ಖಾಲಿ ಇರುವ 72 ಸಾವಿರ ಹುದ್ದೆಗಳ ಭರ್ತಿಗೆ ಅಧಿಸೂಚನೆ

Deputy Chief Minister Dr. G. Parameshwara inaugurated the 6th ‘State Level Unity Conference’ held at the city’s Palace Grounds on Friday. Buddhist monk Pujya Manorakkitha Banteji of Chetavan Vihara in Kollegal, Social Welfare Minister K.H. Muniyappa, MLAs A.R. Krishnamurthy, B. Devendraappa, former minister H. Anjaneya and others were present.
Deputy Chief Minister Dr. G. Parameshwara inaugurated the 6th ‘State Level Unity Conference’ held at the city’s Palace Grounds on Friday. Buddhist monk Pujya Manorakkitha Banteji of Chetavan Vihara in Kollegal, Social Welfare Minister K.H. Muniyappa, MLAs A.R. Krishnamurthy, B. Devendraappa, former minister H. Anjaneya and others were present.
Published on

ಪ್ರಮುಖ ಮುಖ್ಯಾಂಶಗಳು

  • * ಡಿಸಿಎಂ ಡಾ.ಜಿ. ಪರಮೇಶ್ವರ್ ಮಾಹಿತಿ
  • * ಅರಮನೆ ಮೈದಾನದಲ್ಲಿ 6ನೇ ‘ರಾಜ್ಯಮಟ್ಟದ ಐಕ್ಯತಾ ಸಮಾವೇಶ’

ಬೆಂಗಳೂರು:

ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 72 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗುತ್ತಿದ್ದು, ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರದ ಹಂತದಲ್ಲಿ ಚರ್ಚೆ ನಡೆಯುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಮನ್ವಯ ಸಮಿತಿ ನಗರದ ಅರಮನೆ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ 6ನೇ ‘ರಾಜ್ಯಮಟ್ಟದ ಐಕ್ಯತಾ ಸಮಾವೇಶ’ಕ್ಕೆ ಚಾಲನೆ ನೀಡಿ ಮಾತನಾಡಿದರು. ಹಿಂದೆ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹೋರಾಟ ಮಾಡಿ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಲಾಗಿತ್ತು. ಈಗ ಡಿ.ಕೆ.ಶಿವಕುಮಾರ್ ಅವರೊಂದಿಗೆ ಮಾತನಾಡಿ ಬ್ಯಾಕ್‌ಲಾಗ್ ಹುದ್ದೆಗಳನ್ನು ತುಂಬಲಾಗುವುದು ಎಂದರು.
ಶಕ್ತಿ ಪ್ರದರ್ಶನ ಆಗಬೇಕು:
ಸರ್ಕಾರಿ ನೌಕರರ ಸಮಾವೇಶದಲ್ಲಿ ನಿಮಗೆ ಪ್ರಾಶಸ್ತ್ಯ ನೀಡಬೇಕಿತ್ತು. ಎಸ್‌ಸಿ, ಎಸ್‌ಟಿ ಸಮುದಾಯದಲ್ಲಿ ಲಕ್ಷಕ್ಕೂ ಹೆಚ್ಚು ನೌಕರರಿದ್ದರು, ನಿಮ್ಮ ಸಮಸ್ಯೆಗಳನ್ನು ಬೇಡಿಕೆಯಾಗಿ ಮುಖ್ಯಮಂತ್ರಿಗಳಿಗೆ ನೀಡಲಿಲ್ಲ. ನಿಮ್ಮ ಶಕ್ತಿ ಪ್ರದರ್ಶನ ಸಾಲುವುದಿಲ್ಲ. ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಂಘಟನೆ ಮತ್ತಷ್ಟು ಗಟ್ಟಿಯಾಗಬೇಕು. ತೀರ್ಮಾನಗಳನ್ನು ತೆಗೆದುಕೊಳ್ಳುವವರಿಗೆ ತಲುಪಬೇಕು. ಅದಕ್ಕೆ ನಿಮ್ಮ ಶಕ್ತಿ ಪ್ರದರ್ಶನ ಆಗಬೇಕು. ಎಲ್ಲರೂ ಒಟ್ಟಾಗಿ ಸಮಾವೇಶ ಮಾಡಿದರೆ ನಿಜವಾದ ಅರ್ಥ ಬರುತ್ತದೆ ಎಂದು ಸಚಿವರು ಹೇಳಿದರು.
ಶುದ್ಧೀಕರಣಕ್ಕೆ ಬೇಸರ:
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಶಕ್ತಿ ನಿಮಗೆ ಅರ್ಥವಾಗಿಲ್ಲ. ಮೀಸಲಾತಿಯಿಂದ ನೌಕರಿ ಸಿಕ್ಕಿದೆ. ಸಂಬಳ ಬರುತ್ತದೆ. ಹೆಂಡತಿ ಮಕ್ಕಳನ್ನು ಸಾಕುತ್ತೇವೆ ಎಂದರೆ ಸಾಲದು. ಸಮುದಾಯ ಇಂದಿನವರೆಗೂ ಶೋಷಿತ ಸಮುದಾಯವಾಗಿ ಉಳಿದಿರುವ ಬಗ್ಗೆ ಚಿಂತಿಸಬೇಕಿದೆ ಎಂದ ಅವರು, ಯಾರು ಒಪ್ಪಲಿ ಬಿಡಲಿ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಅಂತಹ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿದ ವೇದಿಕೆಯನ್ನು ಶುದ್ಧೀಕರಣ ಮಾಡಿದರು. ಮಾಜಿ ಪ್ರಧಾನಿ ಬಾಬು ಜಗಜೀವನ್ ರಾಂ ಅವರು ಬನಾರಸ್ ವಿಶ್ವವಿದ್ಯಾಲಯದಲ್ಲಿ ಮದನ್ ಮೋಹನ್ ಮಾಳವೀಯ ಪ್ರತಿಮೆ ಉದ್ಘಾಟಿಸಿದ ಬಳಿಕ ಜಾಗವನ್ನು ಶುದ್ಧೀಕರಣ ಮಾಡಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.
ಬಡ ಮಕ್ಕಳಿಗೆ ಶಿಕ್ಷಣ ಕೊಡಿಸಿ:
ಸಮಾಜದಿಂದ ಪಡೆಯುವುದಷ್ಟೇ ಅಲ್ಲ. ಸಮಾಜಕ್ಕೆ ಏನನ್ನು ಕೊಡಬೇಕು ಎಂಬುದನ್ನು ಯೋಚಿಸಿ. ಬಡವರ ಮಕ್ಕಳನ್ನು ದತ್ತು ಪಡೆದು ಶಿಕ್ಷಣ ಕೊಡಿಸಿ, ಅವರನ್ನೂ ಇಂಜಿನಿಯರ್, ವೈದ್ಯರನ್ನಾಗಿ ಮಾಡಿಸಿ. ಶೋಷಿತ ಸಮುದಾಯದ ಬಹುತೇಕ ಮಕ್ಕಳು ಶೇ.90 ಅಧಿಕ ಅಂಕ ಪಡೆಯುತ್ತಿದ್ದಾರೆ. ಅವರಿಗೆ ಇನ್ನಷ್ಟು ಪ್ರೋತ್ಸಾಹ, ಉತ್ತೇಜನ ನೀಡಿದರೆ ಸಾಮಾನ್ಯ ವರ್ಗದಲ್ಲಿ ನೌಕರಿ ಪಡೆದು, ಸಮಾಜದಲ್ಲಿ ಮುಂದೆ ಬರುತ್ತಾರೆ ಎಂದರು.
ಈ ವೇಳೆ ಕೊಳ್ಳೇಗಾಲದ ಚೇತವನ ವಿಹಾರದ ಬೌದ್ಧಬಿಕ್ಕು ಮನೋರಕ್ಕಿತ ಬಂತೇಜಿ, ಸಮಾಜ ಕಲ್ಯಾಣ ಸಚಿವ ಕೆ.ಎಚ್.ಮುನಿಯಪ್ಪ, ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಬಿ.ದೇವೇಂದ್ರಪ್ಪ, ಮಾಜಿ ಸಚಿವ ಎಚ್.ಆಂಜನೇಯ, ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿ. ನರೇಂದ್ರ, ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಮನ್ವಯ ಸಮಿತಿಯ ಅಧ್ಯಕ್ಷ ಡಿ.ಶಿವಶಂಕರ್ ಇತರರು ಇದ್ದರು.

ಸಮುದಾಯದ ಎಲ್ಲ ಸಚಿವರು ಮತ್ತು ಶಾಸಕರು ಬಂದಿದ್ದರೆ, ಸಮಾವೇಶಕ್ಕೆ ಬಲ ಬರುತ್ತಿತ್ತು. 1.20 ಲಕ್ಷ ಎಸ್‌ಸಿ, ಎಸ್‌ಟಿ ನೌಕರರಿದ್ದಾರೆ. ಸಮಾವೇಶದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ನಮಗೆ ಕಷ್ಟ ಇದೆ. ನಾವು ಒಗ್ಗಟ್ಟಾಗಬೇಕು ಎಂಬ ಮನೋಭಾವ ಇಲ್ಲದೆ ಹೋದರೆ ಹೇಗೆ?

— ಡಾ.ಜಿ. ಪರಮೇಶ್ವರ, ಉಪ ಮುಖ್ಯಮಂತ್ರಿ



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net