ಕೃಷಿ ಪ್ರಧಾನವಾದ ಜಿಲ್ಲೆಯಾದ ಯಾದಗಿರಿಯಲ್ಲಿ 2.32 ಲ ರೈತರು 4.32 ಲ ಹೆಕ್ಟೇರ್ ಕೃಷಿ ಜಮೀನು ಹೊಂದಿದ್ದಾರೆ. 1ರಿಂದ 4 ಹೆಕ್ಟೇರ್ ಜಮೀನು ಹೊಂದಿರುವ ರೈತರೆ ಅಧಿಕ (2.11) ಪ್ರಮಾಣದಲ್ಲಿದ್ದಾರೆ. ಗೊಬ್ಬರ ಕೊರತೆ ಅತಿ ಸಣ್ಣ, ಸಣ್ಣ, ಮಧ್ಯಮ ಹಿಡುವಳಿದಾರರನ್ನು ಬಾಧಿಸುತ್ತಿದೆ. ಇಡೀ ಜಿಲ್ಲೆಗೆ ಮುಂಗಾರು ಹಂಗಾಮಿನ 6 ತಿಂಗಳಲ್ಲಿ 1.52 ಲ ಮೆಟ್ರಿಕ್ ಟನ್ ಗೊಬ್ಬರದ ಅಗತ್ಯವಿದೆ. ಅದರಲ್ಲಿ ಸಂಯುಕ್ತ ಗೊಬ್ಬರ 65,487 ಮೆಟ್ರಿಕ್ ಟನ್ ಮತ್ತು ಯೂರಿಯಾ ಬೇಡಿಕೆ 54,268 ಮೆಟ್ರಿಕ್ ಟನ್ ಇದೆ. ಉಳಿದಂತೆ ಡಿಎಪಿ 27,129, ಎಂಒಪಿ 3,018 ಹಾಗೂ ಎಸ್ಎಸ್ಪಿ 2,430 ಮೆಟ್ರಿಕ್ ಟನ್ ಗೊಬ್ಬರ ಬೆಳೆಗಳಿಗೆ ಬೇಕಿದೆ. ಸ್ಥಳಿಯವಾಗಿ ಅಂಗಡಿಗಳಲ್ಲಿ ಗೊಬ್ಬರ ಸಿಗದ ಕಾರಣ ರೈತರು ಬೇರೆ ಊರುಗಳಿಗೆ ಅಲೆಯುಂತಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ವ್ಯಾಪಾರಿಗಳು ಹೆಚ್ಚಿನ ದರದಲ್ಲಿ ಗೊಬ್ಬರ ಮಾರಾಟ ಮಾಡುವ ಮೂಲಕ ಬಡರೈತರಿಗೆ ಸಿಗದಂತಾಗಿದೆ.