ಕಲಬುರಗಿ ಕನ್ನಡ ಭವನದಲ್ಲಿ ಎಸ್.ಎಸ್.ಕುಮುದಿನಿಬಾಯಿ ಮಿಟ್ಟಿಮನಿ (ಸ್ಮರಣಾರ್ಥ) ಹಾಗೂ ನಾದಪ್ರಿಯ ಫ್ರೆಂಡ್ಸ್ ಗ್ರೂಪ್ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಗಾಯಕನೊಬ್ಬ ಗಾಯನ ಪ್ರಕಾರ ಹಲವು ಎಂಬ ಸಂಗೀತ ಕಾರ್ಯಕ್ರಮದಲ್ಲಿ ಎಂ.ಬಿ.ಪಾಟೀಲ್, ಪ್ರೊ.ಅಬ್ದುಲ್ ರಬ್ ಉಸ್ತಾದ್, ಕೆ.ಪಿ.ಗಿರಿಧರ್, ರಮೇಶ ಜೋಶಿ, ಜಯರಾವ ಕುಲಕರ್ಣಿ, ಪ್ರಕಾಶ ಕುಲಕರ್ಣಿ, ಡಾ.ಅಂಬುಜಾ ಮಳಖೇಡಕರ್ ಇತರರಿದ್ದರು.
ಕಲಬುರಗಿ: ಸಂಗೀತ ಮನಸ್ಸಿಗೆ ಶಾಂತಿ, ನೆಮ್ಮದಿ ನೀಡಿ ಜೀವನದಲ್ಲಿ ಹುಮ್ಮಸ್ಸು ನೀಡಲು ಸಹಕಾರಿ. ಈ ಭಾಗದ ಅನೇಕ ಕಲಾವಿದರಿಗೆ ಆಕಾಶವಾಣಿ ಹಾಗೂ ದೂರದರ್ಶನ ಒಳ್ಳೆಯ ಅವಕಾಶ ನೀಡಿ ಸಂಗೀತ,ಕಲೆ, ಸಾಹಿತ್ಯ ಬೆಳೆಸಲು ನೆರವಾಗಿದೆ ಎಂದು ಕಲಬುರಗಿ ದೂರದರ್ಶನ ಕೇಂದ್ರದ ನಿವೃತ್ತ ನಿರ್ದೇಶಕ ಎಂ.ಬಿ.ಪಾಟೀಲ್ ಹೇಳಿದರು.
ನಗರದ ಕನ್ನಡ ಭವನದಲ್ಲಿ ಎಸ್.ಎಸ್.ಕುಮುದಿನಿಬಾಯಿ ಮಿಟ್ಟಿಮನಿ (ಸ್ಮರಣಾರ್ಥ) ಹಾಗೂ ನಾದಪ್ರಿಯ ಫ್ರೆಂಡ್ಸ್ ಗ್ರೂಪ್ ಸಹಯೋಗದಲ್ಲಿ ಮಂಗಳವಾರ ನಡೆದ ಗಾಯಕನೊಬ್ಬ ಗಾಯನ ಪ್ರಕಾರ ಹಲವು ಎಂಬ ಸಂಗೀತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
1980 ಚಲನಚಿತ್ರ ಸಂಗೀತದ ಅಪರೂಪ ಯುಗವಾಗಿತ್ತು. ಕಿಶೋರಕುಮಾರ್, ಲತಾ ಮಂಗೇಶ್ಕರ್, ಮಹಮ್ಮದ ರಫಿ ಸೇರಿ ಅನೇಕ ಕಲಾವಿದರ ಸಂಗೀತ, ಸಾಹಿತ್ಯ ಜನ ಮಾನಸದಲ್ಲಿ ಉಳಿದುಕೊಂಡಿದೆ. ಸಂಗೀತ ಆನಂದ, ಸಂತೋಷ ತಂದು ಕೊಡುವ ಮೂಲಕ ನಮ್ಮನ್ನು ಚಿಂತೆಯಿಂದ ದೂರ ಇಡಲು ಉತ್ತಮ ಔಷಧಿ. ಕರೋಕೆ ಯುಗದಲ್ಲಿ ಹಾಡುವವರೇ ಹೆಚ್ಚು. ಆದರೆ ಕೇಳುವವರೇ ಇಲ್ಲದಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಗುಲ್ಬರ್ಗ ವಿವಿ ನಿವೃತ್ತ ಪ್ರಾಧ್ಯಾಪಕ ಡಾ.ಅಬ್ಬುಲ್ ರಬ್ ಉಸ್ತಾದ್ ಮಾತನಾಡಿ, ಹಿಂದಿ ಚಲನಚಿತ್ರದಲ್ಲಿ ಮೊಹಮ್ಮದ್ ರಫಿ, ಕಿಶೋರ್ಕುಮಾರ, ಸಂಗೀತ ನಿರ್ದೇಶಕ ನೌಶಾದ್ ಉತ್ತಮ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.
ಕಲಬುರಗಿಯ ಹಿರಿಯ ಗಾಯಕ, ವಾಯ್ಸ್ ಆಫ್ ಕಿಶೋರ್ಕುಮಾರ್ ಖ್ಯಾತಿಯ ರಮೇಶ ಜೋಶಿ ಅವರು ಹಿಂದೂಸ್ತಾನಿ ಶಾಸಿಯ, ಸುಗಮ ಸಂಗೀತ, ಭಾವಗೀತೆ, ದಾಸರ ಪದಗಳು, ವಚನಗಳು, ಜಾನಪದ ಹಾಗೂ ಚಲನಚಿತ್ರ ಗೀತೆ ಸೇರಿ ವಿವಿಧ ಗಾಯನ ಪ್ರಕಾರಗಳನ್ನು ಏಕವ್ಯಕ್ತಿಯಾಗಿ ಪ್ರಸ್ತುತಪಡಿಸಿದರು.
ತಬಲಾ ವಾದಕ ಜಯರಾವ ಕುಲಕರ್ಣಿ, ಸಂಗೀತ ಕಲಾವಿದ ಪ್ರಕಾಶ ಕುಲಕರ್ಣಿ ಮುಖ್ಯ ಅತಿಥಿಯಾಗಿದ್ದರು. ಪ್ರಸಾದ ಅಷ್ಟಗಿ ನಿರೂಪಿಸಿದರು. ಕಲಬುರಗಿ ಸಂಗೀತ ಪ್ರಿಯರು, ಕಲಾರಸಿಕರು ಹಾಗೂ ಸಾರ್ವಜನಿಕರು ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸಿದರು. ನಾದಪ್ರಿಯ ಫ್ರೆಂಡ್ಸ್ ಗ್ರೂಪ್ ಅಧ್ಯ ಕೆ.ಪಿ.ಗಿರಿಧರ ಹಾಗೂ ಸಾಹಿತಿ ಡಾ.ಅಂಬುಜಾ ಮಳಖೇಡಕರ್ ಇತರರಿದ್ದರು.