ಪೌತಿ ಖಾತೆಗೆ ಹೊಸ ಮಾರ್ಗಸೂಚಿ

ವಿಧಾನಸೌಧ
ವಿಧಾನಸೌಧ
Published on
ಬೆಂಗಳೂರು: ಕೃಷಿ ಜಮೀನು ಪೌತಿ ಖಾತೆ ಮಾಡುವಾಗ ವಾರಸುದಾರರು ಹೊರರಾಜ್ಯದಲ್ಲಿ ಅಥವಾ ವಿದೇಶದಲ್ಲಿ ಖಾಯಂ ನಿವಾಸಿಗಳಾಗಿರುವ ಪ್ರಕರಣಗಳಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಕಂದಾಯ ಇಲಾಖೆ ಮಾರ್ಗಸೂಚಿಯನ್ನು ಹೊರಡಿಸಿದೆ.
ಕರ್ನಾಟಕದಲ್ಲಿ ಕೃಷಿ ಭೂಮಿ ಹೊಂದಿರುವ ಮೃತ ಖಾತೆದಾರರ ವಾರಸುದಾರರು ಹೊರ ರಾಜ್ಯದಲ್ಲಿ ಖಾಯಂ ನಿವಾಸಿಯಾಗಿರುವ ಹಾಗೂ ಆಧಾರ್ ದಾಖಲೆಯಂತೆ ಹೊರ ರಾಜ್ಯದ ವಿಳಾಸ ಇರುವ ವಾರಸುದಾರರು ಪೌತಿ ಖಾತೆಗೆ ಅರ್ಜಿ ಸಲ್ಲಿಸುವಾಗ ಈ ಮಾರ್ಗಸೂಚಿ ಅನ್ವಯ ಆಗಲಿದೆ. ಪೌತಿ ಖಾತೆಗೆ ಕೋರುವ ಅರ್ಜಿದಾರರು ವಾಸಿಸುವ ರಾಜ್ಯದಲ್ಲಿ ಸಕ್ಷಮ ಪ್ರಾಧಿಕಾರದಿಂದ ಡಿಜಿಟಲ್ ರೂಪದಲ್ಲಿ ಪಡೆದ ವಂಶವೃಕ್ಷ ಪ್ರಮಾಣಪತ್ರದ ಪ್ರತಿ, ಕಾನೂನುಬದ್ದ ವಾರಸುದಾರರು ಪ್ರಮಾಣಪತ್ರ /ಸಿವಿಲ್ ನ್ಯಾಯಾಲಯದಿಂದ ಪಡೆದ ಕಾನೂನುಬದ್ದ
ವಾರಸುದಾರರ ಪ್ರಮಾಣಪತ್ರ ಸಲ್ಲಿಸಬೇಕು. ಈ ಎಲ್ಲ ದಾಖಲೆಗಳು ಇಂಗ್ಲೀಷ್ ಭಾಷೆಯಲ್ಲಿ ಅನುವಾದ ಮಾಡಿರುವ ಪ್ರತಿ ಮತ್ತು ವಾಸಿಸುವ ರಾಜ್ಯದಲ್ಲಿ ಸಕ್ಷಮ ಪ್ರಾಧಿಕಾರದಿಂದ ಪಡೆದಿರುವುದಾಗಿ ನೋಟರಿಯವರಿಂದ ಪ್ರಮಾಣೀಕರಿಸಿರುವ ಅಫಿಡವಿಟ್ (ರೂ.100) ಸಲ್ಲಿಸುವುದು ಕಡ್ಡಾಯವಾಗಿದೆ.
ವಂಶವೃಕ್ಷದಲ್ಲಿ ನಮೂದಾಗಿರುವ ಕುಟುಂಬದ ಎಲ್ಲ ವಾರಸುದಾರರು ಕಡ್ಡಾಯವಾಗಿ ಆಧಾರ್ ಕಾರ್ಡ್ ದಾಖಲೆಯನ್ನು ಸಲ್ಲಿಸುವುದು. ವಾರಸುದಾರರು ವಿದೇಶಿ ಪೌರತ್ವ ಹೊಂದಿದ್ದಲ್ಲಿ ಆಧಾರ್ ಬದಲಾಗಿ ಪಾಸ್ ಪೋರ್ಟ್ ದಾಖಲೆಯನ್ನು ಸಲ್ಲಿಸಬಹುದು. ಈ ಎಲ್ಲ ದಾಖಲೆಯನ್ನು ಪೌತಿ ಖಾತೆ ಬದಲಾವಣೆ ಉದ್ದೇಶಕ್ಕೆ ಬಳಸಬಹುದು. ಕುಟುಂಬದ ಎಲ್ಲ ವಾರಸುದಾರರ ಆಧಾರ್ ಇ-ಕೆವೈಸಿ (ಒಟಿಪಿ/ಬಯೋಮೆಟ್ರಿಕ್) ಕಡ್ಡಾಯವಾಗಿದೆ. ಕರ್ನಾಟಕದಲ್ಲಿ ಪ್ರತ್ಯೇಕವಾಗಿ ವಂಶವೃಕ್ಷ ನೀಡಲು ಅವಕಾಶ ಇರುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಮೃತ ಖಾತೆದಾರರ ವಾರಸುದಾರರು ವಿದೇಶದ ಪೌರತ್ವವನ್ನು ಹೊಂದಿದ್ದು, ತಮ್ಮ ವಾರಸುದಾರಿಕೆ ಹಕ್ಕಿನ ಪೌತಿ ಖಾತೆಗೆ ಅರ್ಜಿ ಸಲ್ಲಿಸಿದಾಗ ವಿಶೇಷ ನಿಯಮಗಳನ್ನು ಪಾಲನೆ ಮಾಡಬೇಕಾಗಿದೆ.
ಮೂಲತಃ ಭಾರತೀಯ ಕುಟುಂಬದವರಾಗಿದ್ದು, ಕರ್ನಾಟಕದಲ್ಲಿ ಹೊಂದಿರುವ ಕೃಷಿ ಜಮೀನಿಗೆ ಪೌತಿ ಖಾತೆ ಕೋರುವವರು ವಿದೇಶದ ಪೌರತ್ವವನ್ನು ಪಡೆದಿದ್ದರೇ ವಾರಸುದಾರರ ಪ್ರಮಾಣ ಪತ್ರ ಪಡೆದು ನಾಡಕಚೇರಿಗೆ ಖುದ್ದಾಗಿ ಅರ್ಜಿಯನ್ನು ಸಲ್ಲಿಸಬೇಕು. ವಾರಸುದಾರರ ಪ್ರಮಾಣ ಪತ್ರವನ್ನು ಮತ್ತು ಮೃತ ಖಾತೆದಾರರ ಮರಣ ಪ್ರಮಾಣ ಪತ್ರವನ್ನು ಸಕ್ಷಮ ಪ್ರಾಧಿಕಾರದಿಂದ ಪಡೆದಿರುವುದಾಗಿ ನೋಟರಿ ಪ್ರಮಾಣೀಕರಿಸಿರುವ ಅಫಿಡವಿಟ್ ಸಲ್ಲಿಸಬೇಕು. ಪಾಸ್ ಪೋರ್ಟ್ ಪ್ರತಿ, ತನ್ನ ಕುಟುಂಬದ ವಂಶವೃಕ್ಷದ ಕುರಿತು ಅಫಿಡವಿಟ್ ಸಲ್ಲಿಕೆ ಕಡ್ಡಾಯವಾಗಿದೆ. ಹೆಚ್ಚಿನ ಮಾಹಿತಿಗಾಗಿ ಗ್ರಾಮ ಆಡಳಿತ ಅಧಿಕಾರಿ ಅಥವಾ ರಾಜಸ್ವ ನಿರೀಕ್ಷಕರನ್ನು ಸಂಪರ್ಕಿಸಬೇಕೆಂದು ಕಂದಾಯ ಇಲಾಖೆ ಸೂಚಿಸಿದೆ.

ಇ-ಪೌತಿ ತಂತ್ರಾಂಶದಲ್ಲಿ ವಿತರಣೆ

ಹೊರರಾಜ್ಯ ಮತ್ತು ವಿದೇಶದಲ್ಲಿ ವಾಸವಿರುವ ವಾರಸುದಾರರ ಪೌತಿ ಖಾತೆ ಮನವಿ ಬಂದರೆ ನಾಡಕಚೇರಿಯಲ್ಲಿ ಭೂಮಿ ತಂತ್ರಾಂಶದಲ್ಲಿ ಅರ್ಜಿ ಅಪ್‌ಲೋಡ್ ಮಾಡಬೇಕು. ಗ್ರಾಮ ಆಡಳಿತಾಧಿಕಾರಿಗಳು, ಇ-ಪೌತಿ ತಂತ್ರಾಂಶದ ಲಾಗಿನ್‌ನಲ್ಲಿ ಪೌತಿ ಖಾತೆಗೆ ಅರ್ಜಿ ನಮೂದಿಸಬೇಕು. ನಂತರ ನಿಯಮಾನುಸಾರ ಪೌತಿ ಖಾತೆ ನೀಡಲು ಕ್ರಮ ವಹಿಸಬೇಕು. ಇದಕ್ಕಾಗಿ ಇ-ಪೌತಿ ತಂತ್ರಾಂಶವನ್ನು ಮಾರ್ಪಾಡು ಮಾಡಲಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net