

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ವೇಳೆ 'ಫಾರ್ಮ್ 7' ದುರ್ಬಳಕೆ ಕುರಿತು ಚುನಾವಣಾ ಆಯೋಗಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ದೂರು ನೀಡಿದ್ದು, ಆರೋಪಿಗಳ ವಿರುದ್ಧ ತಕ್ಷಣವೇ ಎಫ್ಐಆರ್ ದಾಖಲಿಸಿ ಬಂಧಿಸುವಂತೆ ಒತ್ತಾಯಿಸಿ ಆಯೋಗದ ಕಚೇರಿಯಲ್ಲಿ ಧರಣಿ ನಡೆಸಿದ್ದು, ಸಚಿವರು ಸಾಥ್ ನೀಡಿದ್ದಾರೆ.
ಮತ್ತು ಮತದಾರರ ಪಟ್ಟಿಯಿಂದ ನಿರ್ದಿಷ್ಟ ಸಮುದಾಯಗಳ ಹೆಸರುಗಳನ್ನು ವ್ಯವಸ್ಥಿತವಾಗಿ ಕಡಿತಗೊಳಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿ ಕಾಂಗ್ರೆಸ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ರಾಜ್ಯ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ಅನ್ಬು ಕುಮಾರ್ ಅವರಿಗೆ ಅಧಿಕೃತವಾಗಿ ದೂರು ನೀಡಿದೆ.
ಆರ್ಎಸ್ಎಸ್, ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಸಾಮೂಹಿಕವಾಗಿ ಫಾರ್ಮ್ 7 ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಎಸ್‌ಐಆರ್ ಪ್ರಕ್ರಿಯೆಯ ಹೆಸರಲ್ಲಿ ಸಾಕಷ್ಟು ಅಕ್ರಮಗಳು ನಡೆಯುತ್ತಿದೆ. ಸಂಬಂಧಪಟ್ಟವರ ವಿರುದ್ಧ ತಕ್ಷಣವೇ ಎಫ್ಐಆರ್ ದಾಖಲಿಸಬೇಕು ಮತ್ತು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ವೇಳೆ ಪರಿಶೀಲಿಸುವುದಾಗಿ ಹೇಳಿದ ಚುನಾವಣಾ ಆಯುಕ್ತ ಅನ್ಭುಕುಮಾರ್ ಅವರು ಎರಡು ದಿನ ಕಾಲಾವಕಾಶ ಕೇಳಿದರು. ಇದಕ್ಕೆ ಒಪ್ಪದ ಸಿಎಂ ಡಿ.ಕೆ.ಶಿವಕುಮಾರ್ ಅವರು, ಕ್ರಮಕೈಗೊಳ್ಳುವವರೆಗೂ ಕಚೇರಿಯಿಂದ ತೆರಳುವುದಿಲ್ಲ ಎಂದು ಪಟ್ಟು ಹಿಡಿದು ಧರಣಿ ಆರಂಭಿಸಿದ್ದಾರೆ. ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಮತ್ತು ಕ್ಯಾಬಿನೆಟ್ ಸಚಿವರು ಸಾಥ್ ನೀಡಿದ್ದಾರೆ.
ಈ ವೇಳೆ ಮಾತನಾಡಿರುವ ಸಿಎಂ ಡಿ.ಕೆ.ಶಿವಕುಮಾರ್, ಕರ್ನಾಟಕಕ್ಕೆ ಸಂಬಂಧಿಸಿದಂತೆ ಎಸ್‌ಐಆರ್ ಬಳಿಕ ವಿಶೇಷ ಎಸ್‌ಐಆರ್ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಕರ್ನಾಟಕ ಸರ್ಕಾರ ಚುನಾವಣಾ ಆಯೋಗದೊಂದಿಗೆ ಸಹಕರಿಸಿದೆ. ಆದರೆ ಕರ್ನಾಟಕದಲ್ಲಿ ದೊಡ್ಡ ಪಿತೂರಿಯೊಂದು ನಡೆಯುತ್ತಿದೆ. ಶೇ. 70ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ, ಯಾವುದೇ ಗುರುತಿನ ದಾಖಲೆಗಳಿಲ್ಲದೆ ಬಿಜೆಪಿ ನಾಯಕರು 'ಫಾರ್ಮ್-7'ಅನ್ನು ಪಡೆಯುತ್ತಿರುವುದನ್ನು ನಾವು ಗುರುತಿಸಿದ್ದೇವೆ. ಪ್ರಿಂಟೆಡ್ ಫಾರ್ಮ್ಗಳನ್ನು ಪೂರೈಸಲಾಗುತ್ತಿದ್ದು, ಅವುಗಳನ್ನು ಬಿಜೆಪಿ ಪಕ್ಷದ ನಾಯಕರಿಗೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.