ಔರಾದ್ ತಾಲೂಕಿನ ಸಂತಪುರ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ನನ್ನ ಸ್ವತ್ತು ನನ್ನ ಹಕ್ಕು ಅಭಿಯಾನಕ್ಕೆ ಚಾಲನೆ ನೀಡಲಾಯಿತು. ತಾಪಂ ಇಒ ಕಿರಣ ಪಾಟೀಲ್, ಎಡಿ ಶಿವಕುಮಾರ ಘಾಟೆ, ಪಿಡಿಒ ಸಂತೋಷ ಪಾಟೀಲ್ ಇತರರಿದ್ದರು.
ಸಂತಪುರದಲ್ಲಿ ನನ್ನ ಸ್ವತ್ತು ನನ್ನ ಹಕ್ಕು ಅಭಿಯಾನಕ್ಕೆ ಚಾಲನೆ
ಔರಾದ್ : ಗ್ರಾಮಸ್ಥರಿಗೆ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ ಇ-&ಸ್ವತ್ತು ಪಡೆಯಲು ಅನುಕೂಲವಾಗುವ ಉದ್ದೇಶದಿಂದ "ನನ್ನ ಸ್ವತ್ತು ನನ್ನ ಹಕ್ಕು' ಅಭಿಯಾನಕ್ಕೆ ಚಾಲನೆ ನೀಡಿದ್ದು, ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕಿರಣ ಪಾಟೀಲ್ ಹೇಳಿದರು.
ಸಂತಪುರ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ "ನನ್ನ ಸ್ವತ್ತು ನನ್ನ ಹಕ್ಕು' ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಮನೆಗಳ ಮಾಲೀಕರು ತಮ್ಮ ಆಸ್ತಿ ಸಂಬಂಧಿತ ದಾಖಲೆಗಳನ್ನು ಸಲ್ಲಿಸಿ ಆಸ್ತಿಗಳ ಡಿಜಿಟಲೀಕರಣ ಖಾತೆ ಪಡೆಯಲು ತಿಳಿಸಿದರು.
ಇಂದು ಒಟ್ಟು 47 ಅರ್ಜಿಗಳು ಸ್ವೀಕರಿಸಲಾಗಿದ್ದು, 9 ಇ-&ಸ್ವತ್ತು ದಾಖಲೆಗಳನ್ನು ವಿತರಿಸಲಾಗಿದೆ. ಉಳಿದ ಅರ್ಜಿಗಳ ಪರಿಶೀಲನೆ ಹಾಗೂ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.
ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರು (ಗ್ರಾ.ಉ) ಶಿವಕುಮಾರ ಘಾಟೆ ಮಾತನಾಡಿ, "ನನ್ನ ಸ್ವತ್ತು ನನ್ನ ಹಕ್ಕು' ಮಹತ್ವಾಕಾಂಕ್ಷಿ ಅಭಿಯಾನದಲ್ಲಿ ಸಾರ್ವಜನಿಕರು ಪಾಲ್ಗೊಂಡು, ಅಗತ್ಯ ದಾಖಲೆಗಳನ್ನು ಗ್ರಾಪಂಗೆ ಸಲ್ಲಿಸಿ ತಮ್ಮ ಆಸ್ತಿಯ ಇ&-ಸ್ವತ್ತು ಮೂಲಕ ಡಿಜಿಟಲ್ ಖಾತೆ ಪಡೆಯಬೇಕು. ಈಗಾಗಲೇ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗ್ರಾಮದ ಮನೆ-ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.