

ನವದೆಹಲಿ: ಎಸ್ಐಆರ್ ಪ್ರಕ್ರಿಯೆ ಕುರಿತಂತೆ ಚುನಾವಣಾ ಆಯೋಗದ ವಿರುದ್ಧ ದಾಳಿ ಮುಂದುವರೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಹೊಸ ಮತದಾರರ ನೋಂದಣಿಗೆ ಬಳಸಲಾಗುವ ಫಾರ್ಮ್ 6ನಲ್ಲಿ ಕಾನೂನುಬಾಹಿರ ಬದಲಾವಣೆ ಮಾಡುವಂತೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ಗೆ ಆದೇಶ ನೀಡಿದ್ಯಾರು ಎಂದು ಗುರುವಾರ(ಅ. 01) ಪ್ರಶ್ನಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ರಾಹುಲ್ ಗಾಂಧಿ, ಚುನಾವಣಾ ಆಯೋಗದ ಆಯುಕ್ತರೇ ದಾಖಲಿಸಿರುವಂತೆ, ಆನ್‌ಲೈನ್ 'ಫಾರ್ಮ್ 6' ಅನ್ನು ಅಕ್ರಮವಾಗಿ ಬದಲಾಯಿಸಲಾಗಿದೆ. ಆ ಬದಲಾವಣೆಯನ್ನು ಮಾಡುವಂತೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ಗೆ ಚುನಾವಣಾ ಆಯೋಗದ ಯಾರಾದರೂ ಆದೇಶ ನೀಡಿದ್ದರೇ? ಅಥವಾ ಬದಲಾವಣೆಯನ್ನು ಮಾಡಲು ಆ ಐಟಿ ಕಂಪನಿಯ ಮೇಲೆ ಒತ್ತಡ ಹೇರಲಾಗಿತ್ತೇ ಎಂದು ಪ್ರಶ್ನಿಸಿದ್ದಾರೆ.
ಇನ್ನೂ ರಾಹುಲ್ ಗಾಂಧಿಯವರ ಪೋಸ್ಟ್ ಅನ್ನು ರಿಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಜನರಲ್ ಝಡ್ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲು ಜುಲೈ 2026ರ ಮಧ್ಯದಲ್ಲಿ ಸಿಇಸಿ ಫಾರ್ಮ್ 6 ಬದಲಾವಣೆಗಳನ್ನು ಅಸಂವಿಧಾನಿಕವಾಗಿ ಪರಿಚಯಿಸಿತು. ಸ್ಪಷ್ಟವಾಗಿ, ಈ ಕಾನೂನು ಬಾಹಿರ ಬದಲಾವಣೆಯನ್ನು ಪ್ರಧಾನಿ ಮತ್ತು ಗೃಹ ಸಚಿವರ ಜೋಡಿ ನಡೆಸಿದೆ ಎಂದು ಆರೋಪಿಸಿದ್ದಾರೆ.
ಎಸ್ಐಆರ್ ಪ್ರಕ್ರಿಯೆ, ಚುನಾವಣಾ ಪ್ರಕ್ರಿಯೆಯಲ್ಲಿನ ಅಕ್ರಮಗಳ ಆರೋಪ ಹಿನ್ನೆಲೆ ಎಲ್ಲಾ ಜಿಲ್ಲೆಗಳಲ್ಲಿ ಮೆರವಣಿಗೆಗಳು ಮತ್ತು ಐದು ಬೃಹತ್ ರ್ಯಾಲಿಗಳು ಸೇರಿದಂತೆ ಸರಣಿ ಜಂಟಿ ಪ್ರತಿಭಟನೆಗಳನ್ನು ನಡೆಸುವುದಾಗಿ ವಿರೋಧ ಪಕ್ಷಗಳ 'ಇಂಡಿಯಾ' ಒಕ್ಕೂಟ ಘೋಷಿಸಿದ ಮರುದಿನ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ.
ಇನ್ನೂ ಇಂಡಿಯಾ ಒಕ್ಕೂಟವು, ಭವಿಷ್ಯದ ಚುನಾವಣೆಗಳನ್ನು ಮತಪತ್ರಗಳ ಮೂಲಕವೇ ನಡೆಸಬೇಕೆಂದು ಒತ್ತಾಯಿಸಿದೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಮತ್ತು ಚುನಾವಣಾ ಅಕ್ರಮಗಳ ಆರೋಪಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನು ತ್ವರಿತಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೂ ಮನವಿ ಮಾಡಿದೆ (ಏಜೆನ್ಸೀಸ್).