ಪೂಜೇನಹಳ್ಳಿಯ ತೋಟಗಾರಿಕಾ ಪ್ರದೇಶದಲ್ಲಿ ಮಾವು, ಬಾಳೆ, ದಾಳಿಂಬೆ ಹಣ್ಣು ಮತ್ತು ತರಕಾರಿಗಳ ಸಂಸ್ಕರಣೆ ಮತ್ತು ರಫ್ತಿಗಾಗಿ ಸ್ಥಾಪಿಸಿದ್ದ ಸಮಗ್ರ ಶೀತಲ ಸರಪಳಿ ಘಟಕದ ಕಾರ್ಯಾಚರಣೆ ಮತ್ತು ನಿರ್ವಹಣೆಯ ಹೊಣೆಯನ್ನು 2024ರ ಏಪ್ರಿಲ್ 19ರಂದು ಮೆ.ಫಿಜಾ ಗ್ಲೋಬಲ್ ಆಗ್ರೋವೆಂಚರ್ಸ್ ಪ್ರೈವೇಟ್ ಲಿಮಿಟೆಡ್‌ಗೆ ವಹಿಸಲಾಗಿತ್ತು. ಸದರಿ ಸಂಸ್ಥೆಯು ಒಡಂಬಡಿಕೆ ಅನುಸಾರ ಕಾಲಕಾಲಕ್ಕೆ ಘಟಕದ ಬಾಡಿಗೆ ಪಾವತಿಸಿರಲಿಲ್ಲ. ಅಲ್ಲದೆ ಒಪ್ಪಂದದ ಹೊರತಾಗಿ ಘಟಕವನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸಂಸ್ಥೆಗೆ ಹಲವು ನೋಟಿಸ್ ನೀಡಲಾಗಿತ್ತು. ಆದರೂ ಪ್ರತಿಕ್ರಿಯೆ ನೀಡದ ಕಾರಣ 2025ರ ಜು. 28ರಂದು ಅಂತಿಮವಾಗಿ ವಕೀಲರ ಮುಖಾಂತರ ಟರ್ಮಿನೇಷನ್ ನೋಟಿಸ್ ನೀಡಿ, ಘಟಕವನ್ನು ಕೆಪೆಕ್ ವಶಕ್ಕೆ ನೀಡಲು ಸೂಚಿಸಲಾಗಿತ್ತು. ಆದರೂ ಸಂಸ್ಥೆ ಘಟವನ್ನು ಹಸ್ತಾಂತರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸಾರ್ವಜನಿಕ ಆವರಣಗಳ (ಅನಧಿಕೃತ ನಿವಾಸಿಗಳ ತೆರವು) ಅಧಿನಿಯಮ 1974ರಡಿಯಲ್ಲಿ ಸರ್ಕಾರಕ್ಕೆ ಸಲ್ಲಿಸಿದ್ದ ಕೋರಿಕೆ ಮೇರೆಗೆ ಸಿ.ಎನ್. ಶಿವಪ್ರಕಾಶ್ ಅವರನ್ನು ತೆರವು ಅಧಿಕಾರಿಯನ್ನಾಗಿ ನೇಮಿಸಿ ಸರ್ಕಾರ ಆದೇಶಿಸಿತ್ತು. ಅದರಂತೆ 2026ರ ಏಪ್ರಿಲ್ 10ರಂದು ತೆರವು ಆದೇಶ ಹೊರಡಿಸಿ ಸಂಸ್ಥೆಗೆ 45 ದಿನ ಅವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ಸಂಸ್ಥೆ ಸ್ವಯಂ ಪ್ರೇರಣೆಯಿಂದ ಘಟಕವನ್ನು ಹಸ್ತಾಂತರಿಸದೇ ಇದ್ದ ಕಾರಣ ಮಂಗಳವಾರ ಘಟಕವನ್ನು ಕೆಪೆಕ್ ಸ್ವಾಧೀನಕ್ಕೆ ಪಡೆಯಲಾಯಿತು.