ಬೆಂಗಳೂರು : ಮನುಷ್ಯರನ್ನು ಬೆಸೆಯುವ ಶಕ್ತಿಯಾಗಿರುವ ಯಾವುದೇ ಭಾಷೆ ಮತ್ತೊಂದು ಭಾಷೆಯ ಅಳಿವಿನ ಮೇಲೆ ನಿಲ್ಲಬಾರದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.
ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಕನ್ನಡೇತರರಿಗೆ ಕನ್ನಡ ಕಲಿಸುವ ಉದ್ದೇಶದಿಂದ ಆರಂಭಿಸಲಾಗಿರುವ ಕನ್ನಡ-ಕಲಿ ತರಗತಿಯನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಭಾಷಾ ಕಲಹದಿಂದ ದೇಶದ ಭಾವೈಕ್ಯತೆಗೆ ಧಕ್ಕೆ ಬಾರದ ರೀತಿಯಲ್ಲಿ ಕಾರ್ಯೋನ್ಮುಖವಾಗುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದ್ದು, ಕನ್ನಡ-ಕಲಿ ತರಗತಿಗಳು ಈ ಉದಾತ್ತ ಆಶಯವನ್ನು ಸಾಹಕರಗೊಳಿಸಲಿವೆ ಎಂದರು.
ಸಂಸ್ಕೃತ ಮತ್ತು ಹಿಂದಿಯನ್ನು ಹೊರತುಪಡಿಸಿ ಅನುದಾನದ ಕೊರತೆಯಿಂದ ಬಹುತೇಕ ಭಾರತೀಯ ಭಾಷೆಗಳು ಸಂಕಷ್ಟ ಎದುರಿಸುತ್ತಿವೆ. ಸರ್ಕಾರ ನೀಡುವ ಸೀಮಿತ ಅನುದಾನದಲ್ಲಿಯೇ ಕನ್ನಡದ ಬೆಳವಣಿಗೆಗಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಲವು ಮಹತ್ವದ ಯೋಜನೆಗಳನ್ನು ರೂಪಿಸಿದ್ದು, ಅವುಗಳಲ್ಲಿ ಕನ್ನಡೇತರರಿಗೆ ಕನ್ನಡ ಕಲಿಸುವ ಕನ್ನಡ-ಕಲಿ ಕಾರ್ಯಕ್ರಮ ಪ್ರಮುಖವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ಲ, ಕ್ರೈಸ್ಟ್ ವಿವಿಯ ಕುಲಸಚಿವ ಡಾ. ಅನಿಲ್ ಜೋಸೆಫ್ ಪಿಂಟೋ, ಭಾಷಾ ವಿಭಾಗದ ಮುಖ್ಯಸ್ಥೆ ಡಾ. ಶ್ರೀಲತಾ, ಡಾ. ಶಿವಾನಂದ ಜವಳಿ, ಡಾ. ಎಂ.ಟಿ. ರತಿ ಹಾಗೂ ಇತರರು ಹಾಜರಿದ್ದರು.