ಸೇಡಂ: ಅಳ್ಳೊಳ್ಳಿ ಗ್ರಾಮದ ಬಾವಿಯೊಂದರಲ್ಲಿ ಕಳೆದ ಕೆಲ ದಿನಗಳ ಹಿಂದೆ ಬಾಲಕನ ಶವ ಪತ್ತೆಯಾದ ಘಟನೆ ಮಾಸುವ ಮುನ್ನವೇ ವ್ಯಕ್ತಿಯೊಬ್ಬನ ಶವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಗ್ರಾಮದಲ್ಲಿ ಆತಂಕ ಸೃಷ್ಟಿಸಿದೆ.
ಗ್ರಾಮದ ಸಾಬಣ್ಣ ಶಾಮರಾವ ಹುಳಗೋಳ (45) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದವ. ಸಾಬಣ್ಣ ಶುಕ್ರವಾರ ರಾತ್ರಿ ಕುಟುಂಬ ಸದಸ್ಯರೊಂದಿಗೆ ಊಟ ಮಾಡಿ ಮನೆಯಲ್ಲಿ ಮಲಗಿದ್ದ. ನಸುಕಿನ ಜಾವ 3ಗಂಟೆಗೆ ಪತ್ನಿ ಎದ್ದಾಗಲೂ ಸಾಬಣ್ಣ ಮನೆಯಲ್ಲಿಯೇ ಇದ್ದ. ಬೆಳಗ್ಗೆ ನೋಡಿದಾಗ ಕಂಡಿರಲಿಲ್ಲ. ಬಹಿರ್ದೆಸೆಗೆ ಹೋಗಿರಬಹುದು ಎಂದು ಸುಮ್ಮನಾಗಿದ್ದರು. ಕೆಲ ಸಮಯದ ಬಳಿಕ ಮನೆಯ ಮುಂದಿನ ದೊಡ್ಡಿಯಲ್ಲಿನ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಸಾಬಣ್ಣನನ್ನು ಕಂಡು ಇಡೀ ಕುಟುಂಬ ಅಘಾತಕ್ಕೆ ಒಳಗಾಗಿತ್ತು.
ಪತಿ ರಾತ್ರಿ 3ಗಂಟೆವರೆಗೂ ಮನೆಯಲ್ಲಿಯೇ ಮಲಗಿದ್ದ, ಅದಾದ ಮೇಲೆ ಕೊಟ್ಟಿಗೆಯ ಕೋಣೆಯಲ್ಲಿ ಯಾರೋ ಕೊಲೆ ಮಾಡಿ, ನಂತರ ನೇಣು ಬಿಗಿದು ಮರಕ್ಕೆ ನೇತು ಹಾಕಿದ್ದಾರೆ ಎಂದು ಈರಮ್ಮ ಆರೋಪಿಸಿದ್ದಾರೆ.