ರಾಜ್ಯೋತ್ಸವ ಅನುದಾನ ದುರ್ಬಳಕೆ

ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಶೋಕ ಚಂದರಗಿ ಮಾತನಾಡಿದರು. ರಮೇಶ ಸೊಂಟಕ್ಕಿ, ಶ್ರಿನಿವಾಸ ತಾಳೂಕರ, ಕಸ್ತೂರಿ ಬಾವಿ, ವಾಜೀದ್ ಹಿರೇಕೋಡಿ ಇತರರಿದ್ದರು.
ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಶೋಕ ಚಂದರಗಿ ಮಾತನಾಡಿದರು. ರಮೇಶ ಸೊಂಟಕ್ಕಿ, ಶ್ರಿನಿವಾಸ ತಾಳೂಕರ, ಕಸ್ತೂರಿ ಬಾವಿ, ವಾಜೀದ್ ಹಿರೇಕೋಡಿ ಇತರರಿದ್ದರು.
Published on
ಬೆಳಗಾವಿ: ನಗರದಲ್ಲಿ 70ನೇ ಕನ್ನಡ ರಾಜ್ಯೋತ್ಸವ ಅದ್ದೂರಿ ಆಚರಣೆಗೆ ಪ್ರವಾಸೋದ್ಯಮ ಇಲಾಖೆ ಬಿಡುಗಡೆ ಮಾಡಿರುವ 50ಲಕ್ಷ ರೂ. ಅನುದಾನ ದುಂದುವೆಚ್ಚವಾಗಿದೆ. ಈ ಕುರಿತು ಪರಿಶೀಲನೆ ನಡೆಸಿ ಕಾನೂನು ಕ್ರಮವಹಿಸಬೇಕು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಆಗ್ರಹಿಸಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ವಿವಿಧ ಕನ್ನಡಪರ ಸಂಘಟನೆ ಪದಾಧಿಕಾರಿಗಳ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡಪರ ಸಂಘಟನೆಗಳ ನಿರಂತರ ಹೋರಾಟದ ಫಲವಾಗಿ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ.ಪಾಟೀಲ 50ಲಕ್ಷ ರೂ. ಬಿಡುಗಡೆ ಮಾಡಿ ಕನ್ನಡಪರ ಸಂಘಟನೆ ಮತ್ತು ಹೋರಾಟಗಾರರ ಸಮ್ಮುಖದಲ್ಲಿ ಕಾರ್ಯಕ್ರಮ ರೂಪಿಸಲು ಷರತ್ತು ವಿಧಿಸಿದ್ದರು. ಜಿಲ್ಲಾಡಳಿತ, ಮಹಾನಗರ ಪಾಲಿಕೆ ಅಧಿಕಾರಿಗಳು ಷರತ್ತು ಉಲ್ಲಂಸಿ, ಅನುದಾನ ದುರ್ಬಳಕೆ ಮಾಡಿದ್ದಾರೆ ಎಂದು ದೂರಿದರು.
ಕನ್ನಡೇತರ ಪ್ರದೇಶದಲ್ಲಿ ಕನ್ನಡಪರ ಕಾರ್ಯಕ್ರಮ ರೂಪಿಸಿ, ವಿವಿಧ ಚಟುವಟಿಕೆ ನಡೆಸಬೇಕೆಂದು ಸಲಹೆ ನೀಡಿದ್ದರೂ ಜಿಲ್ಲಾಡಳಿತ ಫೆ.24ರಂದು ಕನ್ನಡ ಹಬ್ಬದ ಹೆಸರಿನಲ್ಲಿ ರಸಮಂಜರಿ ಕಾರ್ಯಕ್ರಮ ಆಯೋಜಿಸಿದ್ದಾರೆ. ಇದಕ್ಕೆ 39 ಲಕ್ಷ ರೂ. ಖರ್ಚು ಮಾಡುತ್ತಿದ್ದಾರೆ.
ರಾಜ್ಯೋತ್ಸವದಲ್ಲಿ ಸಾರ್ವಜನಿಕರಿಗೆ ಊಟಕ್ಕಾಗಿ 8 ಲಕ್ಷ ರೂ., ವಸ್ತು ಪ್ರದರ್ಶನಕ್ಕೆ 3 ಲಕ್ಷ ರೂ. ವೆಚ್ಚ ಮಾಡಿರುವ ಸುಳ್ಳು ಲೆಕ್ಕ ನೀಡುತ್ತಿದ್ದಾರೆ.
ಈ ಕುರಿತು ಕಾನೂನು ಕ್ರಮ ಜರುಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಚ್.ಕೆ. ಪಾಟೀಲ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುತ್ತೇವೆ. ಅಗತ್ಯಬಿದ್ದರೆ ಬೆಂಗಳೂರಿನಲ್ಲಿ ಧರಣಿ ನಡೆಸಲೂ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ರಮೇಶ ಸೊಂಟಕ್ಕಿ, ಶ್ರಿನಿವಾಸ ತಾಳೂಕರ, ವಾಜೀದ್ ಹಿರೇಕೋಡಿ, ಮೈನುದ್ದೀನ್ ಮಕಾನದಾರ್, ಕಸ್ತೂರಿ ಬಾವಿ, ಶಿವರಡ್ಡಿ ಹುಚ್ಚರಡ್ಡಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net