ವಡಗೇರಾದಲ್ಲಿ ಬುಧವಾರ ಕರೆದಿದ್ದ ಕುಡಿಯುವ ನೀರು ಮತ್ತು ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಹಾಯಕ ಆಯುಕ್ತ ಶ್ರೀಧರ ಮಾತನಾಡಿದರು. ತಾಪಂ ಇಒ ಶಶಿಧರ ಹಿರೇಮಠ, ಎಡಿ ಕಿರಣಬಾಬು ಇದ್ದರು.
ವಡಗೇರಾ: ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ತಪ್ಪಿಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸಹಾಯಕ ಆಯುಕ್ತ ಶ್ರೀಧರ ಸೂಚಿಸಿದರು.
ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಬುಧವಾರ ಕರೆದಿದ್ದ ಕುಡಿಯುವ ನೀರು ಮತ್ತು ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಯಾವೊಂದು ಗ್ರಾಮಕ್ಕೂ ಕಲುಷಿತ ನೀರು ಪೂರೈಕೆ ಆಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದ ಕೂಡಲೇ ಪಿಡಿಒ ಹಾಗೂ ಸಂಬಂಧಿತ ಇಲಾಖೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು. ಅಗತ್ಯವಿದ್ದಲ್ಲಿ ಹೊಸ ಬೋರ್ವೆಲ್ ಕೊರೆಸುವುದರ ಜತೆ ಹಾಳಾಗಿರುವ ಕೊಳವೆಬಾವಿಗಳ ದುರಸ್ತಿ ಮಾಡಿಸಿ. ಶುದ್ಧ ಕುಡಿಯುವ ನೀರಿನ ಟಕಗಳಲ್ಲಿನ ಸಮಸ್ಯೆ ನಿವಾರಿಸಿ ನೀರಿನ ಮಾದರಿ ಪರೀಕ್ಷೆಗೆ ಒಳಪಡಿಸಿದ ಬಳಿಕ ಪೈಪ್ಲೈನ್ ಮೂಲಕ ಮನೆಮನೆಗೆ ಪೂರೈಕೆ ಮಾಡಬೇಕು. ರ್ನಿಲಕ್ಷ$್ಯ ತೋರಿದವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕಾದೀತು ಎಂದು ಎಚ್ಚರಿಸಿದರು.
ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನ, ವಸತಿ ಯೋಜನೆಗಳ ಪ್ರಗತಿ, ಕರವಸೂಲಿ ಗುರಿ ಸಾಧನೆ ಹಾಗೂ ಗ್ರಾಮೀಣ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಗ್ರಾಮೀಣ ಜನರು ವಲಸೆ ಹೋಗುವುದನ್ನು ತಡೆಯಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಖಾತ್ರಿ ಕೆಲಸಗಳನ್ನು ನೀಡಿ ನಿಗದಿತ ಮಾನವ ದಿನಗಳ ಗುರಿ ತಲುಪುವಂತೆ ಸೂಚಿಸಿದರು.
ತಾಪಂ ಇಒ ಶಶಿಧರ ಹಿರೇಮಠ ಮಾತನಾಡಿ, ಸರ್ಕಾರದ ಆದೇಶದಂತೆ ವಡಗೇರಾ ತಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ತೀವ್ರ ಸಮಸ್ಯೆ ಇರುವ ಕೆಲ ಹಳ್ಳಿಗಳಲ್ಲಿ ಬಾಡಿಗೆ ಬೋರ್ವೆಲ್ಗಳ ಮೂಲಕ ನೀರು ಒದಗಿಸಲಾಗುತ್ತಿದೆ. ನೋಡಲ್ ಅಧಿಕಾರಿಗಳು ಸಮರ್ಪಕ ಮೇಲ್ವಿಚಾರಣೆ ನಡೆಸಿ ಸಮಸ್ಯೆ ತಲೆದೋರಿದ ತಕ್ಷಣ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ಕಿರಣಬಾಬು, ಯೋಜನಾ ಅಧಿಕಾರಿ ಶರಣಬಸವ, ಟಿಸಿ ರವೀಂದ್ರ ದೇಸಾಯಿ, ಟಿಐಇಸಿ ದುರ್ಗೇಶ್ ಇತರರಿದ್ದರು.