ಕಲಾವಿದರು ಸೀಮೋಲ್ಲಂಘನೆ ಮಾಡಲಿ

ಕಲಬುರಗಿಯಲ್ಲಿ ರಂಗಸಂಗಮ ಕಲಾವೇದಿಕೆ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಹಿರಿಯ ಕಲಾವಿದ ರಾಚಯ್ಯ ಸ್ವಾಮಿ, ಹುಬ್ಬಳ್ಳಿಯ ವೀಣಾ ಶರ್ಮ ಭೂಸನೂರ ಮಠ ಅವರಿಗೆ ರಂಗ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಹಮತ್​ ತರೀಕೆರೆ, ಪ್ರೊ.ಆರ್​.ಕೆ.ಹುಡಗಿ, ರಾಜಶೇಖರ ಎಸ್​., ಬಸವರಾಜ ಹೂಗಾರ, ಡಾ.ಸುಜಾತಾ ಜಂಗಮಶೆಟ್ಟಿ, ಶಿವಗೀತಾ, ಬಿ.ಎಚ್​.ನಿರಗುಡಿ ಇತರರಿದ್ದರು.
ಕಲಬುರಗಿಯಲ್ಲಿ ರಂಗಸಂಗಮ ಕಲಾವೇದಿಕೆ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಹಿರಿಯ ಕಲಾವಿದ ರಾಚಯ್ಯ ಸ್ವಾಮಿ, ಹುಬ್ಬಳ್ಳಿಯ ವೀಣಾ ಶರ್ಮ ಭೂಸನೂರ ಮಠ ಅವರಿಗೆ ರಂಗ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಹಮತ್​ ತರೀಕೆರೆ, ಪ್ರೊ.ಆರ್​.ಕೆ.ಹುಡಗಿ, ರಾಜಶೇಖರ ಎಸ್​., ಬಸವರಾಜ ಹೂಗಾರ, ಡಾ.ಸುಜಾತಾ ಜಂಗಮಶೆಟ್ಟಿ, ಶಿವಗೀತಾ, ಬಿ.ಎಚ್​.ನಿರಗುಡಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹಿರಿಯ ಸಾಹಿತಿ ಡಾ.ರಹಮತ್​ ತರೀಕೆರೆ ಸಲಹೆ
  • ಕಲಬುರಗಿಯಲ್ಲಿ ರಂಗ ಪ್ರಶಸ್ತಿ ಪ್ರದಾನ ಸಮಾರಂಭ
ಕಲಬುರಗಿ: ಕಲಾವಿದರು ಜಾತಿ, ಮತ, ಪಂಥ, ಭಾಷೆ ಮೀರಿ ಸೀಮೋಲ್ಲಂಘನೆ ಮಾಡಿದರೆ ಸಂವಿಧಾನ ಪ್ರೆಗೆ ಶಕ್ತಿ ತುಂಬುತ್ತದೆ ಎಂದು ಹಿರಿಯ ಸಾಹಿತಿ ಡಾ.ರಹಮತ್​ ತರೀಕೆರೆ ಹೇಳಿದರು.
ನಗರದ ವಿಶ್ವೇಶ್ವರಯ್ಯ ಭವನದಲ್ಲಿ ರಂಗಸಂಗಮ ಕಲಾವೇದಿಕೆ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಬ್ಬರು ಕಲಾವಿದರಿಗೆ ಎಸ್​.ಬಿ. ಜಂಗಮಶೆಟ್ಟಿ ಹಾಗೂ ಸುಭದ್ರಾದೇವಿ ಜಂಗಮಶೆಟ್ಟಿ ರಂಗ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಸಿನಿಮಾ, ರಂಗಭೂಮಿ, ಸಂಗೀತ ಕ್ಷೇತ್ರದ ಕಲಾವಿದರು ಗೆರೆಯನ್ನು ದಾಟಿ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೂಲಕ ಮನುಷ್ಯ ಬಂಧುತ್ವವನ್ನು ರೂಪಿಸುತ್ತಾರೆ. ಕಲಾ ಲೋಕ ಸೀಮೋಲ್ಲಂಘನದಿಂದ ಸಂವೇದನಾಶೀಲತೆ ಸೃಷ್ಟಿಯಾಗಿ ಮನರಂಜನೆಗಿಂತ ಮುಖ್ಯವಾಗಿ ಸಂಸ್ಕೃತಿ ಕಟ್ಟುವ ಕೆಲಸ ಸಾಧ್ಯವಾಗುತ್ತದೆ ಎಂದರು.
ಸ್ವಾತಂತ್ರ್ಯ ಸಂಗ್ರಾಮದ ಕೀರ್ತಿ ಕೇವಲ ಹೋರಾಟಗಾರರಲ್ಲದೆ ಕಲಾವಿದರಿಗೂ ಸಲ್ಲುತ್ತದೆ. ನಾಟಕ, ಸಿನಿಮಾ, ರಂಗಭೂಮಿ, ಸಂಗೀತ ಕಲಾವಿದರು ಗೆರೆ ಮೀರಿ ಬೆಳೆದ ಪರಿಣಾಮ ಅಮೀರಬಾಯಿ, ರಾಜೀವ್​ ತಾರಾನಾಥ್​, ಅಲಿ ಅಕ್ರಮ್​ ಖಾನ್​ ಇತರರು ಮುಖ್ಯರಾಗುತ್ತಾರೆ. ಹಿಂದುಸ್ತಾನಿ ಸಂಗೀತದ ಹಿಂದೆ ಸೂಫಿಸಂ ಪ್ರಭಾವ ಎದ್ದು ಕಾಣುತ್ತದೆ. ಕಲಾವಿದರು ಜಾತ್ಯತಿತ, ಧರ್ಮಾತೀತ ಭಾಷಾತೀತ, ಪರಂಪರೆ ಹುಟ್ಟುಹಾಕಿ ಹೊಸ ಸಮಾಜ ಸೃಷ್ಟಿಗೆ ಕಾರಣೀಭೂತರಾಗುತ್ತಿದ್ದಾರೆ. ಧ್ರುವಿಕೃತ ಸಮಾಜ ಸೃಷ್ಟಿಯಾಗುವ ಆತಂಕದ ಸಂದರ್ಭದಲ್ಲಿ ಒಳಗೊಳ್ಳುವಿಕೆಯ ಸಮಾಜ ಸೃಷ್ಟಿಗೆ ಕಲಾವಿದರ ಸೀಮೋಲ್ಲಂನೆ ಪ್ರೇರಣೆ ನೀಡುತ್ತದೆ ಎಂದು ಹೇಳಿದರು.
ಎಸ್​.ಜಾನಕಿ ತೆಲುಗಿನವರಾಗಿದ್ದರೂ ಕನ್ನಡದವರಾಗಿ ಬೆರೆತು ಹೋಗಿದ್ದಾರೆ. ಪ್ರಚಾರದ ಸೋಗಿನ ಸಂಗೀತ, ಸಿನಿಮಾ, ರಂಗಭೂಮಿಯ ಆತಂಕದ ನಡುವೆ ಮನರಂಜನೆಯಲ್ಲಿ ಸಂಸ್ಕೃತಿಯ ಆತ್ಮ ಕಾಪಾಡುವ ಕೆಲಸ ಕಲೆ ಮಾಡುತ್ತಿದೆ. ಅಂತಹ ಸಾಧನೆ ಮಾಡಿದ ಇಬ್ಬರಿಗೆ ಪ್ರಶಸ್ತಿ ನೀಡಿ ಗೌರವಿಸಿರುವುದನ್ನು ಶ್ಲಾಘಸಿದರು.
ಅಧ್ಯಕ್ಷತೆ ವಹಿಸಿದ್ದ ಚಿಂತಕ ಪ್ರೊ.ಆರ್​.ಕೆ. ಹುಡಗಿ ಮಾತನಾಡಿ, ಜಾತಿ ಆಧಾರದ ಮೇಲೆ ಧ್ರುವಿಕರಣ ಆಗುತ್ತಿರುವುದು ದುರ್ದೈವದ ಸಂಗತಿ. ಕಲೆ, ಸಂಗೀತ, ಸಾಹಿತ್ಯ, ನಾಟಕ, ಜನಪದ ಇವೆಲ್ಲವೂ ಜಾತಿ ಮೀರಿ ಬೆಳೆದಿವೆ. ಪ್ರಶಸ್ತಿಗೆ ಬೆನ್ನು ಬೀಳದೆ ಕಲಾವಿದರು ನತೆ ಗೌರವದಿಂದ ಬದುಕಬೇಕು. ನತೆಗೆ ಧಕ್ಕೆ ತರುವ ಪ್ರಶಸ್ತಿ ಬೇಡವೇ ಬೇಡ. ಸ್ವಾಭಿಮಾನಿ ಕಲಾವಿದರು ಪ್ರಶಸ್ತಿಗೆ ಅರ್ಜಿ ಹಾಕುವುದಿಲ್ಲ. ಹೀಗಾಗಿ ರಂಗಸಂಗಮ ಕಲಾವೇದಿಕೆ ಮುಂದಿನ ವರ್ಷದಿಂದ ಅರ್ಜಿ ಕರೆಯುವುದನ್ನು ನಿಲ್ಲಿಸಿ ನೇರವಾಗಿ ಗುರುತಿಸುವ ಪರಂಪರೆ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಜ್ಯ ಮಾಹಿತಿ ಆಯುಕ್ತ ರಾಜಶೇಖರ ಎಸ್​., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ನಿವೃತ್ತ ಉಪನ್ಯಾಸಕಿ ಭಾರತಿ ಮೋಹನ ಕೋಟಿ, ಕಲಬುರಗಿ ರಂಗಾಯಣ ನಿರ್ದೇಶಕಿ ಡಾ ಸುಜಾತಾ ಜಂಗಮಶೆಟ್ಟಿ ಮಾತನಾಡಿದರು.
ರಂಗಸಂಗಮ ಕಲಾ ವೇದಿಕೆ ಅಧ್ಯಕ್ಷೆ ಶಿವಗೀತಾ ಬಸವಪ್ರಭು ಉಪಸ್ಥಿತರಿದ್ದರು. ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್​.ನಿರಗುಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ಕಪಿಲ್​ ಚಕ್ರವರ್ತಿ ನಿರೂಪಣೆ ಮಾಡಿ ವಂದಿಸಿದರು. ಸಿದ್ಧಾರ್ಥ ಚಿಮ್ಮಾಇದ್ಲಾಯಿ ಮತ್ತು ಸಂಗಡಿಗರು ರಂಗಗೀತೆಗಳನ್ನು ಹಾಡಿದರು. ಹಿರಿಯ ಕಲಾವಿದ ರಾಚಯ್ಯ ಸ್ವಾಮಿ ಕೊಪ್ಪಳ ಹಾಗೂ ಹುಬ್ಬಳ್ಳಿಯ ವೀಣಾ ಶರ್ಮ ಭೂಸನೂರ ಮಠ ಅವರಿಗೆ ತಲಾ 10 ಸಾವಿರ ನಗದು, ಸ್ಮರಣಿಕೆಯೊಂದಿಗೆ ಎಸ್​.ಬಿ. ಜಂಗಮಶೆಟ್ಟಿ ಮತ್ತು ಸುಭದ್ರಾದೇವಿ ಜಂಗಮಶೆಟ್ಟಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
"

ದೈಹಿಕ ರೋಗಕ್ಕೆ ಔಷಧಗಳಿದ್ದರೂ ಮನಸ್ಸಿನ ರೋಗಕ್ಕೆ ಕಲೆಯೇ ದಿವ್ಯ ಔಷಧಿ. ಇಂತಹ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಸಂತಸವಾಗಿದೆ. ಉತ್ತರ ಕರ್ನಾಟಕದಲ್ಲಿ ಜನಿಸಿ ಹೊರರಾಜ್ಯಗಳಲ್ಲಿ ರಂಗ ಸೇವೆ ಮಾಡಿ ಕಲ್ಯಾಣ ಕರ್ನಾಟಕದಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರುವುದು ಹೆಮ್ಮೆಯ ಸಂಗತಿ.

— > ವೀಣಾ ಶರ್ಮಾ ಭೂಸನೂರಮಠ ಪ್ರಶಸ್ತಿ ಪುರಸತ ರಂಗ ಕಲಾವಿದೆ
"

ಕಲ್ಯಾಣ ಕರ್ನಾಟಕದ ಕಲಾವಿದರ ಕಡೆಗಣನೆಗೆ ಮನನೊಂದು 15 ವರ್ಷ ಹಿಂದೆ ರಂಗಸಂಗಮ ಸಂಸ್ಥೆ ಹುಟ್ಟು ಹಾಕಲಾಯಿತು. ರಾಜ್ಯಮಟ್ಟದ ಪ್ರಶಸ್ತಿ ಪಡೆದ ಎಲೆಮರೆಯ ರಂಗ ಕಲಾವಿದರನ್ನು ಗುರುತಿಸಿ ತಂದೆ-ತಾಯಿ ಹೆಸರಿನಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ.

— > ಡಾ.ಸುಜಾತ ಜಂಗಮಶೆಟ್ಟಿ ನಿರ್ದೇಶಕಿ, ರಂಗಾಯಣ ಕಲಬುರಗಿ
"

ಪ್ರಶಸ್ತಿ ತೆಗೆದುಕೊಳ್ಳುವುದು ಅಥವಾ ಕೊಡುವುದು ಒಂದು ಸಾಮಾಜಿಕ ಜವಾಬ್ದಾರಿ. ಕರ್ನಾಟಕ ಸರ್ಕಾರ ಹತ್ತಾರು ಕೋಟಿ ವೆಚ್ಚ ಮಾಡಿ ಪ್ರಶಸ್ತಿ ನೀಡುತ್ತಿದ್ದರೂ ಇಂತಹ ಸಂಘ-ಸಂಸ್ಥೆಗಳ ಪುರಸ್ಕಾರ ಕಲಾವಿದರಿಗೆ ಇನ್ನಷ್ಟು ಗೌರವ ತಂದು ಕೊಡುತ್ತಿದೆ.

— > ಬಸವರಾಜ ಹೂಗಾರ ಜಂಟಿ ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ




ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net