ಮಾತೋಶ್ರೀ ಶಂಕರಮ್ಮ ಪ.ಬಳಿಗಾರ್ ದತ್ತಿ ಪ್ರಶಸ್ತಿ ಪ್ರದಾನ

ಮಾತೋಶ್ರೀ ಶಂಕರಮ್ಮ ಪ.ಬಳಿಗಾರ್ ದತ್ತಿ ಪ್ರಶಸ್ತಿ ಪ್ರದಾನ
ಮಾತೋಶ್ರೀ ಶಂಕರಮ್ಮ ಪ.ಬಳಿಗಾರ್ ದತ್ತಿ ಪ್ರಶಸ್ತಿ ಪ್ರದಾನ
Published on

ಪ್ರಮುಖ ಮುಖ್ಯಾಂಶಗಳು

  • * ಕರ್ನಾಟಕ ಲೇಖಕಿಯರ ಸಂಘದಿಂದ ಸಮಾರಂಭ
ಬೆಂಗಳೂರು: ಮಹಿಳೆಯರು ಇಡುತ್ತಿರುವ ತಪ್ಪು ಹೆಜ್ಜೆಗಳನ್ನು ಲೇಖಕಿಯರು ತಮ್ಮ ಹರಿತ ಲೇಖನಿಗಳಿಂದ ತಿದ್ದುವ ಪ್ರಯತ್ನ ಮಾಡಬೇಕಿದೆ ಎಂದು ಮಾಜಿ ಸಚಿವೆ ರಾಣಿ ಸತೀಶ್ ಹೇಳಿದರು.
ಕರ್ನಾಟಕ ಲೇಖಕಿಯರ ಸಂಘವು ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತೋಶ್ರೀ ಶಂಕರಮ್ಮ ಪ. ಬಳಿಗಾರ್ ದತ್ತಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಇಂದು ಎಲ್ಲೆಡೆ ಕೃತಕ ಬುದ್ಧಿಮತ್ತೆ (ಎಐ)ಯದೇ ಮಾತು. ಆದರೆ ಎಐ ಏನೇ ಮಾಡಿದರೂ ಸೀ ಶಕ್ತಿಯ ಮುಂದೆ ಅದು ನಗಣ್ಯ. ತಾಯ್ತನದ ಶಕ್ತಿಯೇ ಎಲ್ಲಕ್ಕಿಂತ ಮಿಗಿಲು ಎಂದರು.
ಇಂದಿನ ಸಮಾಜದ ವಿಕಾರ, ವಿಕೃತ ವಾತಾವರಣಕ್ಕೆ ಕಡಿವಾಣ ಹಾಕಬೇಕಿದೆ. ಇದಕ್ಕೆ ಪರಿಹಾರ ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡುವುದು, ಹೆಣ್ಣು ಮಕ್ಕಳ ತಾಯ್ತನದ ಜವಾಬ್ದಾರಿ ತಿಳಿಸುವುದು, ಹದವರಿತ ಅಡುಗೆ, ಹದ ಅರಿತ ಬದುಕು ಶಂಕರಮ್ಮನವರು ಬಾಳಿ ಬದುಕಿದ ಹಾದಿ, ಇಟ್ಟ ಹೆಜ್ಜೆಗಳು ನಮಗೆ ಆದರ್ಶಪ್ರಾಯ ಎಂದು ಹೇಳಿದರು.
ಎಐ ಆತಂಕ:
ಲೇಖಕಿ ಡಾ. ವಸುಂಧರಾ ಭೂಪತಿ ಮಾತನಾಡಿ, ಕೃತಿಕ ಬುದ್ಧಮತ್ತೆ (ಎಐ) ಇಂದು ಸಾಹಿತ್ಯ ವಲಯದಲ್ಲೂ ಆತಂಕ ಮೂಡಿಸಿದ್ದು, ಸೃಜನಶೀಲ ಲೇಖನಗಳ ಮರುವಿಮರ್ಶೆ ಮಾಡುವಂತೆ ಮಾಡುತ್ತಿದೆ. ಇತ್ತೀಚೆಗೆ ಲೇಖಕಿಯರ ಕಥೆಗಳಲ್ಲಿ ಪ್ರಸ್ತುತ ಸಾಮಾಜಿಕ ತಲ್ಲಣಗಳು ಸಮರ್ಥವಾಗಿ ಮೂಡಿಬರುತ್ತಿವೆ. ಆ ಮೂಲಕ ಮಹಿಳಾ ಸಾಹಿತ್ಯ ಮೇಲುಗೈ ಸಾಧಿಸುತ್ತಿರುವುದು ಮಹಿಳೆಯರ ಸಕ್ರಿಯತೆಯನ್ನು ಬಿಂಬಿಸುತ್ತಿದೆ ಎಂದರು.
ಕೌಟುಂಬಿಕ ವ್ಯವಸ್ಥೆಯಲ್ಲಿ ಪಲ್ಲಟ:
ಸಂಘದ ಅಧ್ಯಕ್ಷೆ ಡಾ.ಆರ್. ಸುನಂದಮ್ಮ ಮಾತನಾಡಿ, ಸಮಾಜದಲ್ಲಿ ಹೆಚ್ಚುತ್ತಿರುವ ವಿವಾಹ ವಿಚ್ಛೇದನಕ್ಕೆ ಕಾರಣ ಮಹಿಳಾ ಅಧ್ಯಯನ ಪುರುಷರಿಗೆ ಬೋಧನೆಯಾಗದಿರುವುದು. ಹೆಣ್ಣುಮಕ್ಕಳ ಬದಲಾದ ಜೀವನ ಕ್ರಮದಂತೆ ಕೌಟುಂಬಿಕ ವ್ಯವಸ್ಥೆಗಳು ಪಲ್ಲಟವಾಗಬೇಕು, ಅವರ ಶ್ರಮಜೀವನದ ಬದುಕನ್ನು ನೋಡುವ ರೀತಿ ಬದಲಾಗಬೇಕು. ಇಂದಿನ ಕೌಟುಂಬಿಕ ಶಿಕ್ಷಣ ಇದನ್ನು ಸಮರ್ಥವಾಗಿ ಮಕ್ಕಳಿಗೆ ತಿಳಿಸದೆ ಇರುವುದರಿಂದ ಸಮಾಜ ಅಧೋಗತಿಗೆ ತಲುಪುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕಾವ್ಯ ವಿಭಾಗದಲ್ಲಿ ಮಾಧವಿ ಭಂಡಾರಿ ಕೆರೆಕೋಣ, ಗದ್ಯ ವಿಭಾಗದಲ್ಲಿ ಬಿ.ಟಿ.ಜಾಹ್ನವಿ, ಸಂಕೀರ್ಣ ವಿಭಾಗದಲ್ಲಿ ಪ್ರೊ.ವಿಜಯಾ ಬಿ.ಕೋರಿಶೆಟ್ಟಿ (ಶಿಕ್ಷಣ ಕ್ಷೇತ್ರ) ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಳಿಗಾರ್ ಕುಟುಂಬದ ಸದಸ್ಯೆ ಡಾ. ಮೇಘಾ ಸಿದ್ದಾರ್ಥ್ , ಲೇಖಕಿಯರ ಸಂಘದ ಪದಾಧಿಕಾರಿಗಳು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net