ವಿಜೃಂಭಣೆ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಿ

ಡಾ.ಅಂಬೇಡ್ಕರ್​, ಜಗಜೀವನರಾಮ್​ ಜಯಂತಿಗೆ ಸಂಬಂಧಿಸಿದಂತೆ ಕಲಬುರಗಿ ಡಿಸಿ ಕಚೇರಿಯಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಡಿಸಿ ಫೌಜಿಯಾ ತರನ್ನುಮ್​ ಮಾತನಾಡಿದರು. ಅವಿನಾಶ ಶಿಂಧೆ, ಸಾಹಿತ್ಯ ಆಲದಕಟ್ಟಿ, ರಾಯಪ್ಪ ಹುಣಸಗಿ, ಪ್ರವಿಣ್​ ನಾಯಕ್​ ಇದ್ದರು.
ಡಾ.ಅಂಬೇಡ್ಕರ್​, ಜಗಜೀವನರಾಮ್​ ಜಯಂತಿಗೆ ಸಂಬಂಧಿಸಿದಂತೆ ಕಲಬುರಗಿ ಡಿಸಿ ಕಚೇರಿಯಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಡಿಸಿ ಫೌಜಿಯಾ ತರನ್ನುಮ್​ ಮಾತನಾಡಿದರು. ಅವಿನಾಶ ಶಿಂಧೆ, ಸಾಹಿತ್ಯ ಆಲದಕಟ್ಟಿ, ರಾಯಪ್ಪ ಹುಣಸಗಿ, ಪ್ರವಿಣ್​ ನಾಯಕ್​ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್​ ಸೂಚನೆ
  • ಡಾ.ಅಂಬೇಡ್ಕರ್​, ಬಾಬುಜಗಜೀವನ್​ ರಾಮ್​ ಜಯಂತಿ
ಕಲಬುರಗಿ: ಮಾಜಿ ಉಪ ಪ್ರಧಾನಿ ಡಾ.ಬಾಬುಜಗಜೀವನ್​ ರಾಮ್​ ಅವರ 119ನೇ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್​.ಅಂಬೇಡ್ಕರ್​ ಅವರ  135ನೇ ಜಯಂತಿ ಜಿಲ್ಲಾದ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್​ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹನೀಯರ ಜಯಂತಿಯನ್ನು ಹಬ್ಬದ ರೀತಿ, ಸೌಹಾರ್ದಯುತವಾಗಿ ಆಚರಿಸುವ ಮೂಲಕ ಅವರ ಆದರ್ಶ ಜನಸಾಮಾನ್ಯರಿಗೆ ತಲುಪಿಸಬೇಕಿದೆ. ಮಹಾನಗರ ಪಾಲಿಕೆ ಇಂದಿರಾ ಸ್ಮಾರಕ ಭವನ (ಟೌನ್​ ಹಾಲ್​) ಹಾಗೂ ಜಗತ್​ ವೃತ್ತದಲ್ಲಿರುವ ಬಾಬೂಜಿ, ಅಂಬೇಡ್ಕರ್​ ಪ್ರತಿಮೆ ಎದುರು ಬೆಳಗ್ಗೆ 8.30ಕ್ಕೆ ಗೌರವಪೂರ್ವಕವಾಗಿ ಮಾಲಾರ್ಪಣೆ ಮಾಡಲಾಗುವುದು. ನಂತರ ನಗರದ ಪ್ರಮುಖ ಬೀದಿಗಳಲ್ಲಿ ಶಿಸ್ತುಬದ್ಧ ಮೆರವಣಿಗೆ ಆಯೋಜಿಸಲಾಗುವುದು ಎಂದರು.
ಜಯಂತಿ ಅಂಗವಾಗಿ ನಗರದ ಪ್ರಮುಖ ವೃತ್ತ, ಸಾರ್ವಜನಿಕ ಸ್ಥಳ ಹಾಗೂ ಪ್ರತಿಮೆಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡುವ ಜತೆಗೆ ವಿದ್ಯುತ್​ ದೀಪಾಲಂಕಾರ ಮಾಡಬೇಕು. ಜಿಲ್ಲಾ ಕೇಂದ್ರ ಸೇರಿ ಎಲ್ಲ ತಾಲೂಕು ಕೇಂದ್ರಗಳಲ್ಲಿ ಸರ್ಕಾರದ ಶಿಷ್ಟಾಚಾರದಂತೆ ಕಾರ್ಯಕ್ರಮ ಆಯೋಜಿಸಿ, ಆಹ್ವಾನ ಪತ್ರಿಕೆ ಮುದ್ರಿಸಿ ಗಣ್ಯರನ್ನು ಆಹ್ವಾನಿಸಬೇಕು. ಜಯಂತಿ ಕೇವಲ ಮೆರವಣಿಗೆಗೆ ಸೀಮಿತವಾಗದೆ, ಯುವಜನತೆಗೆ ಮಹನೀಯರ ಆದರ್ಶ, ಸಂವಿಧಾನಾತ್ಮಕ ಮೌಲ್ಯ ಹಾಗೂ ಕೃಷಿ ಮತ್ತು ಆಡಳಿತ ಸುಧಾರಣೆಗಳ ಕುರಿತು ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಮಾತನಾಡಿ, ಕಾರ್ಯಕ್ರಮದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗದಂತೆ ಪೊಲೀಸ್​ ಇಲಾಖೆಯಿಂದ ಬಿಗಿ ಬಂದೋಬಸ್ತ್​ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಸಮುದಾಯದ ಮುಖಂಡರು ಮಾತನಾಡಿ, ಜಯಂತಿಗಳು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗದೆ, ಸಮಾಜದ ಎಲ್ಲ ವರ್ಗದ ಜನರು ಒಗ್ಗೂಡಿ ಆಚರಿಸುವಂತಾಗಬೇಕು. ಎಲ್ಲ ಬಡಾವಣೆಗಳಿಂದ ಅಂಬೇಡ್ಕರ್​ ವೃತ್ತದವರೆಗೆ ಮೆರವಣಿಗೆ ಸಾಗಲಿದ್ದು, ವಿವಿಧ ಕಲಾ ತಂಡಗಳು ಭಾಗವಹಿಸಲಿವೆ. ಕಾರ್ಯಕ್ರಮ ಶಾಂತಿಯುತ ಹಾಗೂ ಸೌಹಾರ್ದಯುತವಾಗಿ ನಡೆಯಲು ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.
ಡಿಸಿಪಿ ಪ್ರವಿಣ ನಾಯಕ್​, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ಸಾಹಿತ್ಯಾ ಆಲದಕಟ್ಟಿ, ಜಿಪಂ ಉಪ ಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ, ಡಿಎಚ್​ಒ ಡಾ.ಶರಣಬಸಪ್ಪ ಕ್ಯಾತನಾಳ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸಂಗಮೇಶ, ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ರಾಜಶೇಖರ ಗೋನಾಯಕ ಇತರರಿದ್ದರು.

    ಡಾ.ಅಂಬೇಡ್ಕರ್​ ಜಯಂತಿ ಮೆರವಣಿಗೆ ಸಂದರ್ಭದಲ್ಲಿ          ಆಸ್ಪತ್ರೆಗಳ ಮುಂಭಾಗ ಧ್ವನಿವರ್ಧಕಗಳ ಶಬ್ದ ಕಡಿಮೆ            ಮಾಡುವುದರ ಜತೆಗೆ ಅಂಬುಲೆನ್ಸ್​ ಸಂಚಾರಕ್ಕೆ ಯಾವುದೇ      ಅಡ್ಡಿಯಾಗದಂತೆ ಕ್ರಮ ಕೈಗೊಳ್ಳಬೇಕು. ಮಹಿಳೆಯರ            ಸುರಕ್ಷತೆಗೆ ಆದ್ಯತೆ ನೀಡಬೇಕು.

       > ಬಿ.ಫೌಜಿಯಾ ತರನ್ನುಮ್​, 

               ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net