

ಬೆಂಗಳೂರು: ಕರ್ನಾಟಕ ಸರ್ಕಾರದ ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಯಿಂದ ಪಡಿತರ ಚೀಟಿದಾರರಿಗಾಗಿ ಅತ್ಯಂತ ಮಹತ್ವದ ಹಾಗೂ ಅನುಕೂಲಕರ ಮಾಹಿತಿಯೊಂದು ಹೊರಬಿದ್ದಿದೆ. ಪಡಿತರ ಚೀಟಿ ಫಲಾನುಭವಿಗಳು ಇನ್ನು ಮುಂದೆ ನ್ಯಾಯಬೆಲೆ ಅಂಗಡಿಗಳಿಗೆ ಅಲೆಯುವ ಹಾಗಿಲ್ಲ, ಬದಲಿಗೆ ತಮ್ಮ ಮನೆಯಲ್ಲೇ ಕುಳಿತು ಸ್ಮಾರ್ಟ್‌ಫೋನ್ ಮೂಲಕವೇ ಸುಲಭವಾಗಿ ಇ-ಕೆವೈಸಿ (e-KYC) ಪೂರ್ಣಗೊಳಿಸಲು ಸರ್ಕಾರ ಹೊಸದಾಗಿ 'ಅನ್ನ ಸೇವೆ' ಮೊಬೈಲ್ ಅಪ್ಲಿಕೇಶನ್ ( Anna Seve Mobile App ) ಹೊರತಂದಿದ್ದು ಆಹಾರ ಸಚಿವ ರಿಜ್ವಾನ್ ಅರ್ಷದ್ ಅವರು ಲೋಕಾರ್ಪಣೆ ಮಾಡಿದರು.
ಕೇಂದ್ರ ಸರ್ಕಾರದ ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಯ (DFPD) ನಿರ್ದೇಶನದಂತೆ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಪಡಿತರ ಚೀಟಿ ಫಲಾನುಭವಿಗಳು ಪ್ರತಿ ಐದು ವರ್ಷಗಳಿಗೊಮ್ಮೆ ಕಡ್ಡಾಯವಾಗಿ ಇ-ಕೆವೈಸಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಇದರನ್ವಯ ಕರ್ನಾಟಕದಲ್ಲಿ 5 ವರ್ಷ ಮೇಲ್ಪಟ್ಟ ಒಟ್ಟು 2,67,64,276 ಫಲಾನುಭವಿಗಳನ್ನು ಗುರುತಿಸಲಾಗಿದ್ದು, 2026ರ ಸೆಪ್ಟೆಂಬರ್ 29ರ ಅಂತ್ಯಕ್ಕೆ ಒಟ್ಟು 1,56,21,608 ಫಲಾನುಭವಿಗಳು ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್ ಅಥವಾ ಐರಿಸ್ ದೃಢೀಕರಣದ ಮೂಲಕ ತಮ್ಮ ಮರು-ಇ-ಕೆವೈಸಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಫಲಾನುಭವಿಗಳಿಗೆ ಈ ಪ್ರಕ್ರಿಯೆಯನ್ನು ಅತ್ಯಂತ ಸರಳ ಮತ್ತು ಸುಲಭವಾಗಿಸುವ ನಿಟ್ಟಿನಲ್ಲಿ ಆಹಾರ ಇಲಾಖೆಯು, ನ್ಯಾಷನಲ್ ಇನ್ಫರ್ಮ್ಯಾಟಿಕ್ಸ್ ಸೆಂಟರ್ (NIC) ಮತ್ತು ಇ-ಆಡಳಿತ ಇಲಾಖೆಯ ಸಹಯೋಗದೊಂದಿಗೆ “ಅನ್ನ ಸೇವೆ (Anna Seve)” ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದೆ. ಈ ಆ್ಯಪ್ ಮೂಲಕ UIDAI ಮುಖ ಗುರುತಿಸುವಿಕೆ (Face Authentication) ತಂತ್ರಜ್ಞಾನ ಬಳಸಿ ಸಾರ್ವಜನಿಕರು ತಾವೇ ಖುದ್ದಾಗಿ ಸ್ವಯಂ ಇ-ಕೆವೈಸಿ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ, ಇದುವರೆಗೆ ಒಮ್ಮೆಯೂ ಇ-ಕೆವೈಸಿ ಮಾಡಿಸದ ರಾಜ್ಯದ 3,82,362 ಫಲಾನುಭವಿಗಳು ಕೂಡಲೇ ಈ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಇಲಾಖೆ ಎಚ್ಚರಿಕೆ ನೀಡಿದೆ.
ಈ ನೂತನ ಅಪ್ಲಿಕೇಶನ್ ಬಳಕೆಯನ್ನು ಎರಡು ಹಂತಗಳಲ್ಲಿ ಜಾರಿಗೆ ತರಲಾಗುತ್ತಿದ್ದು, ಮೊದಲ ಹಂತದಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮೀಣ, ಉಡುಪಿ, ಹಾವೇರಿ, ಉತ್ತರ ಕನ್ನಡ, ಬಳ್ಳಾರಿ, ಬೀದರ್ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಸಾರ್ವಜನಿಕರು ಡೌನ್‌ಲೋಡ್ ಮಾಡಿಕೊಂಡು ಇ-ಕೆವೈಸಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಎರಡನೇ ಹಂತವಾಗಿ ಬರುವ ಅಕ್ಟೋಬರ್ 10, 2026ರಿಂದ ರಾಜ್ಯದ ಉಳಿದೆಲ್ಲ ಜಿಲ್ಲೆಗಳ ಫಲಾನುಭವಿಗಳಿಗೂ ಈ ಮೊಬೈಲ್ ಆ್ಯಪ್ ಮೂಲಕ ಸ್ವತಃ ಇ-ಕೆವೈಸಿ ಮಾಡಿಕೊಳ್ಳುವ ಸೌಲಭ್ಯ ಲಭ್ಯವಾಗಲಿದೆ.
ಈ ಆ್ಯಪ್ ಅನ್ನು ಬಳಸುವ ಮೊದಲು ಫಲಾನುಭವಿಗಳು ಗೂಗಲ್ ಪ್ಲೇ ಸ್ಟೋರ್‌ನಿಂದ ‘CeG Face KYC App’, ‘AadhaarFaceRD’ ಹಾಗೂ ‘ಅನ್ನ ಸೇವೆ (Anna Seve)’ ಎಂಬ ಮೂರು ಸಹಾಯಕ ಮೊಬೈಲ್ ಅಪ್ಲಿಕೇಶನ್‌ಗಳನ್ನು ಕಡ್ಡಾಯವಾಗಿ ಡೌನ್‌ಲೋಡ್ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ ಅಥವಾ ಸಮೀಪದ ನ್ಯಾಯಬೆಲೆ ಅಂಗಡಿಗಳನ್ನು ಸಂಪರ್ಕಿಸಿ ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಇಲಾಖೆ ಕೋರಿದೆ.