ಮಾಗಡಿ ತಾಲೂಕಿನ ಬಾಚೇನಹಟ್ಟಿಯ ಕೆಪಿಎಸ್ ಶಾಲಾ ಕಟ್ಟಡ ನಿರ್ಮಾಣಕ್ಕೆ ಜಾಗವನ್ನು ಸಚಿವ ಬಾಲಕೃಷ್ಣ ಪರಿಶಿಲಿಸಿದರು. ತಹಸೀಲ್ದಾರ್ ರಂಜಿತ್ ಕೆ.ಆರ್., ಡಿಡಿಪಿಐ ಸ್ವಾಮಿ, ಬಿಇಒ ರಾಜೇಗೌಡ, ಲೋಕೋಪಯೋಗಿ ಇಲಾಖೆ ಎಇಇ ಶಿವಕುಮಾರ್, ವಲಯ ಅರಣ್ಯಾಧಿಕಾರಿ ಟಿ.ನೇತ್ರಾವತಿ, ಪ್ರಾಂಶುಪಾಲ ರಮೇಶ್, ಮುಖ್ಯ ಶಿಕ್ಷಕ ಮೃತ್ಯುಂಜಯ, ಸಿಆರ್‌ಪಿ ಶ್ರೀನಿವಾಸ್, ಜಿ.ನಾರಾಯಣ್ ಇತರರು ಇದ್ದರು.
ಪ್ರತಿ ಪಂಚಾಯಿತಿಗೆ ಒಂದು ಕೆಪಿಎಸ್ ಶಾಲೆ ಸ್ಥಾಪಿಸಿ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಸಚಿವ ಎಚ್.ಸಿ.ಬಾಲಕೃಷ್ಣ ಹೇಳಿದರು.
ಬಾಚೇನಹಟ್ಟಿಯ ಕೆಪಿಎಸ್ ಶಾಲಾ ಕಟ್ಟಡ ನಿರ್ಮಾಣ ಜಾಗ ಪರಿಶೀಲಿಸಿ ಮಾತನಾಡಿದ ಅವರು, ಗ್ರಾಮೀಣ ಮತ್ತು ಹಿಂದುಳಿದ ಭಾಗದ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಕೆಪಿಎಸ್ ಶಾಲೆ ಮುಂಜೂರು ಮಾಡಲಾಗಿದ್ದು, ಅಗತ್ಯ ಸವಲತ್ತುಗಳನ್ನು ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರತಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ 3ರಿಂದ 4 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಜಾಗದ ಲಭ್ಯತೆ ಆಧರಿಸಿ ವ್ಯವಸ್ಥಿತ ಕಟ್ಟಡ ನಿರ್ಮಿಸಲಾಗುವುದು. ಶಾಲೆಗೆ ಜಾಗ ಅಥವಾ ಹೆಚ್ಚುವರಿ ನೆರವು ನೀಡುವ ದಾನಿಗಳ ಹೆಸರನ್ನೇ ಕಟ್ಟಡಕ್ಕೆ ಇಡಲಾಗುವುದು. ಬಾಚೇನಹಟ್ಟಿಯಲ್ಲಿ ಕಿರಿದಾದ ಸ್ಥಳವಿದ್ದು, ದಾನಿಗಳ ಸಹಾಕರದಿಂದ ಜಾಗ ಪಡೆದು ಸುಂದರ ಶಾಲೆ ನಿರ್ಮಿಸಲಾಗುವುದು. ಚಕ್ರಭಾವಿಗೆ ಶೀಘ್ರವೇ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು.
ಖಾಸಗಿ ಶಾಲೆಗಳಂತೆ ಗ್ರಾಮೀಣ ಮಕ್ಕಳನ್ನು ಶಾಲೆಗೆ ಕರೆತರಲು ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಉಚಿತ ಬಸ್ ವಾಹನ ಒದಗಿಸಲಾಗುವುದು. ಕ್ಷೇತ್ರದಲ್ಲಿ ಈಗಾಗಲೇ ಸುಮಾರು 10 ಕೆಪಿಎಸ್ ಶಾಲೆಗಳು ಹಾಗೂ ಕುದೂರಿನಲ್ಲಿ ರಾಜ್ಯಕ್ಕೆ ಮಾದರಿ ಶಾಲೆ ಆರಂಭಿಸಲಾಗಿದೆ. ಉತ್ತಮ ಶಿಕ್ಷಣ, ಆರೋಗ್ಯ ಮತ್ತು ರೈತರಿಗೆ ಅನುಕೂಲಕರ ಕಾರ್ಯಕ್ರಮಗಳನ್ನು ನೀಡುವುದೇ ಸರ್ಕಾರದ ಗುರಿ ಎಂದರು.
ಬಾಚೇನಹಟ್ಟಿ ಕೆಪಿಎಸ್ ಶಾಲೆ ಕಟ್ಟಡದ ನೀಲಿನಕ್ಷೆ ಬದಲು ಚಕ್ರಭಾವಿ ಶಾಲೆಯ ನೀಲಿನಕ್ಷೆ ತಂದಿದ್ದ ಆನಂದ್ ನಾಯರ್ ವಿರುದ್ಧ ಕೆಂಡಮಂಡಲರಾದ ಸಚಿವರು ಸ್ಥಳಕ್ಕೆ ಆಗಮಿಸುವಾಗ ನಿಖರವಾದ ಯೋಜನಾ ನಕ್ಷೆ ಮತ್ತು ಮಾಹಿತಿಯೊಂದಿಗೆ ಬರಬೇಕಿತ್ತು. ಸ್ಥಳದ ವಿಸ್ತೀರ್ಣ ಹಾಗೂ ನೈಜ ಪರಿಸ್ಥಿತಿಗೆ ತಕ್ಕಂತೆ ಪ್ರತ್ಯೇಕ ನಕ್ಷೆಗಳನ್ನು ಸಿದ್ಧಪಡಿಸುವುದನ್ನು ಬಿಟ್ಟು, ಎಲ್ಲಕ್ಕೂ ಒಂದೇ ರೀತಿಯ ಸಾಮಾನ್ಯ ಯೋಜನೆಯನ್ನು ಅನುಸರಿಸಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು. ಅಲ್ಲದೆ, ಸಾರ್ವಜನಿಕ ಕೆಲಸಗಳಲ್ಲಿ ಈ ರೀತಿಯ ಅಸಡ್ಡೆ ಮತ್ತು ಬೇಜವಾಬ್ದಾರಿ ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು. ಈ ವೇಳೆ ತಮ್ಮ ಬಳಿಯಿದ್ದ ದಾಖಲೆಗಳನ್ನು ಪ್ರದರ್ಶಿಸಲು ಯತ್ನಿಸಿದರಾದರೂ, ಸಚಿವರ ಪ್ರಶ್ನೆಗಳಿಗೆ ಸೂಕ್ತ ಸಮಜಾಯಿಷಿ ನೀಡಲು ಪರದಾಡಿದರು.