ಸಮುದಾಯದ ನಾಯಕರ ಕಡೆಗಣನೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ದಲಿತ ಸಂಘಟನೆಗಳ ಆಕ್ರೋಶ! Dalit Organizations

ಸಮುದಾಯದ ನಾಯಕರ ಕಡೆಗಣನೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ದಲಿತ ಸಂಘಟನೆಗಳ ಆಕ್ರೋಶ! Dalit Organizations
ಸಮುದಾಯದ ನಾಯಕರ ಕಡೆಗಣನೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ದಲಿತ ಸಂಘಟನೆಗಳ ಆಕ್ರೋಶ! Dalit Organizations
Published on

ಪ್ರಮುಖ ಮುಖ್ಯಾಂಶಗಳು

  • ಕಾಂಗ್ರೆಸ್ ಸರ್ಕಾರದಲ್ಲಿ ದಲಿತ ಸಮುದಾಯದ ರಾಜಕೀಯ ನಾಯಕರನ್ನು ಕಡೆಗಣನೆ ಆರೋಪ
  • ರಾಜ್ಯ ದಲಿತ ಸಂಘಟನೆಗಳ ಒಕ್ಕೂಟ ನೇತೃತ್ವದಲ್ಲಿ 10ಕ್ಕೂ ಅಧಿಕ ಸಂಘಟನೆಗಳಿಂದ ಪ್ರತಿಭಟನೆ
  • ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಶೋಷಿತರ ಸ್ವಾಭಿಮಾನದ ಹೋರಾಟ ಎಂಬ ಹೆಸರಿನಲ್ಲಿ ಬೃಹತ್​ ಪ್ರತಿಭಟನೆ
ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ದಲಿತ ಸಮುದಾಯದ ರಾಜಕೀಯ ನಾಯಕರನ್ನು ಕಡೆಗಣಿಸಿರುವುದನ್ನು ಖಂಡಿಸಿ ರಾಜ್ಯ ದಲಿತ ಸಂಘಟನೆಗಳ ಒಕ್ಕೂಟ( Dalit Organizations ) ನೇತೃತ್ವದಲ್ಲಿ 10ಕ್ಕೂ ಅಧಿಕ ಸಂಘಟನೆಗಳು ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದವು.
‘ಶೋಷಿತರ ಸ್ವಾಭಿಮಾನದ ಹೋರಾಟ’ ಎಂಬ ಹೆಸರಿನಲ್ಲಿ ನಡೆದ ರಾಜ್ಯಮಟ್ಟದ ಪ್ರತಿಭಟನೆಗೆ ದಲಿತ ಸಂಘಟನೆಗಳ ಹತ್ತಾರು ಪ್ರಮುಖ ನಾಯಕರು, ಕರ್ನಾಟಕದ ಛಲವಾದಿ ಮಹಾಸಭಾದ ಪದಾಧಿಕಾರಿಗಳು ಬೆಂಬಲ ವ್ಯಕ್ತಪಡಿಸಿ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದ್ದರು.ದಲಿತ ಸಮುದಾಯಕ್ಕೆ ನ್ಯಾಯ ಒದಗಿಸುವಂತೆ ಪ್ರತಿಭಟನೆಗೆ ಕರೆ ಕೊಟ್ಟಿದ್ದೇವೆ. ನಮ್ಮ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ಉಗ್ರ ಹೋರಾಟ ಮಾಡಲಾಗುವುದು. ಬರುವ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಕಾಂಗ್ರೆಸ್ಸಿನ ದಲಿತ ವಿರೋಧಿ ನೀತಿಗೆ ಮತಗಳ ಮೂಲಕ ತಕ್ಕ ಪಾಠ ಕಲಿಸಲಾಗುವುದು ಎಂದು ಸಂಘಟನೆಗಳ ಮುಖಂಡರು, ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಉರಿಲಿಂಗ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ ಮಾತನಾಡಿ, ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನೂತನ ಸಚಿವ ಸಂಪುಟ ರಚನೆಯಾಗಿದೆ. ಕಾಂಗ್ರೆಸ್ಸಿನ ಬೆನ್ನೆಲುಬಾಗಿ ನಿಲ್ಲುತ್ತಾ ಬಂದಿರುವ ದಲಿತ ಸಮುದಾಯದ ರಾಜಕೀಯ ನಾಯಕರನ್ನು ತುಳಿಯುವ ಕೆಲಸವಾಗುತ್ತಿದೆ. ದಿ. ಬಿ. ಬಸವಲಿಂಗಪ್ಪ, ಕೆ.ಎಚ್. ರಂಗನಾಥ್, ಬಿ.ರಾಚಯ್ಯ, ಎನ್. ರಾಚಯ್ಯ, ಶ್ರೀನಿವಾಸ್ ಪ್ರಸಾದ್ ಮತ್ತು ಟಿ.ಎ. ನರಸಿಂಹಮೂರ್ತಿ ಅವರಂತಹ ಹತ್ತಾರು ಪ್ರಭಾವಿ ಮುಖಂಡರಿಗೆ ಈ ಹಿಂದೆ ಅನ್ಯಾಯ ಮಾಡಲಾಗಿತ್ತು. ಈಗ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ. ಪರಮೇಶ್ವರ್, ಡಾ. ಎಚ್.ಸಿ. ಮಹದೇವಪ್ಪ ಹಾಗೂ ಕೆ.ಎಚ್. ಮುನಿಯಪ್ಪ ಅವರಂತಹ ಹಿರಿಯ ನಾಯಕರನ್ನು ಸಿಎಂ ಹುದ್ದೆಗೆ ಪರಿಗಣಿಸದೆ ಕಾಂಗ್ರೆಸ್ ಸತತವಾಗಿ ದಲಿತ ವಿರೋಧಿ ಧೋರಣೆ ಮುಂದುವರಿಸಲಾಗಿದೆ ಎಂದು ಅಸಮಾಧಾನ ಹೊರಹಾಕಿದರು.
ಸಂವಿಧಾನ, ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಸಮಾಜದ ಏಳಿಗೆಗಾಗಿ ಶ್ರಮಿಸಿದ ಹಿರಿಯ ದಲಿತ ನಾಯಕರ ಕೊರತೆ ಇಂದು ರಾಜ್ಯ ರಾಜಕಾರಣದಲ್ಲಿ ಎದ್ದು ಕಾಣುತ್ತಿದೆ. ದಶಕಗಳಿಂದ ಕಾಂಗ್ರೆಸ್ ನಂಬಿ ಮತ ಹಾಕುತ್ತಾ ಬಂದಿರುವ ದಲಿತ ಸಮುದಾಯಕ್ಕೆ ಸದಾ ವಂಚನೆ ಎದುರಾಗುತ್ತಿದೆ. ಉನ್ನತ ಹುದ್ದೆಗಳ ಆಮಿಷ ಒಡ್ಡಿ ಪ್ರಭಾವಿ ದಲಿತ ನಾಯಕರನ್ನು ರಾಜಕೀಯವಾಗಿ ಮುಗಿಸುವ ಹುನ್ನಾರ ನಡೆಯುತ್ತಿದೆ. ವಿಶೇಷವಾಗಿ ಹಳೇ ಮೈಸೂರು ಭಾಗದಲ್ಲಿ ಹಾಗೂ ಇಡೀ ರಾಜ್ಯಾದ್ಯಂತ ದಲಿತ ಸಂಘಟನೆಗಳಿಗೆ ತಾಯಿಯಂತೆ ಬೆನ್ನೆಲುಬಾಗಿ ನಿಂತಿದ್ದ ಹಿರಿಯ ನಾಯಕರಾದ ಎಚ್.ಸಿ. ಮಹದೇವಪ್ಪನವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿರುವುದು ಅತ್ಯಂತ ದುರದೃಷ್ಟಕರ ಸಂಗತಿಯಾಗಿದೆ. ಸಮುದಾಯದ ನಾಯಕತ್ವವನ್ನು ಹತ್ತಿಕ್ಕುವ ಮತ್ತು ನಾಶಮಾಡುವ ವ್ಯವಸ್ಥಿತ ಪ್ರಯತ್ನವಾಗಿದೆ. ನಾಯಕತ್ವ ನಾಶವಾದರೆ ಇಡೀ ಸಮುದಾಯವೇ ಅಸ್ತಿತ್ವ ಕಳೆದುಕೊಳ್ಳುತ್ತದೆ ಎಂದು ಸ್ವಾಮೀಜಿ ಎಚ್ಚರಿಸಿದರು.
ಆರ್‌ಪಿಐ(ಬಿ) ರಾಷ್ಟ್ರೀಯ ಅಧ್ಯಕ್ಷ ಡಾ.ಎನ್.ಮೂರ್ತಿ, ರಾಜ್ಯ ಆದಿಜಾಂಬವ ಸಂಘದ ಕಾರ್ಧ್ಯಕ್ಷ ಜಂಬೂದೀಪ ಸಿದ್ದರಾಜು, ಮೈಸೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಪುರುಷತ್ತೋಮ್, ದಲಿತ ಸಂಘರ್ಷ ಸಮಿತಿಯ ಡಾ.ಡಿ.ಜಿ.ಸಾಗರ್ ಸೇರಿ ಸಾವಿರಾರು ಜನರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ದಲಿತ ನಾಯಕತ್ವ ನಾಶಕ್ಕೆ ಹುನ್ನಾರ

ರಾಜ್ಯ ರಾಜಕಾರಣದಲ್ಲಿ ದಲಿತ ಸಮುದಾಯದ ಪ್ರಭಾವಿ ಮತ್ತು ಹಿರಿಯ ನಾಯಕರನ್ನು ಮೂಲೆಗುಂಪು ಮಾಡುವ ಮೂಲಕ ಒಟ್ಟಾರೆ ದಲಿತ ನಾಯಕತ್ವವನ್ನೇ ನಾಶ ಮಾಡಲು ಕೆಲವು ಶಕ್ತಿಗಳು ಸಂಚು ರೂಪಿಸುತ್ತಿವೆ. ಶತಮಾನಗಳಿಂದಲೂ ತಳ ಸಮುದಾಯಗಳ ಪರವಾಗಿ ಧ್ವನಿ ಎತ್ತುತ್ತಾ ಬಂದಿರುವ ನಾಯಕರ ರೆಕ್ಕೆ-ಪುಕ್ಕ ಕತ್ತರಿಸುವ ಕೆಲಸ ನಿರಂತರವಾಗಿ ನಡೆಯುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ ದಲಿತ ಸಂಘಗಳ ಒಕ್ಕೂಟ ಅಧ್ಯಕ್ಷ ಎಚ್.ಸಿ.ಸಿದ್ದಲಿಂಗಯ್ಯ ಎಂದು ಆತಂಕ ವ್ಯಕ್ತಪಡಿಸಿದರು. ದಲಿತರ ರಾಜಕೀಯ ಪ್ರಾತಿನಿಧ್ಯವನ್ನು ಹತ್ತಿಕ್ಕುವ ಪ್ರಯತ್ನವಾಗಿದೆ. ಪ್ರಜಾಪ್ರಭುತ್ವದ ಆಶಯಗಳ ಅನ್ವಯ ಸಮುದಾಯಕ್ಕೆ ಸೂಕ್ತ ನ್ಯಾಯ ಸಿಗಬೇಕಾದರೆ ಸಚಿವ ಸಂಪುಟದಲ್ಲಿ ದಲಿತ ವರ್ಗದ ಇನ್ನು ಕನಿಷ್ಠ ಐದು ಜನ ಹಿರಿಯ ನಾಯಕರಿಗೆ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net