ಬೆಂಗಳೂರಿನ ಪ್ರಯೋಗಾಲಯಕ್ಕೆ ಕಸ್ಕೋಟಾ

ಚಿಂಚೋಳಿ ತಾಲೂಕಿನ ಗಾರಂಪಳ್ಳಿಯ ರೈತ ಗೋಪಾಲ ಎಂಬುವವರಿಂದ ಕಸ್ಕೋಟಾ ಕಳೆ ಬೆಳೆಯನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕೊಂಡೊಯ್ಯುತ್ತಿರುವ ಪಶು ಇಲಾಖೆ ಅಧಿಕಾರಿಗಳು. ಡಾ.ಮಸ್ತಾನ್​ ಅಲಿ, ಡಾ. ಸಂಕೇತ ಇದ್ದರು.
ಚಿಂಚೋಳಿ ತಾಲೂಕಿನ ಗಾರಂಪಳ್ಳಿಯ ರೈತ ಗೋಪಾಲ ಎಂಬುವವರಿಂದ ಕಸ್ಕೋಟಾ ಕಳೆ ಬೆಳೆಯನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕೊಂಡೊಯ್ಯುತ್ತಿರುವ ಪಶು ಇಲಾಖೆ ಅಧಿಕಾರಿಗಳು. ಡಾ.ಮಸ್ತಾನ್​ ಅಲಿ, ಡಾ. ಸಂಕೇತ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಾಣಿಗಳಲ್ಲಿ ಜೀರ್ಣವಾಗದ್ದಕ್ಕೆ ಪಶು ವೈದ್ಯಕಿಯ ಜೈವಿಕ ಸಂಸ್ಥೆಯಿಂದ ಸಂಶೋಧನೆ
ಚಿಂಚೋಳಿ: ಕಸ್ಕೋಟಾ ಕಳೆ ತಳಿ ಬೆಳೆಯನ್ನು ಸಂಪೂರ್ಣ ನಾಶ ಮಾಡುವುದರ ಜತೆಗೆ, ಸೊಪ್ಪನ್ನು ತಿಂದ ಪ್ರಾಣಿಗಳಲ್ಲಿ ಜೀರ್ಣವಾಗುತ್ತಿರಲಿಲ್ಲ. ಇದು ರೈತರಲ್ಲಿ ಆತಂಕ ಮೂಡಿಸಿತ್ತು. ಕಳೆ ನಾಶದ ನಿಯಂತ್ರಣಕ್ಕೆ ಈಗಾಗಲೇ ಕೃಷಿ ಇಲಾಖೆ ಹಲವು ಪ್ರಯೋಗಕ್ಕೆ ಮುಂದಾಗಿದೆ. ಇದರ ಜತೆಗೆ ಬೆಂಗಳೂರಿನ ಪಶು ವೈದ್ಯಕಿಯ ಜೈವಿಕ ಸಂಸ್ಥೆ ಜೀರ್ಣವಾಗದಿರುವ ಕುರಿತು ಪ್ರಯೋಗ ನಡೆಸಲು ಬೆಳೆಯನ್ನು ಕೊಂಡೊಯ್ದಿದೆ.
ಗಾರಂಪಳ್ಳಿ ಗ್ರಾಮಕ್ಕೆ ಜಿಲ್ಲಾ, ತಾಲೂಕು ಪಶು ವೈದ್ಯಾಧಿಕಾರಿಗಳು, ಬೆಂಗಳೂರಿನ ಪ್ರಾಣಿಗಳ ಆರೋಗ್ಯ ಹಾಗೂ ಪಶು ವೈದ್ಯಕಿಯ ಜೈವಿಕ ಸಂಸ್ಥೆ ಮತ್ತು ಪಶು ಆರೋಗ್ಯ ಸಂಶೋಧನಾ ತಂಡವೂ ಮಂಗಳವಾರ ಭೇಟಿ ನೀಡಿ ಮಾಹಿತಿ ಕಲೆ ಹಾಕುವುದರ ಜತೆಗೆ ಕಸ್ಕೋಟಾ ಕಳೆಯಲ್ಲಿರುವ ವಿಷಕಾರಿ ಅಂಶಗಳು ಅಥವಾ ಜೀರ್ಣಶಕ್ತಿ ಕುಂಠಿತಗೊಳಿಸುವ ರಾಸಾಯನಿಕಗಳ ಬಗ್ಗೆ ಪತ್ತೆ ಹಚ್ಚಲು ಮಾದರಿಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ತೆಗೆದುಕೊಂಡು ಹೋಗಿದೆ.
ಒಂದು ವಾರದ ಬಳಿಕ ಬೆಂಗಳೂರಿನ ಸಂಶೋಧನಾ ವರದಿ ಬರಲಿದ್ದು, ಆ ಬಳಿಕವೇ ಕಳೆಯಿಂದ ಕುರಿ ಸೇರಿ ಇನ್ನಿತರ ಪ್ರಾಣಿಗಳ ಜೀವಕ್ಕೆ ಎಷ್ಟು ಅಪಾಯವಿದೆ ಮತ್ತು ಇದಕ್ಕೆ ಸೂಕ್ತ ಚಿಕಿತ್ಸೆಗಳೇನು ಎಂಬುದು ಅಧಿಕೃತವಾಗಿ ತಿಳಿದುಬರಲಿದೆ.
ಪಶು ಇಲಾಖೆ ಸಲಹೆ
ಹೊಲದ ಬೇಲಿಗಳಲ್ಲಿ ಹಳದಿ ಬಣ್ಣದ ಕಸ್ಕೋಟಾ ಕಳೆ ಹೆಚ್ಚಾಗಿದ್ದು, ಅಲ್ಲಿ ಕುರಿ& ಮೇಕೆಗಳನ್ನು ಮೇಯಲು ಬಿಡಬೇಡಿ. ಬಾಧಿತ ಪ್ರಾಣಿಗಳಿಗೆ ಸುಲಭವಾಗಿ ಜೀರ್ಣವಾಗುವ ಹಸಿರು ಮೇವು ಹಾಗೂ ಜೀರ್ಣಶಕ್ತಿ ಹೆಚ್ಚಿಸುವ ದ್ರಾವಣಗಳನ್ನು ನೀಡಿ. ಕುರಿಗಳು ಅಸ್ವಸ್ಥಗೊಂಡ ತಣ ಹತ್ತಿರದ ಪಶು ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಕೊಡಿಸಿ ಎಂದು ಪಶು ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.
"

ಕುರಿಗಳು ಕಸ್ಕೋಟಾ ಕಳೆ ತಿಂದ ನಂತರ ಸರಿಯಾಗಿ ಮೇವು ತಿನ್ನುತ್ತಿಲ್ಲ. ದಿನದಿಂದ ದಿನಕ್ಕೆ ಸೊರಗುತ್ತಿವೆ. ಅಜೀರ್ಣ ಸಮಸ್ಯೆಯಿಂದ ಬಳಲುತ್ತಿವೆ. ಹೊಟ್ಟೆಯುಬ್ಬರ ಕಾಣುತ್ತದೆ. ಹಿಕ್ಕೆಯಲ್ಲಿ ಹಳದಿ ಬಣ್ಣದ ಕಳೆ ಬೆಳೆ ಹಾಗೆಯೇ ಹೊರಬರುತ್ತಿದೆ. ನಮಗೆ ಏನು ತೋಚದಂತಾಗಿದೆ. ಸೂಕ್ತ ಪರಿಶೀಲನೆ ನಡೆಸಿ, ಪರಿಹಾರದ ಕ್ರಮ ಕೈಗೊಳ್ಳಬೇಕಿದೆ.

— > ತುಕ್ಕಪ್ಪ ಪೂಜಾರಿ, ರೈತ, ಮರಪಳ್ಳಿ
"

ಈಗಾಗಲೇ ಕಸ್ಕೋಟಾ ಕಳೆ ಮಾದರಿಯನ್ನು ಕಲಬುರಗಿ, ಬೆಂಗಳೂರಿನ ಪ್ರಾಣಿಗಳ ಆರೋಗ್ಯ ಹಾಗೂ ಪಶು ವೈದ್ಯಕಿಯ ಜೈವಿಕ ಸಂಸ್ಥೆ ಮತ್ತು ಪಶು ಆರೋಗ್ಯ ಸಂಶೋಧನಾ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕುರಿಗಳು ಅಸ್ವಸ್ಥಗೊಂಡ ತಣ ಹತ್ತಿರದ ಪಶು ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಕೊಡಿಸುವ ಕೆಲಸ ಮಾಡಿ.

— > ಡಾ.ಮಲ್ಲಿಕಾರ್ಜುನ ಗುತ್ತೇದಾರ್​, ಆರೋಗ್ಯ ಅಧಿಕಾರಿ, ಪಶು ಇಲಾಖೆ



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net