ವೈಯಕ್ತಿಕ ಶುಚಿತ್ವದಲ್ಲಿ ಅಸಡ್ಡೆ ಸಲ್ಲದು

 ಹುಣಸೂರು ನಗರದ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಜಿ.ಗಿರಿದಾಸ್ ವಿದ್ಯಾರ್ಥಿಗಳಿಗೆ ಜಂತುಹುಳು ನಿವಾರಕ ಮಾತ್ರೆ ನೀಡಿದರು. ಮುಖ್ಯಶಿಕ್ಷಕ ಸಿ.ಎಸ್.ಮಹೇಶ್, ರೋಟರಿ ಅಧ್ಯಕ್ಷ  ಶಾಮಣ್ಣ ಧರ್ಮಾಪುರ, ಟಿಎಚ್‌ಇ ರಾಜೇಶ್ವರಿ ಇತರರಿದ್ದರು.
ಹುಣಸೂರು ನಗರದ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಜಿ.ಗಿರಿದಾಸ್ ವಿದ್ಯಾರ್ಥಿಗಳಿಗೆ ಜಂತುಹುಳು ನಿವಾರಕ ಮಾತ್ರೆ ನೀಡಿದರು. ಮುಖ್ಯಶಿಕ್ಷಕ ಸಿ.ಎಸ್.ಮಹೇಶ್, ರೋಟರಿ ಅಧ್ಯಕ್ಷ ಶಾಮಣ್ಣ ಧರ್ಮಾಪುರ, ಟಿಎಚ್‌ಇ ರಾಜೇಶ್ವರಿ ಇತರರಿದ್ದರು.
Published on

ಹುಣಸೂರು:

ವಿದ್ಯಾರ್ಥಿಗಳು ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಅಭ್ಯಾಸವನ್ನು ಈಗಿಂದಲೇ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಜಿ.ಗಿರಿದಾಸ್ ಸಲಹೆ ನೀಡಿದರು.


ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ರೋಟರಿ ಸಂಸ್ಥೆ ಹುಣಸೂರು ಸಹಯೋಗದಲ್ಲಿ ನಗರದ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಜಂತುಹುಳು ಮಾತ್ರೆ ವಿತರಿಸಿ ಮಾತನಾಡಿದರು.


ವೈಯಕ್ತಿಕ ಸ್ವಚ್ಛತೆ ಮತ್ತು ಪರಿಸರ ಶುಚಿತ್ವ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅದರಲ್ಲೂ ಮುಖ್ಯವಾಗಿ 1ರಿಂದ 19ವರ್ಷದೊಳಗಿನ ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಸ್ವಚ್ಛತೆ ನಿರ್ವಹಣೆಯಲ್ಲಿ ಅಸಡ್ಡೆ ತೋರಬಾರದು. ಅಶುಚಿತ್ವವೇ ನಿಮ್ಮ ದೇಹದಲ್ಲಿ ಜಂತುಹುಳುಗಳ ಇರುವಿಕೆಗೆ ಕಾರಣವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಕೈಯಲ್ಲಿರುವ ಉಗುರುಗಳನ್ನು ಆಗಾಗ ಕತ್ತರಿಸಿ ಶುಚಿಯಾಗಿಟ್ಟುಕೊಳ್ಳಬೇಕು. ಶುದ್ಧ ಕುಡಿಯುವ ನೀರಿನ ಸೇವನೆ, ಮನೆಯಲ್ಲಿ ಆಹಾರಗಳನ್ನು ಮುಚ್ಚಿಡುವುದು, ಹಣ್ಣು ಮತ್ತು ತರಕಾರಿಗಳನ್ನು ಶುದ್ಧ ನೀರಿನಿಂದ ತೊಳೆದು ಉಪಯೋಗಿಸುವುದು, ಆಹಾರ ಸೇವಿಸುವ ಮೊದಲು, ಶೌಚಗೃಹವನ್ನು ಬಳಸಿದ ನಂತರ ಕೈಗಳನ್ನು ಸೋಪಿನಿಂದ ತೊಳೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಜಂತುಹುಳು ನಿಮ್ಮ ದೇಹಕ್ಕೆ ಸೇರಿ ಅಪೌಷ್ಟಿಕತೆ, ರಕ್ತಹೀನತೆಯಿಂದ ಬಳಲುವ ಮೂಲಕ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗಲಿದೆ. ತಾಲೂಕಿನ ಎಲ್ಲ ಸರ್ಕಾರಿ, ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಜಂತುಹುಳು ನಿವಾರಣಾ ಮಾತ್ರೆ ವಿತರಿಸಲಾಗುವುದು ಎಂದರು.


ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ ಮಾತನಾಡಿ, ತಾಲೂಕಿನಲ್ಲಿ 1ರಿಂದ 19ನೇ ವಯಸ್ಸಿನ ಒಟ್ಟು 63546 ವಿದ್ಯಾರ್ಥಿಗಳಿದ್ದು, ಈ ಪೈಕಿ 1-5 ವರ್ಷದ 15752 ಮಕ್ಕಳು ಅಂನವಾಡಿಗಳಲ್ಲಿದ್ದಾರೆ. ಅಂಗನವಾಡಿ ಬಿಟ್ಟ ಮಕ್ಕಳು (ಕಿಶೋರಿಯರು) 168 ಎಂದು ಗುರುತಿಸಲಾಗಿದೆ. ಮಿಕ್ಕಂತೆ ಶಾಲಾ ಕಾಲೇಜುಗಳಲ್ಲಿ 47384 ಮಕ್ಕಳು ಇದ್ದಾರೆ. ತಾಲೂಕಿನಾದ್ಯಂತ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ವಿದ್ಯಾರ್ಥಿಗಳಿಗೆ ಜಂತುಹುಳು ಮಾತ್ರೆ ವಿತರಿಸಲಾಗಿದ್ದು, ಮಕ್ಕಳು ಬಿಟ್ಟುಹೋಗಿದ್ದರೆ ಆ.17ರ ಮಾಪ್ ಅಪ್ ದಿನದಂದು ವಿತರಿಸಲಾಗುವುದು ಎಂದರು.


ಕ್ಷೇತ್ರ ಶಿಕ್ಷಣಾಧಿಕಾರಿ ಕಾಳನಾಯಕ, ಸಿಡಿಪಿಒ ಸಿ.ಬೋರೇಗೌಡ ರೋಟರಿ ಸಂಸ್ಥೆ ಅಧ್ಯಕ್ಷ ರೊ.ಶಾಮಣ್ಣ ಧರ್ಮಾಪುರ ಮಾತನಾಡಿದರು. ಮುಖ್ಯಶಿಕ್ಷಕ ಸಿ.ಎಸ್.ಮಹೇಶ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net