ಮೆಡಿಕಲ್ ಶಾಪ್ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Medical store
Medical store
Published on

ಪ್ರಮುಖ ಮುಖ್ಯಾಂಶಗಳು

  • * ಬಹುತೇಕ ಮಳಿಗೆಗಳಲ್ಲಿ ಕಪ್ಪು ಪಟ್ಟಿ ಧರಿಸಿ ಕಾರ್ಯ
  • * ಸರ್ಕಾರಿ, ಖಾಸಗಿ ಆಸ್ಪತ್ರೆಗಳ ಆವರಣದಲ್ಲಿ ಎಂದಿನಂತೆ ತೆರೆದಿದ್ದ ಔಷಧ ಮಳಗೆಗಳು
ಬೆಂಗಳೂರು : ಇ-ಫಾರ್ಮಸಿ ಹಾಗೂ ಆನ್‌ಲೈನ್ ಔಷಧ ಮಾರಾಟ ವಿರೋಧಿಸಿ ಬುಧವಾರ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘಟನೆ (ಎಐಒಸಿಡಿ) ದೇಶಾದ್ಯಂತ ಕರೆ ನೀಡಿದ್ದ ಬಂದ್‌ಗೆ ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ಬಂದ್‌ಗೆ ಬೆಂಗಳೂರು ಫಾರ್ಮಾ ರಿಟೈಲರ್ಸ್ ಆ್ಯಂಡ್ ಡಿಸ್ಟ್ರಿಬ್ಯೂಟರ್ಸ್ ಫೋರಂ ಸಂಯೋಜಿತವಾಗಿರುವ ಔಷಧ ಮಳಿಗೆಗಳು ಮುಚ್ಚುವ ಮೂಲಕ ಬೆಂಬಲ ವ್ಯಕ್ತಪಡಿಸಿದವು. ಆದರೆ ಕರ್ನಾಟಕ ಫಾರ್ಮಾ ರಿಟೈಲರ್ಸ್ ಆ್ಯಂಡ್ ಡಿಸ್ಟ್ರಿಬ್ಯೂಟರ್ಸ್ ಆರ್ಗನೈಸೇಷನ್ ಸಂಯೋಜಿತವಾಗಿರುವ ಮಳಿಗೆಗಳು ಬಾಗಿಲು ಮುಚ್ಚದೆ ಕಪ್ಪು ಪಟ್ಟಿ ಧರಿಸಿ ಕಾರ್ಯನಿರ್ವಹಿಸಿದವು.
ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘಟನೆ ದೇಶಾದ್ಯಂತ 12.40 ಲಕ್ಷಕ್ಕೂ ಅಧಿಕ ವ್ಯಾಪಾರಿಗಳನ್ನು ಪ್ರತಿನಿಧಿಸುತ್ತದೆ. ರಾಜ್ಯದಲ್ಲಿ 45 ಸಾವಿರ ಚಿಲ್ಲರೆ ವ್ಯಾಪಾರಿಗಳಿದ್ದಾರೆ. ಇವರಲ್ಲಿ ಕೆಲವರು ಮಾತ್ರವೇ ಬಂದ್‌ನಲ್ಲಿ ಭಾಗಿಯಾಗಿದ್ದರು. ಬಹುತೇಕ ಚಿಲ್ಲರೆ ಮಳಿಗೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಇವಲ್ಲದೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಆವರಣದಲ್ಲಿನ ಔಷಧ ಮಳಿಗೆಗಳೂ ಎಂದಿನಂತೆ ತೆರೆದಿದ್ದವು.

ಬಹಿರಂಗವಾಗಿ ಕಾಯ್ದೆ ಉಲ್ಲಂಘನೆ

ಕರ್ನಾಟಕ ಕೆಮಿಸ್ಟ್ ಆ್ಯಂಡ್ ಡ್ರಗ್ಗಿಸ್ಟ್ ಅಸೋಸಿಯೇಷನ್ ಮತ್ತು ಬೆಂಗಳೂರು ಫಾರ್ಮಾ ರಿಟೇಲರ್ಸ್ ಆ್ಯಂಡ್ ಡಿಸ್ಟ್ರಿಬ್ಯೂಟರ್ಸ್ ಫೋರಂ ಅಧ್ಯಕ್ಷ ಆರ್.ರಘುನಾಥ್ ರೆಡ್ಡಿ ಮಾತನಾಡಿ, ಬುಧವಾರದ ಬಂದ್ ಯಶಸ್ವಿಯಾಗಿದ್ದು, ಸಂಘಗಳಿಗೆ ಸಂಯೋಜಿತವಾಗಿರುವ 26,000 ಮಳಿಗೆಗಳು ಮುಚ್ಚಲ್ಪಟ್ಟಿವೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ, ನಮ್ಮ ಸಂಘಕ್ಕೆ ಸಂಯೋಜಿತವಾಗಿರುವ ಸುಮಾರು 6,500 ಮಳಿಗೆಗಳು ಭಾಗವಹಿಸಿದ್ದವು. ಆನ್‌ಲೈನ್ ಔಷಧಾಲಯಗಳು ಔಷಧಗಳು ಮತ್ತು ಸೌಂದರ್ಯವರ್ಧಕಗಳ ಕಾಯ್ದೆ, 1940 ಅನ್ನು ಬಹಿರಂಗವಾಗಿ ಉಲ್ಲಂಸುತ್ತಿವೆ. ಇದು ನೇರ ಮನೆ ವಿತರಣೆ ಮತ್ತು ಔಷಧಗಳ ಆನ್‌ಲೈನ್ ಮಾರಾಟ ನಿಷೇಧಿಸುತ್ತವೆ. ಈ ಬಗ್ಗೆ ಹಲವು ಬಾರಿ ಗಮನ ಸೆಳೆದರೂ ಅಧಿಕಾರಿಗಳು ಕ್ರಮ ಕೈಗೊಳ್ಳಲಿಲ್ಲ. ಹೀಗಾಗಿ ಮುಷ್ಕರ ಮಾಡುವುದು ಅನಿವಾರ್ಯವಾಯಿತು ಎಂದರು.

ಚಿಲ್ಲರೆ ವ್ಯಾಪಾರಿಗಳಿಗೆ ಅಪಾಯ:

ಸಾಂಪ್ರದಾಯಿಕ ಮಳಿಗೆಗಳಿಗೆ ನಿಗದಿಪಡಿಸಿದ ಶೇ.16ರಿಂದ ಶೇ.20 ಚಿಲ್ಲರೆ ಲಾಭಾಂಶ ಮೀರಿ, ಇ-ಫಾರ್ಮಸಿಗಳು ಶೇ.40ರವರೆಗೆ ಭಾರಿ ರಿಯಾಯಿತಿ ನೀಡುವ ಮೂಲಕ ಬೆಲೆ ನಿಯಂತ್ರಣ ನಿಯಮಗಳನ್ನು ಉಲ್ಲಂಘಿಸುತ್ತಿವೆ. ಈ ನಡೆ ಚಿಲ್ಲರೆ ವ್ಯಾಪಾರಿಗಳಿಗೆ ಅಪಾಯವನ್ನುಂಟು ಮಾಡುತ್ತವೆ ಎಂದ ಅವರು, ನಮ್ಮ ಹೋರಾಟ ಸಣ್ಣ ಔಷಧಾಲಯಗಳನ್ನು ಉಳಿಸುವುದು ಮಾತ್ರವೇ ಹೊರತು ಸಾರ್ವಜನಿಕರಿಗೆ ತೊಂದರೆ ನೀಡುವುದಲ್ಲ ಎಂದರು.

ಔಷಧಾಲಯಗಳನ್ನು ಮುಚ್ಚದೆ ಪ್ರತಿಭಟಿಸಿದ್ದೇವೆ. ನಮ್ಮ ಪ್ರತಿಭಟನೆಯು ಅನಿಯಂತ್ರಿತ ಆನ್‌ಲೈನ್ ಔಷಧ ಮಾರಾಟದ ವಿರುದ್ಧ ಮಾತ್ರವಲ್ಲದೆ, ಕಟ್ ಸ್ಟ್ರಿಪ್‌ಗಳು, ಅಂತಾರಾಜ್ಯ ಮತ್ತು ರಾಜ್ಯದೊಳಗಿನ ಮಾರುಕಟ್ಟೆಗಳಲ್ಲಿ ನಕಲಿ ಔಷಧ ಒಳನುಸುಳುವಿಕೆ ಸೇರಿ ಎಂಆರ್‌ಪಿಯಿಂದ ಎಂಆರ್‌ಪಿ ಆಧಾರದ ಮೇಲೆ ಅವಧಿ ಮೀರಿದ ಸರಕುಗಳ ಇತ್ಯರ್ಥದ ವಿರುದ್ಧವೂ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ದಾರಿತಪ್ಪಿಸುವ ಮಾನಸಿಕ ಜಾಹೀರಾತುಗಳು, ಅತಿಯಾದ ರಿಯಾಯಿತಿಗಳು, ಗ್ರಾಹಕರ ಡಿಜಿಟಲ್ ಜೇಬುಗಳ್ಳತನ, ಅನೈತಿಕ ವ್ಯಾಪಾರ ಪದ್ಧತಿಗಳು ಮತ್ತು ನೈತಿಕ ಔಷಧಾಲಯ ಅಭ್ಯಾಸ, ರೋಗಿಗಳ ಸುರಕ್ಷತೆ ಮತ್ತು ಪರವಾನಗಿ ಪಡೆದ ಚಿಲ್ಲರೆ ಔಷಧಾಲಯಗಳ ಉಳಿವಿಗೆ ಬೆದರಿಕೆ ಹಾಕುವ ಡಿಜಿಟಲ್ ಚಾಲಿತ ಆರೋಗ್ಯ ರಕ್ಷಣಾ ಮಾದರಿಗಳ ವಿರುದ್ಧವೂ ಹೋರಾಟ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net