ದಿನಕ್ಕೆ ಸರಾಸರಿ 12 ಸಾವಿರ ಪುಟ ಭೂ ದಾಖಲೆ ಸ್ಕ್ಯಾನ್ ಮಾಡಬೇಕೆಂದು ಗುರಿ ನೀಡಲಾಗಿತ್ತು. ಆದರೆ, ಕೆಲ ತಾಲೂಕುಗಳಲ್ಲಿ ಸ್ಕ್ಯಾನಿಂಗ್ 8 ಸಾವಿರ ಪುಟ ದಾಟಿಲ್ಲ. ಜತೆಗೆ ಸ್ಕ್ಯಾನಿಂಗ್ ಕೆಲಸಕ್ಕೆ ಪ್ರತಿ ತಾಲೂಕಿಗೆ ತಲಾ 8 ಜನ ಡೇಟಾ ಆಪರೇಟರ್ ನೀಡಿದರೂ ಕೆಲ ಕಡೆ ಪ್ರಗತಿ ಕುಂಠಿತವಾಗಿತ್ತು. ಇದಕ್ಕೆ ಅಸಮರ್ಪಕ ಉತ್ತರ ನೀಡಿದ ಗದಗ ಜಿಲ್ಲೆ ಶಿರಹಟ್ಟಿ ತಹಸೀಲ್ದಾರ್ ಮೇಲೆ ಸಚಿವರು ಗರಂ ಆದರು. ಮಲೆನಾಡು ಪ್ರದೇಶಗಳಾದ ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಮತ್ತು ಹಿಂದುಳಿದ ಜಿಲ್ಲೆಗಳಾದ ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಕೆಲಸ ಸಂಪೂರ್ಣ ಮುಗಿದಿದೆ. ಆದರೆ, ಬೆಂಗಳೂರು ನಗರ, ಶ್ರೀರಂಗಪಟ್ಟಣ, ಮದ್ದೂರು, ಪಾಂಡವಪುರ, ಮೈಸೂರಿನ ಕೆಲ ತಾಲೂಕುಗಳಲ್ಲಿ ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.