ಬೆಂಗಳೂರಿನಲ್ಲಿ ಲ್ಯಾಂಕಾಸ್ಟರ್ ವಿವಿ ಕ್ಯಾಂಪಸ್

ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ
ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ
Published on
ಬೆಂಗಳೂರು: ಯುನೈಟೆಡ್ ಕಿಂಗ್ಡಮ್‌ನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ರಸೆಲ್ ಗ್ರೂಪ್‌ನ ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯ ಬೆಂಗಳೂರಿನಲ್ಲಿ ತನ್ನ ಕ್ಯಾಂಪಸ್ ಆರಂಭಿಸುತ್ತಿದೆ. ಮುಂದಿನ ದಿನಗಳಲ್ಲಿ ಕ್ವಿನ್ ಸಿಟಿಯಲ್ಲಿ ತನ್ನ ಕ್ಯಾಂಪಸ್ ತೆರೆಯಲಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ಖನಿಜ ಭವನದಲ್ಲಿ ಭೇಟಿ ಮಾಡಿದ ಲ್ಯಾಂಕಾಸ್ಟರ್ ವಿವಿಯ ಅಸೋಸಿಯೇಟ್ ಡೀನ್ ಮಾರ್ಕ್ ಸ್ಟೀವನ್ಸನ್ ನೇತೃತ್ವದ ಉನ್ನತ ಮಟ್ಟದ ಪ್ರತಿನಿಧಿಗಳ ಜತೆ ಸಚಿವರು ಮಾತುಕತೆ ನಡೆಸಿದರು.
ಈ ಕುರಿತು ಮಾಹಿತಿ ನೀಡಿರುವ ಎಂ.ಬಿ. ಪಾಟೀಲ್, ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯವು ಜಾಗತಿಕ ಮಟ್ಟದಲ್ಲಿ 164ನೇ ರ‌್ಯಾಂಕ್ ಹೊಂದಿದ್ದು, ಕ್ಯೂಎಸ್ ಶ್ರೇಯಾಂಕದಲ್ಲಿ 5-ಸ್ಟಾರ್ ಸ್ಥಾನಮಾನ ಹೊಂದಿದೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗವು ವಿದೇಶಿ ವಿವಿಗಳಿಗೆ ಹೊಂದಿರುವ ಮಾನದಂಡಗಳಿಗೆ ಅನುಗುಣವಾಗಿ ಬೆಂಗಳೂರು ಕ್ಯಾಂಪಸ್ ತೆರೆಯುತ್ತಿದೆ ಎಂದು ವಿವರಿಸಿದರು. ಬೆಂಗಳೂರು ಕ್ಯಾಂಪಸ್‌ನಲ್ಲಿ ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯವು ಬಿಝಿನೆಸ್, ವ್ಯವಸ್ಥಾಪನೆ ಮತ್ತು ಕಂಪ್ಯೂಟಿಂಗ್ ವಿಷಯಗಳಲ್ಲಿ ಪದವಿ ಕೋರ್ಸ್ ಆರಂಭಿಸುತ್ತಿದೆ.
ಯುನೈಟೆಡ್ ಕಿಂಗ್ಡಮ್ನಲ್ಲಿ ಅನುಸರಿಸುವ ಪಠ್ಯಕ್ರಮವನ್ನೇ ಇಟ್ಟುಕೊಳ್ಳಲಿದೆ. ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಸಿಗಲಿದ್ದು, ಕೈಗಾರಿಕೆ ಮತ್ತು ಶಿಕ್ಷಣ ಸಂಸ್ಥೆಗಳ ನಡುವಿನ ಸಹಭಾಗಿತ್ವದ ಬಲವರ್ಧನೆ ಆಗಲಿದೆ. ಈ ಮೂಲಕ ಬೆಂಗಳೂರು ನಗರವು ಜಾಗತಿಕ ಮಟ್ಟದಲ್ಲಿ ಉನ್ನತ ಶಿಕ್ಷಣದ ತಾಣವಾಗಿ ಬೆಳೆಯಲಿದೆ ಎಂದು ಪಾಟೀಲ ತಿಳಿಸಿದ್ದಾರೆ.
ನಿಯೋಗದಲ್ಲಿ ನಾವಿಟಾಸ್‌ನ ಯೂರೋಪಿನ ವಿವಿ ಸಹಭಾಗಿತ್ವ ಉಪಕ್ರಮಗಳ ಸಿಇಒ ಪಾಲ್ ಲವ್ಗ್ರೋವ್, ಜಾಗತಿಕ ಕಾರ್ಯತಂತ್ರ ಮುಖ್ಯಸ್ಥ ವಿಕಾಸ್ ಪಂಜ್ವಾನಿ, ಬ್ರಿಟಿಷ್ ಕೌನ್ಸಿಲ್‌ನ ದಕ್ಷಿಣ ಭಾರತದ ನಿರ್ದೇಶಕ ಜನಕ್ ಪುಷ್ಪನಾಥನ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net