ರಿಯಾಯಿತಿ ದರದಲ್ಲಿ ಹಾಲು ಕರೆಯುವ ಯಂತ್ರ ವಿತರಣೆ Milking machine
Milking machine ಮಾಗಡಿ ಹೊಸಪೇಟೆ ಬಳಿ ಇರುವ ಕ್ಷೀರ ಭವನದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ರೈತರಿಗೆ ಹಾಲು ಕರೆಯುವ ಯಂತ್ರವನ್ನು ಬಮುಲ್ ನಿರ್ದೇಶಕ ಎಚ್.ಎನ್. ಅಶೋಕ್ ವಿತರಿಸಿದರು. ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಡಾ.ಅಜಯ್‌ಕುಮಾರ್, ವಿಸ್ತರಣಾಧಿಕಾರಿ ಪ್ರಮೋದ್, ರಂಗಸ್ವಾಮಿ, ಶೋಭಾ, ಮಂಜುಳಾ, ಗಣೇಶ್, ಹರೀಶ್, ದೇವರಾಜು ಇತರರು ಇದ್ದರು.
ಮಾಗಡಿ: ರೈತರಿಗೆ ಅನುಕೂಲ ಕಲ್ಪಿಸಲು ಬಮುಲ್ನಿಂದ ಹಾಲು ಕರೆಯುವ Milking machine ಯಂತ್ರಗಳನ್ನು ಶೇ.50 ರಿಯಾಯಿತಿ ದರದಲ್ಲಿ ಹಾಗೂ ಉಚಿತವಾಗಿ ಮೇವಿನ ಬೀಜದ ಬ್ಯಾಗ್‌ಗಳನ್ನು ವಿತರಿಸಲಾಗಿದೆ ಎಂದು ಬಮುಲ್ ನಿರ್ದೇಶಕ ಎಚ್. ಎನ್ ಅಶೋಕ್ ತಿಳಿಸಿದರು.
ಪಟ್ಟಣದ ಹೊಸಪೇಟೆ ಬಳಿ ಇರುವ ಕ್ಷೀರ ಭವನದಲ್ಲಿ ವಿವಿಧ ಹಾಲು ಉತ್ಪಾದಕರ ಸಹಕಾರ ಸಂಘದ 39 ರೈತರಿಗೆ ರಿಯಾಯಿತಿ ಬೆಲೆಯಲ್ಲಿ ಹಾಲು ಕರೆಯುವ ಯಂತ್ರವನ್ನು ವಿತರಿಸಿ ಮಾತನಾಡಿದ ಅವರು, ಬಮುಲ್ ಹಾಲು ಕರೆಯುವ ಯಂತ್ರಗಳನ್ನು ಖರೀದಿಸಿ ಅರ್ಹ ರೈತರಿಗೆ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಜತೆಗೆ ಹಸುಗಳಿಗೆ ಹಸಿರು ಮೇವು ಒದಗಿಸಿಕೊಳ್ಳಲು ಬಮುಲ್ನಿಂದ ಜೋಳದ 2 ಬ್ಯಾಗ್‌ಗಳನ್ನು ಉಚಿತವಾಗಿ ರೈತರಿಗೆ ವಿತರಿಸಲಾಗುತ್ತಿದೆ. ಹಸುಗಳ ಮ್ಯಾಟ್ ವಿತರಣೆಗೆ ವಿಳಂಭವಾಗಿದೆ. ಈಗಾಗಲೇ 15 ಲೋಡ್ ಮ್ಯಾಟ್ ಖರೀದಿಸಿದ್ದು, ಇನ್ನು ಹದಿನೈದು ದಿನಗಳಲ್ಲಿ ಮ್ಯಾಟ್‌ಗಳ ವಿತರಣೆಗೂ ಕ್ರಮ ಕೈಗೊಂಡಿದ್ದೇವೆ ಎಮದರು ಹೇಳಿದರು.
ತಾಲೂಕಿನ ಆಗಲಕೋಟೆ ಹ್ಯಾಂಡ್ ಪೋಸ್ಟ್‌ನ ಸಾತನೂರು ಗ್ರಾಮ ವ್ಯಾಪ್ತಿಯಲ್ಲಿ 25 ಎಕರೆಯಲ್ಲಿ ಪಶು ಆಹಾರ ಘಟಕ ಸ್ಥಾಪನೆಗೆ ಸಂಕಲ್ಪ ಮಾಡಿದ್ದು, ಈಗಾಗಲೇ ಸರ್ವೇ ಕಾರ್ಯ ಮುಗಿದಿದೆ. ಶೀಘ್ರದಲ್ಲಿಯೇ ಪಶು ಆಹಾರ ಘಟಕ ಸ್ಥಾಪನೆ ಮಾಡಲು ನಿರ್ದೇಶಕರೆಲ್ಲರೂ ಸೇರಿ ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ಅವರಲ್ಲಿ ಹಕ್ಕೊತ್ತಾಯ ಮಾಡಿದ್ದೇವೆ. ಜತೆಗೆ ಆಶ್ರಮ ಶಾಲೆಯನ್ನು ಪ್ರಾರಂಭಿಸಲು ಅಧ್ಯಕ್ಷರೊಂದಿಗೆ ಚರ್ಚಿಸಿದ್ದೇವೆ ಎಂದರು.
ಹಾಲಿ ಬೆಲೆ 2 ರೂ ಏರಿಕೆಗೆ ಚಿಂತನೆ:
ಹಾಲು ಉತ್ಪಾದಕರನ್ನು ಆರ್ಥಿಕವಾಗಿ ಸದೃಢಗೊಳಿಸಲು ಪ್ರತಿ ಲೀಟರ್ ಹಾಲಿಗೆ 2 ರೂ ಏರಿಕೆ ಮಾಡಲು ಬಮುಲ್ ಚಿಂತಿಸಿದೆ. ಬಮುಲ್ನಿಂದ ಸರ್ಕಾರಕ್ಕೂ ಮನವಿ ಮಾಡಲಾಗುವುದು. ಈ ಸಂಬಂಧ ಅಧ್ಯಕ್ಷರು, ಪದಾಧಿಕಾರಿಗಳೆಲ್ಲರೂ ಚರ್ಚಿಸುತ್ತೇವೆ ಎಂದು ಅಶೋಕ್ ತಿಳಿಸಿದರು.
ರೈತರ ಉತ್ತೇಜನ
ನಾಟಿ ಹಸುವಿನ ಹಾಲು ಪೂರೈಕೆಗೆ ರೈತರಿಗೆ ಸಾಲಸೌಲಭ್ಯ ವಿತರಿಸಲು ಕ್ರಮ ಕೈಗೊಂಡಿದ್ದೇವೆ. ನಾಟಿ ಹಸುವಿನ ಮಜ್ಜಿಗೆ, ಬೆಣ್ಣೆಗೆ ಹೆಚ್ಚು ಬೇಡಿಕೆಯಿದ್ದು, ಪ್ರತಿದಿನ 10 ಸಾವಿರ ಲೀಟರ್ ಹಾಲು ಅಗತ್ಯವಿದೆ. ನಿತ್ಯ 10 ಸಾವಿರ ನಾಟಿ ಹಸುವಿನ ಹಾಲಿನಿಂದ ಮಜ್ಜಿಗೆ, ಬೆಣ್ಣೆ ತಯಾರಿಸಿ ಗ್ರಾಹಕರಿಗೆ ಪೂರೈಸಲಾಗುವುದು. 6 ತಿಂಗಳ ಹಿಂದೆ ನಾಟಿ ಹಸು ಹಾಲಿನ ಬೆಲೆ 55 ರೂ ಇತ್ತು. ಈಗ 70 ರೂ. ಗೆ ಏರಿಸಿದ್ದೇವೆ ಎಂದು ಅಶೋಕ್ ಹೇಳಿದರು.
ಕೆಪಿಎಸ್ ಶಾಲೆ ಪ್ರಾರಂಭಿಸಲು ಅನುದಾನ:
ಚಕ್ರಭಾವಿ ಗ್ರಾಮದಲ್ಲಿ ಕೆಪಿಎಸ್ ಶಾಲೆ ಪ್ರಾರಂಭಿಸಲು 4 ಕೋಟಿ ರೂ. ಅನುದಾನ ಮಂಜೂರಾಗಿದೆ. ಬಮುಲ್ ನಿರ್ದೇಶಕರಿಗೆ ಸರ್ಕಾರದಿಂದ ದೊರಕುವ ತಲಾ 15 ಲಕ್ಷ ರೂ. ಅನುದಾನವನ್ನು ವಿದ್ಯಾರ್ಥಿಗಳ ಸಾರಿಗೆ ಅನುಕೂಲಕ್ಕಾಗಿ ಕೆಪಿಎಸ್ ಶಾಲೆಗೆ ವಾಹನ ಖರೀದಿಸಲಾಗುವುದು ಎಂದು ಅಶೋಕ್ ಹೇಳಿದರು.