ಬೆಂಗಳೂರು: ರಾಜ್ಯದಲ್ಲಿ ಮೋಡ ಬಿತ್ತನೆ ಲಿತಾಂಶ ಶೇ.18 ರಿಂದ 20 ಮಾತ್ರ ಇದೆ. ಈ ಬಾರಿ ಶೇ.30 ನಿರೀಕ್ಷೆ ಮಾಡಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ವಿಧಾನಸೌಧದಲ್ಲಿ ಮಂಗಳವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ಮಳೆ ಕೊರತೆ ನೀಗಿಸುವ ನಿಟ್ಟಿನಲ್ಲಿ ಮೋಡ ಬಿತ್ತನೆಗೆ ವೇಗ ನೀಡಲಾಗಿದೆ. ಈಗಾಗಲೇ 2 ಸಭೆಗಳನ್ನು ನಡೆಸಲಾಗಿದ್ದು, ಇಲಾಖೆಯ ಕಾರ್ಯದರ್ಶಿಗಳಿಗೂ ಸೂಚಿಸಲಾಗಿದೆ.
ಮಾನಿಟರಿಂಗ್ ಕಮಿಟಿ (ಮೇಲ್ವಿಚಾರಣಾ ಸಮಿತಿ), ಟೆಕ್ನಿಕಲ್ ಕಮಿಟಿ (ತಾಂತ್ರಿಕ ಸಮಿತಿ) ಹಾಗೂ ಫೀಲ್ಡ್ ಆಪರೇಷನ್ ಮತ್ತು ಇವ್ಯಾಲ್ಯೂಯೇಷನ್ ಕಮಿಟಿಗಳು (ಕಾರ್ಯಾಚರಣೆ ಹಾಗೂ ಮೌಲ್ಯಮಾಪನ ಸಮಿತಿ) ರಚನೆಯಾಗಲಿದ್ದು, ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಮೇಲ್ವಿಚಾರಣಾ ಸಮಿತಿಯ ಉಸ್ತುವಾರಿ ವಹಿಸಲಿದ್ದಾರೆ.
ತಾಂತ್ರಿಕ ಸಮಿತಿಯಲ್ಲಿ ಐಐಟಿ, ಐಐಎಸ್‌ಸಿ ಹಾಗೂ ಹವಾಮಾನ ಇಲಾಖೆ ತಜ್ಞರು ಇರಲಿದ್ದಾರೆ. ಸಮಿತಿ ರಚನೆಯಾದ ಎರಡು ದಿನಗಳಲ್ಲಿ ಮೋಡ ಬಿತ್ತನೆಗೆ ಚಾಲನೆ ನೀಡಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದರು.