ಚಿಂಚೋಳಿ: ರೋಡ್ ಕಲ್ಲೂರ ಗ್ರಾಮದಲ್ಲಿ ಕಳೆದ 18 ವರ್ಷಗಳ ಹಿಂದೆ ಸ್ಥಾಪನೆಯಾದ ಚೆಟ್ಟಿನಾಡು ಸಿಮೆಂಟ್ ಕಂಪನಿ ಸ್ಥಳಿಯರಿಗೆ ನೀಡಿದ್ದ ಭರವಸೆ ಈಡೇರಿಸದೆ ಮೋಸ ಮಾಡುತ್ತಿದೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ರವಿಶಂಕರ ರೆಡ್ಡಿ ಆರೋಪಿಸಿದರು. ಕಾರ್ಖಾನೆಗಾಗಿ ಭೂಮಿ ನೀಡಿದ ರೈತರ ಕುಟುಂಬಗಳಿಗೆ ಇದುವರೆಗೂ ಸೂಕ್ತ ಉದ್ಯೋಗ ಕಲ್ಪಿಸಿಲ್ಲ. ಕಾನೂನು ಬಾಹಿರವಾಗಿ ಬೃಹತ್ ಮಟ್ಟದಲ್ಲಿ ಗಣಿಗಾರಿಕೆ ನಡೆಸಲಾಗುತ್ತಿದೆ. ಅಕ್ರಮ ಗಣಿಗಾರಿಕೆ ಮತ್ತು ನಿಯಂತ್ರಣವಿಲ್ಲದ ಸ್ಫೋಟಗಳಿಂದಾಗಿ ಕಲ್ಲೂರ್ ಗ್ರಾಮದಲ್ಲಿ ಈಗಾಗಲೇ 50ಕ್ಕೂ ಅಧಿಕ ಮನೆಗಳ ಗೋಡೆ ಬಿರುಕು ಬಿಟ್ಟಿವೆ. ಇದರಿಂದ ಗ್ರಾಮಸ್ಥರು ಜೀವಭಯದಲ್ಲಿ ದಿನ ಕಳೆಯುತ್ತಿದ್ದಾರೆ. ಹೀಗಾಗಿ ಪರಿಸರ, ಭೂ ಮತ್ತು ಗಣಿ ವಿಜ್ಞಾನಿ, ಕಾರ್ಮಿಕ ಇಲಾಖೆ, ಜಿಲ್ಲಾಧಿಕಾರಿಗಳು ಭೇಟಿ ನೀಡಿ ವಾಸ್ತವ ಅರಿತು ಈ ಭಾಗದ ರೈತರ, ಸಾರ್ವಜನಿಕರಿಗೆ ಪರಿಹಾರ ಕಲ್ಪಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು. ಹಣಮಂತ ಪೂಜಾರಿ, ಆರ್.ಆರ್.ಪಾಟೀಲ್, ಶರಣಪ್ಪ ಮಾಳಗೆ, ಎಸ್.ಕೆ.ಮುಕ್ತಾರ್, ಮಂಜೂರ್ ಅಹ್ಮದ್, ಜುಬೇರ್ ಪಟೇಲ್ ಇತರರಿದ್ದರು.