ನಾಲವಾರ ವಲಯದ ಲಾಡ್ಲಾಪುರ&ಅಲಹಳ್ಳಿ ಮಧ್ಯದ ರಸ್ತೆ ದುರಸ್ತಿ ಕಾರ್ಯಕ್ಕೆ ಲೋಕೋಪಯೋಗಿ ಇಲಾಖೆ ಎಇಇ ಉಮೇಶ ಬಿ.ಕೆ. ಚಾಲನೆ ನೀಡಿದರು. ವಿಶ್ವನಾಥ ಗಾಂಧಿ, ಶಾಂತಕುಮಾರ ಎಣ್ಣಿ, ಸಿದ್ದರಾಜ ಮಲ್ಕಂಡಿ, ಸಾಬಣ್ಣ ಮುಸಲಾ, ಸಾಬಣ್ಣ ಗನಿಮನಿ, ಸಾಬಣ್ಣ ಗೊಡಗ, ಹಣಮಂತ ಗಲಿಗಿನ, ಮೌನೇಶ ದೊರೆ, ಮಲ್ಲಿಕಾರ್ಜುನ ಗಾಂಧಿ, ನಾಗರಾಜ ದೇವರೇಳ್ಕರ್, ಸಾಬಣ್ಣ ನಕಾಲಿ, ದೊಡ್ಡ ಸಾಬಣ್ಣ ಗೊಡಗ ಇತರರಿದ್ದರು.
ನಾಲವಾರ: ಲಾಡ್ಲಾಪುರ ಗ್ರಾಮದಿಂದ ಅಲಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ದುರಸ್ತಿ ಭಾಗ್ಯ ಬಂದಿದ್ದು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಕಾಮಗಾರಿ ಶುರು ಮಾಡಿದ್ದಾರೆ.
ಲಾಡ್ಲಾಪುರದಿಂದ ಅಲಹಳ್ಳಿ ಸುಮಾರು 3 ಕಿಮೀ ದೂರದಲ್ಲಿದ್ದು, ಪೂರ್ಣ ರೋಡ್ ಕಿತ್ತು ಹೋಗಿದ್ದು, ಕನಿಷ್ಠ ಪಾದಾಚಾರಿಗಳು ನಡೆದುಕೊಂಡು ಓಡಾಡದಂತ ಸ್ಥಿತಿ ಇತ್ತು. ಈ ರಸ್ತೆಯ 2021ರಲ್ಲಿ ರಾಷ್ಟ್ರೀಯ ಹೆದ್ದಾರಿಯ ಹೆಚ್ಚುವರಿ ಅನುದಾನದಲ್ಲಿ ನಿರ್ಮಿಸಲಾಗಿತ್ತು. ನಿರ್ಮಾಣವಾದ ವರ್ಷದಲ್ಲಿಯೇ ಕಿತ್ತು ಹೋಗಿದ್ದು, ಕಳೆದ 4 ವರ್ಷಗಳಿಂದ ಹಾಳಾಗಿರುವ ರೋಡಿನಲ್ಲಿ ಜನರು ತಿರುಗಾಟ ನಡೆಸುತ್ತಿದ್ದರು.
ಈ ಕುರಿತು ವಿಜಯವಾಣಿ ಜು.25ರ ಸಂಚಿಕೆಯಲ್ಲಿ "ಕೆಸರಿನ ರಸ್ತೆಯಲ್ಲಿ ಸಂಚಾರ ಕಷ್ಟ-ಕಷ್ಟ' ಎಂಬ ತಲೆಬರಹದಡಿ ವಿಶೇಷ ವರದಿ ಪ್ರಕಟಿಸಿತ್ತು. ಅಲ್ಲದೆ ಜನರ ಸಮಸ್ಯೆ ಮೇಲೆ ಬೆಳಕು ಚೆಲ್ಲಿತ್ತು. ವರದಿ ಪ್ರಕಟವಾಗುತ್ತಿದ್ದಂತೆ ಶನಿವಾರ ಲೋಕೋಪಯೋಗಿ ಇಲಾಖೆ ಎಇಇ ಉಮೇಶ ಬಿ.ಕೆ. ಅವರು ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ಇದರ ಬೆನ್ನಲ್ಲೆ 2 ಕೋಟಿ ರೂ. ವಿಶೇಷ ಪ್ಯಾಕೇಜ್ನಲ್ಲಿ 2 ಕಿಮೀ. ಸಿಸಿ ರಸ್ತೆ, ಚರಂಡಿ ನಿರ್ಮಾಣ ದುರಸ್ತಿ ಕಾರ್ಯ ನಡೆಯಲಿದೆ.
ಕಳೆದ 4 ವರ್ಷಗಳಿಂದ ಹಾಳಾದ ರಸ್ತೆಯಲ್ಲಿಯೇ ಸ್ಥಳಿಯ ಆಡಳಿತಕ್ಕೆ ಹಿಡಿಶಾಪ ಹಾಕುತ್ತಾ ಸಂಚರಿಸುತ್ತಿದ್ದ ಜನರು ಇದೀಗ ರಸ್ತೆ ದುರಸ್ತಿಯಿಂದ ಖುಷಿ ಪಡುತ್ತಿದ್ದು, ವಿಜಯವಾಣಿ ಕಾರ್ಯಕ್ಕೆ ಧನ್ಯವಾದ ಹೇಳಿದ್ದಾರೆ.