ಭಾಲ್ಕಿ: ಕೋನಮೇಳಕುಂದಾ ಗ್ರಾಮದಲ್ಲಿ ಹಜರತ್ ಸಾನಿಸಾಹೇಬ್(ಮಡ್ಡಿ ಪೀರ್) ದೇವರ ಜಾತ್ರೆ ಗುರುವಾರದಿಂದ ಎರಡು ದಿನ ಶ್ರದ್ಧೆ, ಭಕ್ತಿಯಿಂದ ನೆರವೇರಲಿದೆ. ಗ್ರಾಮದ ಹೊರವಲಯದ ಬೀದರ್ ಮುಖ್ಯರಸ್ತೆಯ ಎಡಭಾಗದ ನಿಸರ್ಗದ ಮಡಿಲು(ಗುಡ್ಡದ ಪ್ರದೇಶ)ದಲ್ಲಿ ನಡೆಯಲಿರುವ ಈ ಜಾತ್ರೆ ಹಿಂದೂ-&ಮುಸ್ಲಿಂರ ಭಾವೈಕ್ಯತೆಗೆ ಸಾಕ್ಷಿಯಾಗಲಿದೆ. ಜಾತ್ರೆ ಹಿನ್ನೆಲೆಯಲ್ಲಿ ದರ್ಗಾಕ್ಕೆ ಸುಣ್ಣ ಬಳಿದು ಸಿಂಗರಿಸಲಾಗಿದೆ. ಕವ್ವಾಲಿ ಗಾಯನಕ್ಕೆ ವೇದಿಕೆ ಸಿದ್ಧಗೊಂಡಿದೆ. ಗ್ರಾಮದಲ್ಲಿ ಗುರುವಾರ ಕುದುರೆ ಮೇಲೆ ಗಂಧ(ಸಂದಲ್) ಲೇಪಿಸಿಮೆರವಣಿಗೆ ಮೂಲಕ ಜಾತ್ರೆಗೆ ಚಾಲನೆ ನೀಡಲಾಗುತ್ತದೆ. ಶುಕ್ರವಾರ ನಡೆಯಲಿರುವ ಐತಿಹಾಸಿಕ ಜಾತ್ರೆಗೆ ಗ್ರಾಮ ಅಷ್ಟೇ ಅಲ್ಲದೇ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರ ದಂಡೆ ಹರಿದು ಬರಲಿದೆ. ಸಾವಿರಾರೂ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ನೈವೇದ್ಯ, ಕಾಯಿ, ಕರ್ಪೂರ ಅರ್ಪಿಸಿ ತಮ್ಮ ಹರಕೆ ತೀರಿಸಿ ಭಕ್ತಿಯನ್ನು ಸಮರ್ಪಣೆ ಮಾಡಲಿದ್ದಾರೆ. ಆಗಮಿಸುವ ಭಕ್ತರಿಗೆ ಅನ್ನದಾಸೋಹ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.