ಎಂಎಲ್​ಸಿ ಸ್ಥಾನ ನೀಡಿ ಮಾತು ಉಳಿಸಿಕೊಳ್ಳಿ

ಶರಣಪ್ಪ ಸಲಾದಪುರ
ಶರಣಪ್ಪ ಸಲಾದಪುರ
Published on

ಪ್ರಮುಖ ಮುಖ್ಯಾಂಶಗಳು

  • ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಎಚ್ಚರಿಕೆ
  • ಭರವಸೆಗೆ ಮಾಜಿ ಸಚಿವ ದರ್ಶನಾಪುರ ಅವರೇ ಸಾಕ್ಷಿ
ಯಾದಗಿರಿ: ಬರುವ ಜುಲೈ ತಿಂಗಳಲ್ಲಿ ಖಾಲಿಯಾಗಲಿರುವ ವಿಧಾನ ಪರಿಷತ್​ ಸ್ಥಾನಕ್ಕೆ ತಮ್ಮನ್ನು ನಾಮ ನಿರ್ದೇಶನ ಮಾಡುವ ಮೂಲಕ ಕಳೆದ ಸುಮಾರು ಎರಡು ದಶಕಗಳ ಹಿಂದೆ ಕೊಟ್ಟ ಮಾತು ಉಳಿಸಿಕೊಳ್ಳಬೇಕು ಮತ್ತು ಈ ಮೂಲಕ ದೊಡ್ಡ ಸಮುದಾಯಗಳಲ್ಲಿ ಒಂದಾಗಿರುವ ಕುರುಬ ಸಮಾಜಕ್ಕೆ ನ್ಯಾಯ ಒದಗಿಸಬೇಕು ಎಂದು ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಗುರುವಾರ ಸುದ್ದಿಗೋಷ್ಠುಯಲ್ಲಿ ಮಾತನಾಡಿದ ಅವರು, 2018ರಲ್ಲಿ ನನ್ನನ್ನು ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ ಅವರೇ ಮಲ್ಲಿಕಾರ್ಜುನ ಖರ್ಗೆ ಅವರ ಬಳಿ ಕರೆದುಕೊಂಡು ಹೋಗಿ ಪಕ್ಷಕ್ಕೆ ಸೇರ್ಪಡೆ ಮಾಡಿಸಿದ್ದಾರೆ. ಆಗ ಖರ್ಗೆ ಕುಟುಂಬದವರು ನನ್ನನ್ನು ಬರುವ ದಿನಗಳಲ್ಲಿ ಎಂಎಲ್​ಸಿ ಮಾಡುವುದಾಗಿ ಮಾತು ಕೊಟ್ಟಿದ್ದರು. ಇದಕ್ಕೆ ದರ್ಶನಾಪುರ ಅವರೇ ಬಲವಾದ ಸಾಕ್ಷಿ. ಇದಲ್ಲದೇ 2023ರ ಚುನಾವಣೆ ವೇಳೆ ಇದೇ ತರಹದ ಭರವಸೆ ನೀಡಿದ್ದರೂ ಆದರೂ ಇದುವರೆಗೂ ಅವೆಲ್ಲವೂ ಹುಸಿಯಾಗುತ್ತಲಿವೆ. ಹೀಗಾಗಿ ದರ್ಶನಾಪುರ ಅವರು ಪಕ್ಷದ ನಾಯಕರ ಮೇಲೆ ಈ ಕುರಿತಂತೆ ಒತ್ತಡ ಹೇರಬೇಕು ಎಂದು ಹೇಳಿದರು.
ಪ್ರತಿ ಸಲ ಹೀಗೆ ವಿಧಾನ ಪರಿಷತ್​ಗೆ ನಾಮನಿರ್ದೇಶನ ಮಾಡುವಾಗ ನನಗೆ ಅವಕಾಶ ನೀಡಿ ಎಂದು ಕೇಳಿದರೂ ಅದು ಆಗುತ್ತಿಲ್ಲ, ಇದಕ್ಕೆ ಏನು ಕಾರಣ ತಿಳಿಯುತ್ತಿಲ್ಲ, ನಮ್ಮ ಹಣೆಬರವೇ ಸರಿಯಿಲ್ಲ ಅಂತ ಅನಿಸುತ್ತದೆ. ರಾಜಕೀಯ ನನ್ನನ್ನು ನಂಬಿದವರು ಇದ್ದಾರೆ. ಹೀಗಾಗಿ ಮನಸ್ಸಿಗೆ ಬಹಳಷ್ಟು ನೋವು ಆಗಿದೆ. ಆದರೂ ರಾಜಕೀಯದಲ್ಲಿ ತಾಳ್ಮೆ ಮುಖ್ಯ ಎನ್ನುವಂತೆ ಇದುವರೆಗು ತುಟಿ ಬಿಚ್ಚದೆ ಕಾಯುತ್ತಿರುವೆ. ಕಾರಣ ಈಗ ಅವಕಾಶ ಮಾಡಿಕೊಡಿ ಎಂದು ಅವರು ಮನವಿ ಮಾಡಿದ್ದಾರೆ.
ನಮ್ಮ ನಾಯಕ ಮಲ್ಲಿಕಾರ್ಜುನ ಖರ್ಗೆ
ನಾನು ಕಲ್ಯಾಣ ಕರ್ನಾಟಕ ಭಾಗದ ಕುರುಬ ಸಮಾಜದ ಹಿರಿಯ ನಾಯಕ, ಅತ್ತ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಕುರುಬ ಸಮಾಜದವರೇ ಆದರೂ ಇಂದಿಗೂ ನಾನು ಯಾರು ಅಂತಾ ಅವರಿಗೆ ಗೊತ್ತಿಲ್ಲ. ಕಾರಣ ಅವರನ್ನು ಒಂದು ಸಲವೂ ಭೇಟಿ ಮಾಡಿಲ್ಲ. ಯಾಕೇ ಗೊತ್ತಾ ನಮ್ಮ ನಾಯಕರು ಮಲ್ಲಿಕಾರ್ಜುನ ಖರ್ಗೆ ಎಂದು ಒಪ್ಪಿಕೊಂಡು ರಾಜಕೀಯ ಮಾಡುವವನು. ಒಂದು ಸಲ ಮಾತು ಕೊಟ್ಟರೆ ಮುಗಿಯಿತು. ಅದನ್ನು ಶಿರಸಾವಹಿಸಿ ಮುಗಿಸುವ ಜಾಯಮಾನ ನನ್ನದು. ಅದಕ್ಕಾಗಿ ಹಿಂದೆ ನನಗೆ ಕೊಟ್ಟ ಮಾತಿನಂತೆ ವಿಧಾನ ಪರಿಷತ್​ಗೆ ನಾಮನಿರ್ದೇಶನ ಮಾಡಬೇಕು. ದರ್ಶನಾಪುರ ಅವರು ಈ ನಿಟ್ಟಿನಲ್ಲಿ ಒತ್ತಾಯ ಮಾಡಬೇಕು ಎಂದು ಹೇಳಿದರು.
ಪ್ರೀತಿ-ಅಭಿಮಾನಕ್ಕೆ ಅಧ್ಯಕ್ಷನಾಗಿದ್ದೇನೆ
ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಶರಣಪ್ಪ, ನಾನೇನು ಇದು ಕೇಳಿರಲಿಲ್ಲ. ಸಚಿವ ಪ್ರಿಯಾಂಕ್​ ರ್ಖಗೆ ಅವರು ದೂರವಾಣಿ ಮೂಲಕ ಮಾತನಾಡಿ, ನಿಮಗೆ ಈ ಸ್ಥಾನ ಕೊಡಲಾಗುತ್ತಿದೆ. ಸ್ವೀಕರಿಸಿರಿ ಎಂದರು. ಆಗ ಸರ್​ ನನಗೆ ಇದು ಬೇಡ, ಎಂಎಲ್​ಸಿ ಮಾಡಿ ಎಂದೆ, ಆಗ ಅವರು ಮುಂದೆ ನೋಡೋಣ ಸದ್ಯ ಇದು ಒಪ್ಪಿಕೊಳ್ಳಿ ಎಂದಾಗ ಪ್ರೀತಿ ಮತ್ತು ಅಭಿಮಾನಕ್ಕೆ ಆಯಿತು ಎಂದಿದ್ದೇನೆ.ಹಿಂದೆ ಯಾರು ಈ ಸ್ಥಾನದಲ್ಲಿ ಬಹಳ ದಿನ ಉಳಿದಿಲ್ಲ, ಕಾರಣ ಕಾರ್​ ಚಾಲಕನಿಗೆ ಸಂಬಳ ಅಧ್ಯಕ್ಷನಿಗೆ ಇಲ್ಲ. ಇದೆಲ್ಲ ಹೇಳಬಾರದು, ತಾಳಿ, ತಾಳಿ ಸಾಕಾಗಿ, ಭಾರವಾದ ಮನಸ್ಸಿನಿಂದ ಬಾಯಿಬಿಟ್ಟಿರುವೆ ಎಂದು ಭಾವುಕರಾದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net