ರಾಜ್ಯದಲ್ಲಿ ಮೇ 20ಕ್ಕೆ ಮೆಡಿಕಲ್ ಸ್ಟೋರ್‌ಗಳು ಮುಚ್ಚಲ್ಲ: ರಾಷ್ಟ್ರವ್ಯಾಪಿ ಪ್ರತಿಭಟನೆಗೆ ನೈತಿಕ ಬೆಂಬಲ- Medical stores

ದೇಶಾದ್ಯಂತ  ಬುಧವಾರ ಕೈಗೊಂಡಿರುವ ಮುಷ್ಕರಕ್ಕೆ ನೈತಿಕ ಬೆಂಬಲ
ದೇಶಾದ್ಯಂತ ಬುಧವಾರ ಕೈಗೊಂಡಿರುವ ಮುಷ್ಕರಕ್ಕೆ ನೈತಿಕ ಬೆಂಬಲ
Published on
ಬೆಂಗಳೂರು: ಪರವಾನಗಿ ಪಡೆಯದೆ ಆನ್‌ಲೈನ್ ಫಾರ್ಮಸಿಗಳು ಅನಧಿಕೃತವಾಗಿ ಔಷಧ ಮಾರಾಟ, ಜೀವರಕ್ಷಕ ಔಷಧಗಳ ಮೇಲೆ ಅತಿಯಾಗಿ ರಿಯಾಯಿತಿ ನೀಡುತ್ತಿರುವುದನ್ನು ಖಂಡಿಸಿ ರಾಷ್ಟ್ರಮಟ್ಟದ ಸಂಘಟನೆಗಳು, ಬುಧವಾರ (ಮೇ.20) ದೇಶಾದ್ಯಂತ ಕೈಗೊಂಡಿರುವ ಮುಷ್ಕರಕ್ಕೆ ಕರ್ನಾಟಕ ಔಷಧ ಚಿಲ್ಲರೆ ವ್ಯಾಪಾರಿಗಳು ಮತ್ತು ವಿತರಕರ ಸಂಘ (ಕೆಪಿಆರ್‌ಡಿಒ) ನೈತಿಕ ಬೆಂಬಲ ಕೊಟ್ಟಿದೆ.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಸಿ.ಜಯರಾಮ್ ಮಾತನಾಡಿ, ರಾಷ್ಟ್ರಮಟ್ಟದ ಸಂಘಗಳು ಒಂದು ದಿನಮಟ್ಟಿಗೆ ಮೆಡಿಕಲ್ ಸ್ಟೋರ್‌ಗಳನ್ನು ಬಂದ್‌ಗೊಳಿಸಿ ಪ್ರತಿಭಟನೆ ಮಾಡಲಿವೆ. ಆದರೆ, ಕರ್ನಾಟಕದಲ್ಲಿ ರೋಗಿಗಳ ಹಿತದೃಷ್ಟಿಯಿಂದ ಯಾವುದೇ ಮೆಡಿಕಲ್ ಸ್ಟೋರ್‌ಗಳನ್ನು ನಾವು ಬಂದ್ ಮಾಡುವುದಿಲ್ಲ. ಪ್ರತಿಭಟನೆಯ ದಿನದಂದು ಕಪ್ಪು ಬ್ಯಾಡ್ಜ್ ಅಥವಾ ರಿಬ್ಬನ್ ಧರಿಸಿ ನೈತಿಕ ಬೆಂಬಲ ಕೊಡಲಿದ್ದೇವೆ. ಎಂದಿನಂತೆ ಮೆಡಿಕಲ್ ಸ್ಟೋರ್‌ಗಳು ತೆರೆಯಲಿದ್ದು, ಸಾರ್ವಜನಿಕರು ಔಷಧಗಳನ್ನು ಖರೀದಿಸಬಹುದು. ಹಾಗಾಗಿ,ರೋಗಿಗಳು ಆತಂಕಪಡುವ ಅಗತ್ಯವಿಲ್ಲ ಎಂದು ಮನವಿ ಮಾಡಿದರು.
ಆನ್‌ಲೈನ್ ಫಾರ್ಮಸಿಗಳು ಹಾಗೂ ಕ್ವಿಕ್ ಕಾಮರ್ಸ್ ಔಷಧ ಡೆಲಿವರಿ ಆ್ಯಪ್‌ಗಳು, ಔಷಧಗಳು ಮತ್ತು ಸೌಂದರ್ಯವರ್ಧಕಗಳ ಕಾಯ್ದೆ ಉಲ್ಲಂಘಿಸುತ್ತಿರುವ ಬಗ್ಗೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಗೆ ಮನವಿ ಸಲ್ಲಿಸಿ ಗಮನ ಸೆಳೆದಿದ್ದೇವೆ. ಇದರ ವಿರುದ್ಧ 2014ರಿಂದ ಹೋರಾಟ ನಡೆಸಿಕೊಂಡು ಬರುತ್ತಿದ್ದೇವೆ. ವೇಗವಾಗಿ ಕುಸಿಯುತ್ತಿರುವ ಸಾಂಪ್ರದಾಯಿಕ ಔಷಧ ವ್ಯಾಪಾರವನ್ನು ಕಾಪಾಡಲು ಮುಂದಾಗಿದ್ದೇವೆ ಎಂದರು.
ಸಂಘದ ಉಪಾಧ್ಯಕ್ಷ ರವೀಂದ್ರ ಸಿ.ಭೂಸ್ನೂರ್ ಮಾತನಾಡಿ, ಕಾನೂನುಬಾಹಿರವಾಗಿ ಆನ್‌ಲೈನ್ ಮೆಡಿಷನ್ ಸೇಲ್ಸ್ ಆ್ಯಪ್ ಮೂಲಕ ಸರಬರಾಜುವಾಗುತ್ತಿರುವ ಔಷಧಗಳನ್ನ ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ಈಗಾಗಲೇ ಇಲಾಖೆ, ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದೆ. ಆನ್‌ಲೈನ್‌ನಲ್ಲಿ ಮಾರಾಟವಾಗುವ ಹಲವು ಜೀವರಕ್ಷಕ ಔಷಧಗಳ ಕಲಬೆರಕೆಯಿಂದ ಕೂಡಿವೆ. ಇಂತಹ ಔಷಧಗಳಿಂದ ರೋಗಿಗಳ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರಲಿದ್ದು, ಪ್ರಾಣಕ್ಕೆ ಕಂಟಕ ತರಲಿವೆ. ಹಾಗಾಗಿ, ಇಂತಹ ಔಷಧಗಳ ಬಗ್ಗೆ ಸಾರ್ವಜನಿಕರು ಅಥವಾ ರೋಗಿಗಳು ಖರೀದಿಸಬಾರದು ಎಂದು ಮನವಿ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net