ಪಡಿತರಕ್ಕೆ ಜಾತಿ ಸರ್ಟಿಫಿಕೇಟ್ ಲಿಂಕ್ ಕಾನೂನು ಬಾಹಿರ

ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ
ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ
Published on
ಬೆಂಗಳೂರು: ರಾಜ್ಯ ಸರ್ಕಾರ ಪಡಿತರಕ್ಕೆ ಜಾತಿ ಪ್ರಮಾಣ ಪತ್ರ ಲಿಂಕ್ ಮಾಡುವುದು ಕಾನೂನು ಬಾಹಿರ. ಈ ಬಗ್ಗೆ ಮಾಹಿತಿ ಪಡೆಯುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಆಹಾರ ಭದ್ರತೆ ಒದಗಿಸುವಲ್ಲಿ ಯಾವುದೇ ಜಾತಿ ಲಿಂಕ್ ಮಾಡಲು ಸಾಧ್ಯವಿಲ್ಲ. ಕರ್ನಾಟಕ ಸರ್ಕಾರ ಪಡಿತರಕ್ಕೆ ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಿರುವ ಬಗ್ಗೆ ಸ್ಪಷ್ಟನೆ ಕೇಳಲಾಗಿದೆ. ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಪಡಿತರ ಪಡೆಯುವ ಫಲಾನುಭವಿಗಳಿಂದ ರಾಜ್ಯದಲ್ಲಿ ಜಾತಿ ಪ್ರಮಾಣ ಪತ್ರ ಕೇಳಲಾಗುತ್ತಿದೆ ಎಂಬ ವರದಿ ಬಂದಿದೆ.
ದೇಶದ ಪ್ರತಿಯೊಬ್ಬರಿಗೂ ಆಹಾರ ಭದ್ರತೆ ಒದಗಿಸುವಲ್ಲಿ ಬದ್ಧತೆ ತೋರಿದೆ. ಯಾವುದೇ ಜಾತಿ, ಜನಾಂಗ ಎನ್ನುವಂತಿಲ್ಲ. ಆದರೆ, ಕರ್ನಾಟಕದಲ್ಲಿ ಮಾತ್ರ ಪಡಿತರ ಪಡೆಯಲು ರಾಜ್ಯ ಸರ್ಕಾರ ಜಾತಿ ಪ್ರಮಾಣ ಪತ್ರ ಕಡ್ಡಾಯಗೊಳಿಸಿರುವುದು ನಿಜಕ್ಕೂ ದುರಂತ ಎಂದು ಜೋಶಿ ಆಕ್ಷೇಪಿಸಿದ್ದಾರೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಅರ್ಹ ಫಲಾನುಭವಿಗಳಿಗೆ ಅವರ ಆರ್ಥಿಕ ಸ್ಥಿತಿ ಮತ್ತು ಅರ್ಹತೆ ಆಧಾರದ ಮೇಲೆ ತಾರತಮ್ಯವಿಲ್ಲದೆ ಆಹಾರ ಧಾನ್ಯ ಒದಗಿಸಲಾಗುತ್ತಿದೆ. ಆದರೆ, ರಾಜ್ಯದಲ್ಲಿ ಆಧಾರ್, ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆಗಳ ಯಶಸ್ವಿ ಏಕೀಕರಣದ ಹೊರತಾಗಿಯೂ ಜಾತಿ ಪ್ರಮಾಣ ಪತ್ರ ಕಡ್ಡಾಯಗೊಳಿಸುವುದರ ಹಿಂದಿನ ಉದ್ದೇಶವೇನು ? ಎಂದು ಪ್ರಶ್ನಿಸಿದ್ದಾರೆ.
ದೇಶದ ಯಾವುದೇ ಭಾಗದಲ್ಲಿ ಅರ್ಹ ಫಲಾನುಭವಿಗಳಿಗೆ ಸಬ್ಸಿಡಿ ಆಹಾರ ಧಾನ್ಯ ಸುಲಭವಾಗಿ ಲಭ್ಯವಾಗುವಂತೆ ಕೇಂದ್ರ ಸರ್ಕಾರ ಈಗಾಗಲೇ ಒಂದು ರಾಷ್ಟ್ರ, ಒಂದು ಪಡಿತರ ಚೀಟಿ ಉಪಕ್ರಮವನ್ನು ಪರಿಚಯಿಸಿದೆ. ಹೀಗಿರುವಾಗ ಸ್ಥಳೀಯವಾಗಿ ಸಲ್ಲದ ನೀತಿ ನಿಯಮ ಹೇರುವುದು ಕಡುಬಡವರು ಪಡಿತರ ಪಡೆಯುವ ಆಶಯಕ್ಕೆ ವಿರುದ್ಧವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವರು ಕಿಡಿಕಾರಿದ್ದಾರೆ.
ಕರ್ನಾಟಕದಲ್ಲಿ ಪಡಿತರ ಯೋಜನೆಗೆ ಜಾತಿ ಲಿಂಕ್ ಮಾಡುತ್ತಿರುವ ಬಗ್ಗೆ ಸಂಪೂರ್ಣ ವಿವರ ಪಡೆಯಲು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಂದ ವಿವರಣೆ ಪಡೆಯಲು ಕಚೇರಿ ಉನ್ನತ ಅಧಿಕಾರಿಗಳಿಗೆ ನಿರ್ದೇಶಿಸಿದ್ದೇನೆ. ಪಿಡಿಎಸ್‌ನಲ್ಲಿ ಜಾತಿ ಪ್ರಮಾಣಪತ್ರ ಪಡೆಯುವುದು ಕಾನೂನು ಬಾಹಿರ. ಮತ್ತಿದು ಸ್ಥಾಪಿತ ಮಾರ್ಗಸೂಚಿಗಳು ಮತ್ತು ಎಸ್‌ಒಪಿಗಳಿಗೆ ವಿರುದ್ಧವಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಆಕ್ಷೇಪಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net