ಜೀವರಕ್ಷಕರ ‘ಗುಣ’ಬದ್ಧತೆ!

ವೈದ್ಯರ ದಿನಾಚರಣೆ
ವೈದ್ಯರ ದಿನಾಚರಣೆ
Published on

ಪ್ರಮುಖ ಮುಖ್ಯಾಂಶಗಳು

  • * ಡಾ.ಬಿ.ಸಿ. ರಾಯ್ ಸ್ಮರಣಾರ್ಥ ವೈದ್ಯರ ದಿನ ಆಚರಣೆ
  • * ಮುಖಗವಸು ಹಿಂದೆ: ಗುಣಪಡಿಸುವವರನ್ನು ಯಾರು ಗುಣಪಡಿಸುತ್ತಾರೆ? ಘೋಷವಾಕ್ಯ
ಬೆಂಗಳೂರು: ‘ವೈದ್ಯೋ ನಾರಾಯಣ ಹರಿಃ’ ಎಂಬ ಮಾತಿದೆ. ಜನರ ಆರೋಗ್ಯವನ್ನು ರಕ್ಷಿಸಿ ಚಿಕಿತ್ಸೆ ನೀಡಿ ಜೀವ ಉಳಿಸುವ ವೈದ್ಯರನ್ನು ದೇವರಿಗೆ ಹೋಲಿಸಲಾಗುತ್ತದೆ. ಅದರಂತೆ ದೇಶಾದ್ಯಂತ ಬುಧವಾರ (ಜುಲೈ 1) ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಗುತ್ತಿದ್ದು, ‘ಮುಖಗವಸು ಹಿಂದೆ: ಗುಣಪಡಿಸುವವರನ್ನು ಯಾರು ಗುಣಪಡಿಸುತ್ತಾರೆ?’ ಎಂಬ ಘೋಷವಾಕ್ಯದೊಂದಿಗೆ ಈ ಬಾರಿಯ ವೈದ್ಯರ ದಿನ ಆಚರಿಸಲಾಗುತ್ತಿದೆ.
ಇದು ವೈದ್ಯರ ಮಾನಸಿಕ, ಭಾವನಾತ್ಮಕ ಮತ್ತು ದೈಹಿಕ ಯೋಗಕ್ಷೇಮವನ್ನು ತೋರಿಸುತ್ತದೆ. ಇತರರನ್ನು ನೋಡಿಕೊಳ್ಳಲು ತಮ್ಮ ಜೀವನವನ್ನು ಕಳೆಯುವ ಜನರನ್ನು ಬೆಂಬಲಿಸಲು ಈ ದಿನ ಸಮಾಜವನ್ನು ನೆನಪಿಸುತ್ತದೆ. ವೈದ್ಯರ ಸೇವೆ ಔಷಧದ ಕೆಲಸವನ್ನೂ ಮೀರಿದ ಆಳವಾದ ಬದ್ಧತೆಯನ್ನು ಪ್ರದರ್ಶಿಸುತ್ತದೆ. ಕರುಣೆ, ನಿರಂತರತೆ ಮತ್ತು ವ್ಯಕ್ತಿ-ಕೇಂದ್ರಿತ ಮೌಲ್ಯಗಳೊಂದಿಗೆ ರೋಗಿಯ ಆರೈಕೆಯನ್ನು ಕೇಂದ್ರೀಕರಿಸುತ್ತದೆ.
ಭಾರತದಲ್ಲಿ 1991ರಲ್ಲಿ ಮೊದಲ ಬಾರಿ ವೈದ್ಯರ ದಿನ ಆಚರಿಸಲಾಯಿತು. ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿ ಹಾಗೂ ವೈದ್ಯರಾದ ಬಿಧನ್ ಚಂದ್ರ ರಾಯ್ ವೈದ್ಯಕೀಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಸ್ಮರಿಸಲು ಹಾಗೂ ಅವರ ಜ್ಞಾಪಕಾರ್ಥವಾಗಿ ಪ್ರತಿ ವರ್ಷ ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಗುತ್ತದೆ. ಡಾ. ಬಿಧನ್‌ಚಂದ್ರ ರಾಯ್ ಅವರು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಹಾಗೂ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಜನ್ಮದಿನ ಮತ್ತು ಪುಣ್ಯಸ್ಮರಣೆ ದಿನವನ್ನು ರಾಷ್ಟ್ರೀಯ ವೈದ್ಯ ದಿನವೆಂದು ಘೋಷಿಸಲಾಯಿತು.

ವೈದ್ಯರಿಗೆ ವಿಶೇಷ ಗೌರವ

ಭಾರತೀಯ ವೈದ್ಯಕೀಯ ಸಂಘದ ವತಿಯಿಂದ ಪ್ರತಿ ವರ್ಷ ರಾಷ್ಟ್ರೀಯ ವೈದ್ಯರ ದಿನದ ಆಚರಣೆಯೊಂದಿಗೆ ವೈದ್ಯರು ಹಾಗೂ ಆರೋಗ್ಯ ವೃತ್ತಿಪರರಿಗೆ ವಿಶೇಷ ಗೌರವ ಸಲ್ಲಿಸಲಾಗುತ್ತದೆ. ಭಾರತದಲ್ಲಿ ಜುಲೈ 1ರಂದು ಆಚರಿಸಿದರೆ, ಅಮೆರಿಕದಲ್ಲಿ ಮಾರ್ಚ್ 30ರಂದು, ಕ್ಯೂಬಾದಲ್ಲಿ ಡಿಸೆಂಬರ್ 3ರಂದು ಹಾಗೂ ಇರಾನ್‌ನಲ್ಲಿ ಆಗಸ್ಟ್ 23ರಂದು ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಗುತ್ತದೆ.

ಬಿಧನ್ ಚಂದ್ರ ರಾಯ್ ಜನ್ಮದಿನ

ಪಶ್ಚಿಮ ಬಂಗಾಳದಲ್ಲಿ 1882ರ ಜುಲೈ 1ರಂದು ಜನಿಸಿದ ಡಾ. ಬಿಧನ್ ಚಂದ್ರ ರಾಯ್, ಬಿ.ಸಿ. ರಾಯ್ ಎಂದೇ ಪ್ರಸಿದ್ಧರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಆಗಿ ಮಾತ್ರವಲ್ಲದೆ ಶ್ರೇಷ್ಠ ವೈದ್ಯರು ಆಗಿದ್ದರು. ಇವರು 1962ರಲ್ಲಿ ನಿಧನ ಹೊಂದಿದರು. ಇವರು ವೈದ್ಯಕೀಯ ವಿಜ್ಞಾನ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಾಗಿ 1961ರ ಫೆಬ್ರವರಿ 4ರಂದು ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅವರ ಜನನ ಮತ್ತು ಮರಣ ಎರಡೂ ಒಂದೇ ದಿನ ಆಗಿದ್ದರಿಂದ ಆ ದಿನದಂತೆ ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಗುತ್ತಿದೆ. ಈ ದಿನದಂದು ವೈದ್ಯರ ಮಹತ್ವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗತ್ತದೆ. ಹಾಗೆಯೇ ಜನರ ಜೀವ ಉಳಿಸುವಲ್ಲಿ ವೈದ್ಯರ ಕೊಡುಗೆ ಗುರುತಿಸಿ ಅವರನ್ನು ಅಭಿನಂದಿಸಲಾಗುವುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net