ಯಡ್ರಾಮಿಲ್ಲಿ ಶ್ರೀ ಸಿದ್ಧರಾಮ ಸ್ವಾಮಿಗಳ ಪುಣ್ಯಸ್ಮರಣೆ ನಿಮಿತ್ತ ಆಯೋಜಿಸಿದ್ದ ಶ್ರೀ ಗೋಲಗೇರಿ ಗೊಲ್ಲಾಳೇಶ್ವರ ಪುರಾಣ ಮಂಗಲ ಕಾರ್ಯಕ್ರಮದಲ್ಲಿ ನಿರಂಜನ ಪ್ರಭೆ ಗ್ರಂಥ ಬಿಡುಗಡೆ ಮಾಡಲಾಯಿತು. ಶ್ರೀ ಡಾ.ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ಪ್ರಭುಲಿಂಗ ಸ್ವಾಮೀಜಿ, ಶ್ರೀ ಪ್ರಭುನೀಲಕಂಠ ಸ್ವಾಮೀಜಿ, ಶ್ರೀ ಸಿದ್ಧಬಸವ ಸ್ವಾಮೀಜಿ, ಶ್ರೀ ಸಿದ್ಧಲಿಂಗ ಸ್ವಾಮೀಜಿ, ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ ಇತರರಿದ್ದರು.
ಯಡ್ರಾಮಿ: ಗುರುಗಳು ಸಮಾಜಕ್ಕೆ ತಮ್ಮ ಜೀವನ ಸಮರ್ಪಿಸಿ ಭಕ್ತರಿಗೆ ಆಧ್ಯಾತಿಕ ಜ್ಞಾನದ ಬೆಳವಣಿಗೆಗೆ ಪ್ರೇರಣೆ ನೀಡುತ್ತಾರೆ. ಗುರುವಿನ ಸ್ಮರಣೆ ಮಾಡುವುದರಿಂದ ಜೀವನ ಪಾವನವಾಗುತ್ತದೆ ಎಂದು ಬೈಲಹೊಂಗಲ ಮೂರು ಸಾವಿರ ಮಠದ ಶ್ರೀ ಪ್ರಭುನೀಲಕಂಠ ಸ್ವಾಮೀಜಿ ಹೇಳಿದರು.
ವಿರಕ್ತಮಠದಲ್ಲಿ ಶ್ರೀ ಸಿದ್ಧರಾಮ ಸ್ವಾಮೀಜಿ 5ನೇ ಪುಣ್ಯಸ್ಮರಣೆ ನಿಮಿತ್ತ ಶುಕ್ರವಾರ ರಾತ್ರಿ ಹಮ್ಮಿಕೊಂಡಿದ್ದ ಶ್ರೀ ಗೋಲಗೇರಿ ಗೊಲ್ಲಾಳೇಶ್ವರ ಪುರಾಣ ಮಂಗಲ ಹಾಗೂ ನಿರಂಜನ ಪ್ರಭೆ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಶ್ರೀ ಸಿದ್ಧರಾಮ ಸ್ವಾಮಿಗಳು ತ್ರಿಕಾಲ ಪೂಜಾ ನಿಷ್ಠರಾಗಿದ್ದರು. ಸ್ಮರಣೆ ನಿಮಿತ್ತ ಧಾರ್ಮಿಕ ಕಾರ್ಯಕ್ರಮದ ಜತೆಗೆ ಆದರ್ಶ ಮೌಲ್ಯಗಳನ್ನು ಬಿತ್ತುವ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಿರುವುದು ಮಾದರಿಯಾಗಿದೆ ಎಂದರು.
ಪುರಾಣ, ಪ್ರವಚನ ಕಾರ್ಯಕ್ರಮಗಳು ನಿರಂತರ ನಡೆಯುವುದರಿಂದ ಸಮಾಜದಲ್ಲಿ ಬದಲಾವಣೆ ತರಲು ಸಾದ್ಯವಾಗುತ್ತದೆ. ಪ್ರಸ್ತುತ ದಿನಗಳಲ್ಲಿ ನಡೆಯುತ್ತಿರುವ ಅನಾಚಾರಗಳನ್ನು ನಿತ್ಯ ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಿದ್ದೇವೆ. ಇದಕ್ಕೆಲ್ಲ ಕಾರಣ ಮನೆಯಲ್ಲಿನ ಸಂಸ್ಕಾರದ ಕೊರತೆ. ಹೀಗಾಗಿ ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಸಂಸ್ಕಾರವೂ ನೀಡಬೇಕು ಎಂದು ಸಲಹೆ ನೀಡಿದರು.
ಸೊನ್ನ ವಿರಕ್ತ ಮಠದ ಶ್ರೀ ಡಾ.ಶಿವಾನಂದ ಸ್ವಾಮಿಗಳು ಶಿಕ್ಷಕ ಬಸ್ಸಯ್ಯಸ್ವಾಮಿ ಕಕ್ಕೇರಾ ರಚಿಸಿರುವ ನಿರಂಜನ ಪ್ರಭೆ ಗ್ರಂಥ ಬಿಡುಗಡೆ ಮಾಡಿದರು.
ಸುರಪುರ ನಿಷ್ಠಿ ಕಡ್ಲೆಪ್ಪ ಮಠದ ಶ್ರೀ ಪ್ರಭುಲಿಂಗ ಸ್ವಾಮೀಜಿ, ಹಳೆಕೋಟೆ ವಿರಕ್ತಮಠದ ಶ್ರೀ ಸಿದ್ಧಬಸವ ಸ್ವಾಮೀಜಿ, ಮಾದನಹಿಪ್ಪರಗಿಯ ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ, ಯಡ್ರಾಮಿಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ಇತರರಿದ್ದರು.
ವಿಜಯವಾಣಿ ಸ್ಥಾನಿಕ ಸಂಪಾದಕರೂ ಆದ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ ಹಾಗೂ ವಿಜಯಪುರ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಇಂದುಶೇಖರ ಮಣ್ಣೂರ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು.
ಸಿದ್ಧರಾಮ ಶ್ರೀ ಮೂರ್ತಿ ಮೆರವಣಿಗೆ
ಯಡ್ರಾಮಿಯ ಪ್ರಮುಖ ಬೀದಿಗಳಲ್ಲಿ ಶುಕ್ರವಾರ ಸಂಜೆ ಶ್ರೀ ಸಿದ್ಧರಾಮ ಸ್ವಾಮಿಗಳ ಪಂಚಲೋಹ ಮೂರ್ತಿ ಹಾಗೂ ರಥದ ಮಾದರಿಯ ಭವ್ಯ ಮೆರವಣಿಗೆ ನಡೆಯಿತು. ಬಸವೇಶ್ವರ ದೇವಸ್ಥಾನದಿಂದ ಆರಂಭವಾದ ಶೋಭಾಯಾತ್ರೆಯೂ ವಿವಿಧ ಬೀದಿಗಳ ಮೂಲಕ ವಿರಕ್ತಮಠಕ್ಕೆ ತಲುಪಿತು. ವಿವಿಧ ವಾದ್ಯಗಳು, ಭಕ್ತರ ಭಜನೆ ಗಮನಸೆಳೆಯಿತು. ಮಹಿಳೆಯರು ೂರ್ಣಕುಂಭ ಹೊತ್ತು ಹೆಜ್ಜೆ ಹಾಕಿದರು. ಶನಿವಾರ ಬೆಳಗ್ಗೆ ಶ್ರೀಗಳ ಪಂಚಲೋಹ ಮೂರ್ತಿ ಪ್ರತಿಷ್ಠಾಪನೆ, ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ಮಹಾ ಮಂಗಳಾರತಿ ನೇರವೆರಿತು.