ಬಿಸಿಯೂಟ: 215 ಕೋಟಿ ರೂ. ಅನುದಾನ ಬಿಡುಗಡೆ

ಮಧ್ಯಾಹ್ನ ಉಪಹಾರ
ಮಧ್ಯಾಹ್ನ ಉಪಹಾರ
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳ ಹಾಜರಾತಿಯನ್ನು ಕೃತಕವಾಗಿ ಹೆಚ್ಚಿಸಿ ತೋರಿಸುವುದು ಅಥವಾ ನಂತರದಲ್ಲಿ ದಾಖಲಿಸುವುದನ್ನು ಹಣಕಾಸು ಅಕ್ರಮವೆಂದು ಪರಿಗಣಿಸಲಾಗುವುದು.
  • ಅಕ್ರಮಗಳಲ್ಲಿ ಭಾಗಿಯಾಗುವ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಎಚ್ಚರಿಕೆ
  • ಮಕ್ಕಳ ಮುಖ ಗುರುತಿನ ಹಾಜರಾತಿ ದಿನಕ್ಕೆ ಮೂರು ಬಾರಿ (ಬೆಳಗ್ಗೆ ಎರಡು ಬಾರಿ, ಮಧ್ಯಾಹ್ನ ಒಂದು ಬಾರಿ) ಪಡೆಯುವುದು ಕಡ್ಡಾಯ
ಬೆಂಗಳೂರು: ರಾಜ್ಯದಲ್ಲಿ ಜಾರಿಯಲ್ಲಿರುವ ಕ್ಷೀರ ಭಾಗ್ಯ ಮತ್ತು ಮಧ್ಯಾಹ್ನ ಉಪಹಾರ ಯೋಜನೆಯಡಿ ಮೊದಲನೇ ತ್ರೈಮಾಸಿಕದ ವೆಚ್ಚವಾಗಿ 215.93 ಕೋಟಿ ರೂ ಅನುದಾನ ಬಿಡುಗಡೆ ಮಾಡಿದೆ. ಜೊತೆಗೆ ಈ ಯೋಜನೆಯಲ್ಲಿ ನಕಲು, ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಅಕ್ರಮ ಮುಂತಾದವನ್ನು ತಡೆಯಲು ಹಲವು ಕಟ್ಟುನಿಟ್ಟಿನ ಸೂಚನೆಯನ್ನು ಶಾಲಾ ಶಿಕ್ಷಣ ಇಲಾಖೆ ನೀಡಿದೆ.
ವಿದ್ಯಾರ್ಥಿಗಳ ಹಾಜರಾತಿಯನ್ನು ಕೃತಕವಾಗಿ ಹೆಚ್ಚಿಸಿ ತೋರಿಸುವುದು ಅಥವಾ ನಂತರದಲ್ಲಿ ದಾಖಲಿಸುವುದನ್ನು ಹಣಕಾಸು ಅಕ್ರಮವೆಂದು ಪರಿಗಣಿಸಲಾಗುವುದು. ಈ ರೀತಿಯ ಅಕ್ರಮಗಳಲ್ಲಿ ಭಾಗಿಯಾಗುವ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ.
ಮಕ್ಕಳ ಮುಖ ಗುರುತಿನ ಹಾಜರಾತಿ ದಿನಕ್ಕೆ ಮೂರು ಬಾರಿ (ಬೆಳಗ್ಗೆ ಎರಡು ಬಾರಿ, ಮಧ್ಯಾಹ್ನ ಒಂದು ಬಾರಿ) ಪಡೆಯುವುದು ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ಮಕ್ಕಳ ಮುಖ ಗುರುತಿನ ಹಾಜರಾತಿಯನ್ನು ದಾಖಲಿಸದೇ ಇದ್ದರೆ ಶಾಲಾ ಮುಖ್ಯ ಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿ, ಉಪ ನಿರ್ದೇಶಕರು ಮತ್ತು ಮಧ್ಯಾಹ್ನ ಉಪಹಾರ ಯೋಜನೆಯ ಶಿಕ್ಷಣಾಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
ಇನ್ನು ಸ್ಯಾಟ್ಸ್ ನಲ್ಲಿ ಮಕ್ಕಳ ಹಾಜರಾತಿಯನ್ನು ಘಟನೋತ್ತರವಾಗಿ ದಾಖಲಿಸುವುದನ್ನು ರದ್ದುಗೊಳಿಸಬೇಕು. ವಿದ್ಯಾರ್ಥಿಗಳ ಹಾಜರಾತಿಯನ್ನು ಹೆಚ್ಚಾಗಿ ದಾಖಲಿಸುವುದು, ಹಾಜರಾತಿಯನ್ನು ಘಟನೋತ್ತರವಾಗಿ ದಾಖಲಿಸುವುದನ್ನು ಹಣಕಾಸು ಅಕ್ರಮವೆಂದು ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಹಾಗೆಯೇ ಅಪಾರ್ ಐಡಿ ಯನ್ನು ಎಲ್ಲ ಅರ್ಹ ವಿದ್ಯಾರ್ಥಿಗಳು ಜೂನ್ ಅಂತ್ಯದೊಳಗೆ ಪಡೆದುಕೊಳ್ಳಬೇಕು. ಅಪಾರ್ ಐಡಿಯ ಕೊರತೆ ಪ್ರಾಕ್ಸಿ ವಿದ್ಯಾರ್ಥಿಗಳ ಹಾಜರಾತಿಗೆ ಅವಕಾಶ ನೀಡುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.
ಮಧ್ಯಾಹ್ನದ ಊಟ, ಬಾಳೆಹಣ್ಣು, ಮೊಟ್ಟೆ ಹಾಗು ಹಾಲು ಸೇವಿಸಿದ ಮತ್ತು ಸೇವಿಸದ ವಿದ್ಯಾರ್ಥಿಗಳನ್ನು ಸ್ಯಾಟ್ಸ್ ನಲ್ಲಿ ನಮೂದಿಸುವುದು ಕಡ್ಡಾಯಗೊಳಿಸಲಾಗಿದೆ. ಮಕ್ಕಳಿಗೆ ಮೊಟ್ಟೆ ಅಥವಾ ಬಾಳೆ ಹಣ್ಣು ವಿತರಿಸುವ ಸಂದರ್ಭದಲ್ಲಿ ಪೋಷಕರ ಒಪ್ಪಿಗೆ ಪತ್ರ ಪಡೆಯುವುದು ಕಡ್ಡಾಯ. ಈ ಒಪ್ಪಿಗೆ ಪತ್ರವನ್ನು ಬದಲಾಯಿಸುವಂತಿಲ್ಲ. ಮೊಟ್ಟೆ ಕನಿಷ್ಟ 50 ಗ್ರಾಂ ತೂಕವಿರಬೇಕು, ಎರಡು ಬಾಳೆಹಣ್ನು ನೀಡಬೇಕು ಎಂದು ಸೂಚಿಸಲಾಗಿದೆ.
ಜೊತೆಗೆ ಮಕ್ಕಳಿಗೆ ಮೊಟ್ಟೆ ಹಾಗೂ ಬಾಳೆಹಣ್ಣಿನ ಪೋಷಕಾಂಶಗಳ ಪ್ರಯೋಜನ ಹಾಗೂ ಮೊಟ್ಟೆ ಮತ್ತು ಬಿಸಿ ಹಾಲು ಸೇವನೆಯ ಬಗ್ಗೆ ಮಕ್ಕಳಲ್ಲಿರಬಹುದಾದ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಬೆಳಗ್ಗಿನ ಪ್ರಾರ್ಥನೆಯ ವೇಳೆ ಹತ್ತು ನಿಮಿಷಗಳ ಕಾಲ ಸೂಕ್ತ ವೈಜ್ಞಾನಿಕ ಮಾಹಿತಿ ನೀಡುವಂತೆ ಮುಖ್ಯ ಶಿಕ್ಷಕರಿಗೆ ಸೂಚಿಸುವಂತೆ ನಿರ್ದೇಶನ ನೀಡಬೇಕು ಎಂದು ಆಯುಕ್ತರಿಗೆ ಸೂಚಿಸಲಾಗಿದೆ.
ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಶಾಲಾವಾರು ಹಾಜರಾತಿ ಹಾಗೂ ಮಧ್ಯಾಹ್ನದ ಊಟ, ಬಿಸಿಹಾಲು ಮತ್ತು ಪೂರಕ ಪೌಷ್ಟಿಕ ಆಹಾರ ಸೇವನೆಯ ವಿವರಗಳನ್ನು ಪ್ರತಿದಿನ ಜಿಲ್ಲಾ ಪಂಚಾಯಿತಿ ವೆಬ್‌ಸೈಟ್‌ನಲ್ಲಿ ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕ್ಷೀರಭಾಗ್ಯ ಮತ್ತು ಮಧ್ಯಾಹ್ನದ ಉಪಹಾರ ಯೋಜನೆಗೆ ಈ ಹಣಕಾಸು ವರ್ಷದಲ್ಲಿ 1,160 ಕೋಟಿ ರೂ ಹಣ ನಿಗದಿ ಪಡಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net