳು ಕಾಲಮಿತಿಯಲ್ಲಿ ಕರ್ತವ್ಯಕ್ಕೆ ಹಾಜರಾಗಗಿದ್ದಲ್ಲಿ ಅಂತಹ ಅಭ್ಯರ್ಥಿಗಳ ಬದಲಿಗೆ ಆಯ್ಕೆ ಪ್ರಾಧಿಕಾರವು ಸಿದ್ಧಪಡಿಸಿದ ಹೆಚ್ಚುವರಿ ಪಟ್ಟಿಯಿಂದ ಅಭ್ಯರ್ಥಿಗಳನ್ನು ನಿಯೋಜಿಸಲಿದೆ. ಆಯ್ಕೆಯಾದ ಅಭ್ಯರ್ಥಿಗಳು ರಾಜ್ಯದ ಯಾವುದೇ ಭಾಗದಲ್ಲಿ ಸೇವೆ ಸಲ್ಲಿಸಲು ಸಿದ್ಧರಿರಬೇಕು ಎಂದು ಸ್ಪಷ್ಟಪಡಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net