ಬೆಂಗಳೂರು: ಸಂಗೀತ, ಮಿದುಳು, ಮನಸ್ಸು ಮತ್ತು ಆರೋಗ್ಯಕೇಂದ್ರ ಸ್ಥಾಪಿಸಲು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಹಾಗೂ ಮರ್ಕ್ಯುರಿ ಫೌಂಡೇಷನ್ ಒಡಂಬಡಿಕೆ ಮಾಡಿಕೊಂಡಿವೆ. ಹಿರಿಯ ಸಂಗೀತ ನಿರ್ದೇಶಕ ಇಳೆಯರಾಜ ಅವರ ಸಹಕಾರ- ಮಾರ್ಗದರ್ಶನದಲ್ಲಿ ಈ ಕೇಂದ್ರ ನಿರ್ಮಾಣವಾಗುತ್ತಿದ್ದು, ಈ ಕೇಂದ್ರದಲ್ಲಿ ಸಂಗೀತ, ನರವಿಜ್ಞಾನ, ಮಾನಸಿಕ ಆರೋಗ್ಯ ಹಾಗೂ ಸಮಗ್ರ ಆರೋಗ್ಯ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳಲಾಗುವುದು. ಈ ಕ್ಷೇತ್ರಗಳಲ್ಲಿ ಕೇಂದ್ರವು ಶಿಕ್ಷಣ ನೀಡುವುದರ ಜತೆಗೆ, ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಲಿದೆ ಎಂದು ನಿಮ್ಹಾನ್ಸ್ ತಿಳಿಸಿದೆ. ಸಂಗೀತವು ಮಾನಸಿಕ ಆರೋಗ್ಯ ವೃದ್ಧಿಗೆ ಸಹಕಾರಿಯಾಗಿದ್ದು, ಪುರಾವೆ ಆಧಾರಿತ ವಿಧಾನಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಕಲೆ ಮತ್ತು ನರವಿಜ್ಞಾನದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನ ಬಳಕೆಯ ಜತೆಗೆ ಸಂಶೋಧನೆ, ಕ್ಲಿನಿಕಲ್ ಟ್ರಯಲ್ ಸಹ ನಡೆಸಲಾಗುವುದು ಎಂದು ಹೇಳಲಾಗಿದೆ.