ತೋಟದ ಮನೆಗಳಿಗೆ ವಿದ್ಯುತ್ ನೀಡುವುದು ಕಡಿತಗೊಳಿಸುವ ನಿರ್ಧಾರ ಖಂಡಿಸಿ ಸೇಡಂ ಜೆಸ್ಕಾಂ ಕಚೇರಿ ಎದುರ ರೈತ ಸಂ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಶಾಂತಕುಮಾರ ಚನ್ನಕ್ಕಿ, ರವಿ ಪಾಟೀಲ್ ಸೂರವಾರ, ಅಮಶೆಟ್ಟಿ ಪಾಟೀಲ್, ಅಮರ ಪಾಟೀಲ್ ಸೇರಿದಂತೆ ಇನ್ನಿತರರಿದ್ದರು.
ಸೇಡಂ ಜೆಸ್ಕಾಂ ಕಚೇರಿ ಮುಂಭಾಗದಲ್ಲಿ ರೈತ ಸಂಘದಿಂದ ಪ್ರತಿಭಟನೆ
ಸೇಡಂ: ಸರ್ಕಾರ ವಿದ್ಯುತ್ ಉಳಿತಾಯದ ನೆಪದಲ್ಲಿ ತೋಟದ ಮನೆಗಳಿಗೆ ವಿದ್ಯುತ್ ಸರಬರಾಜಿನಲ್ಲಿ ಕಡಿತಗೊಳಿಸುವ ನಿರ್ಧಾರ ತೆಗೆದುಕೊಂಡಿರುವದು ಖಂಡನಾರ್ಹವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಶಾಂತಕುಮಾರ ಚನ್ನಕ್ಕಿ ದೂರಿದರು.
ರೈತರ ತೋಟದ ಮನೆಗೆ ನೀಡಲಾಗುತ್ತಿದ್ದ ಸಿಂಗಲ್ ಫೇಸ್ ವಿದ್ಯುತ್ ಸರಬರಾಜಿನಲ್ಲಿ ಕಡಿತಗೊಳಿಸುವ ನಿರ್ಧಾರ ಖಂಡಿಸಿ ಜೆಸ್ಕಾಂ ಕಚೇರಿ ಮುಂಭಾಗದಲ್ಲಿ ಭಾನುವಾರ ಪ್ರತಿಭಟನೆ ನಡೆಸಿ, ವಿಧಾನಸೌಧ ಸೇರಿ ರಾಜ್ಯದ ಎಲ್ಲ ಕಚೇರಿಗಳಲ್ಲಿನ ಎಸಿ, ಫ್ಯಾನ್ ಬಳಕೆ ನಿಲ್ಲಿಸುವ ಮೂಲಕ ವಿದ್ಯುತ್ ಉಳಿತಾಯ ಮಾಡಿ ರೈತರಿಗೆ ನೀಡುವ ಕೆಲಸ ಆಗಬೇಕು. ರಾಜ್ಯ ಸರ್ಕಾರ ರ್ನಿದಿಷ್ಟ ಅವಧಿಗೆ ತ್ರೀ ಫೇಸ್ ವಿದ್ಯುತ್ ನೀಡಿ ಉಳಿದ ಸಮಯದಲ್ಲಿ ಸಿಂಗಲ್ ಫೇಸ್ ನೀಡಬೇಕಿತ್ತು. ಆದರೆ ರೈತರಿಗೆ ನೀಡುತ್ತಿದ್ದ ಸಿಂಗಲ್ ಫೇಸ್ ಕಡಿತಗೊಳಿಸಲಾಗಿದೆ. ಇದರಿಂದ ತೋಟದ ಮನೆಯಲ್ಲಿನ ರೈತರು ಕತ್ತಲಲ್ಲಿ ವಾಸಿಸಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಕಿಡಿಕಾರಿದರು.
ಜೆಸ್ಕಾಂ ಇಇ ಪರಮೇಶ್ವರ ಸ್ಥಳಕ್ಕೆ ಆಗಮಿಸಿ, ಅಧಿಕ್ಷಕ ಇಂಜಿನಿಯರ್ ಅವರಿಗೆ ವಿಡಿಯೋ ಕರೆಯ ಮೂಲಕ ರೈತರೊಂದಿಗೆ ಮಾತನಾಡಿಸಿದರು. ಬರುವ 30ನೇ ತಾರೀಖಿನವರೆಗೆ ಪ್ರಸ್ತುತ ಸ್ಥಿತಿ ಮುಂದುವರೆಯಲಿದೆ. ನಂತರ ಸರ್ಕಾರದ ಮಾರ್ಗಸೂಚಿಯಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ವಿವರಿಸಿದರು.