ತಲಾವಾರು ಮದ್ಯ ಸೇವನೆಯಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ: ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ ಬಹಿರಂಗ- Karnataka tops in alcohol consumption

ಮದ್ಯ ಸೇವಿಸುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮುಂಚೂಣಿ
ಮದ್ಯ ಸೇವಿಸುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮುಂಚೂಣಿ
Published on
ಬೆಂಗಳೂರು: ದೇಶದಲ್ಲೇ ಅತಿ ಹೆಚ್ಚು ತಲಾವಾರು ಮದ್ಯ ಸೇವಿಸುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ.
ರಾಜ್ಯದಲ್ಲಿ ಶೇ.11 ಮಂದಿ ಮಾತ್ರ ಮದ್ಯ ಸೇವಿಸುತ್ತಿದ್ದರೂ ವಾರ್ಷಿಕ ತಲಾವಾರು ಮದ್ಯ ಸೇವನೆ ಪ್ರಮಾಣ ಬರೋಬ್ಬರಿ 9.1 ಲೀಟರ್‌ಗಳಷ್ಟಿದೆ. ಇದು ದೇಶದ ಸರಾಸರಿ ಪ್ರಮಾಣವಾದ 6.4 ಲೀಟರ್‌ಕ್ಕಿಂತ ಅಧಿಕವಾಗಿದೆ. ದೇಶದ ಒಟ್ಟು ಮದ್ಯ ಮಾರಾಟದಲ್ಲಿ ಕರ್ನಾಟಕ ಸೇರಿ ದಕ್ಷಿಣ ಭಾರತದ 5 ರಾಜ್ಯಗಳ ಪಾಲು ಶೇ. 45ರಷ್ಟಿದೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (ಎನ್‌ಎ್ಎಚ್‌ಎಸ್) ವರದಿಯಲ್ಲಿ ಬಹಿರಂಗವಾಗಿದೆ.
ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಮದ್ಯಪಾನ ಮಾಡುವವರ ಸಂಖ್ಯೆ ಕಡಿಮೆ ಇದ್ದರೂ ಅಧಿಕ ಪ್ರಮಾಣದಲ್ಲಿ ವ್ಯಸನಿಗಳು ಮದ್ಯ ಸೇವಿಸುತ್ತಿದ್ದಾರೆ. ಹೆಚ್ಚುತ್ತಿರುವ ಆದಾಯ, ಬದಲಾಗುತ್ತಿರುವ ಜೀವನಶೈಲಿ, ನಗರೀಕರಣ, ಖರ್ಚು ಮಾಡುವ ಶೈಲಿಯಲ್ಲಿ ಬದಲಾವಣೆ ಮತ್ತು ಸಮಾಜದಲ್ಲಿ ‘ಸೋಷಿಯಲ್ ಡ್ರಿಂಕಿಂಗ್‌ಗೆ ಸಿಗುತ್ತಿರುವ ಮನ್ನಣೆಯಿಂದ ಮದ್ಯ ಸೇವಿಸಲಾಗುತ್ತಿದೆ ಎಂದು ಇತ್ತೀಗಷ್ಟೇ ನಿಮ್ಹಾನ್ಸ್‌ನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಪಾಲುದಾರರ ಸಂವಾದದಲ್ಲಿ ವೈದ್ಯರು ಮತ್ತು ಮಾನಸಿಕ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ಮದ್ಯ ನಿಷೇಧ ಶಾಶ್ವತ ಪರಿಹಾರವಲ್ಲ
ಸಂಪೂರ್ಣವಾಗಿ ಮದ್ಯಪಾನ ನಿಷೇಧಿಸಿದರೆ ಶಾಶ್ವತ ಪರಿಹಾರ ಸಿಗಲ್ಲ. ಮದ್ಯ ನಿಷೇಧಿಸಿದ್ದರೂ ರಹಸ್ಯವಾಗಿ ಮಾರಾಟ ಮಾಡುವಿಕೆ ಮತ್ತು ನಕಲಿ ಮದ್ಯ ಮಾರುಕಟ್ಟೆಗಳು ಸೃಷ್ಟಿಯಾಗಲಿವೆ. ಇದು ಹೊಸ ಸಾರ್ವಜನಿಕ ಆರೋಗ್ಯದ ಅಪಾಯಗಳಿಗೆ ಏಡೆ ಮಾಡಿಕೊಡಲಿದೆ. ಆಲ್ಕೋಹಾಲ್ ಪ್ರಮಾಣ ಹೊಂದಿರುವ ಮದ್ಯ ಮೇಲೆ ಅಧಿಕ ತೆರಿಗೆ ವಿಧಿಸುವುದು, ಕುಡಿದು ವಾಹನ ಚಾಲನೆ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವುದು, ಪರೋಕ್ಷ ಜಾಹೀರಾತು ನಿಯಂತ್ರಿಸುವುದು, ಆರೋಗ್ಯ ರಕ್ಷಣಾ ಕೇಂದ್ರಗಳಲ್ಲಿ ನಿಯಮಿತವಾಗಿ ಆಲ್ಕೊಹಾಲ್ ತಪಾಸಣೆ ನಡೆಸುವ ಮೂಲಕ ಮದ್ಯದ ಲಭ್ಯತೆಯನ್ನು ನಿರ್ಬಂಧಿಸುವುದು ಸೂಕ್ತವಾಗಿದೆ ಎಂದು ತಜ್ಞರು ಹೇಳುತ್ತಾರೆ.
ದೇಶದಲ್ಲಿ 16 ಕೋಟಿ ಮದ್ಯ ವ್ಯಸನಿಗಳು
ದೇಶಾದ್ಯಂತ 16 ಕೋಟಿ ಮದ್ಯ ವ್ಯಸನಿಗಳಿದ್ದಾರೆ.ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ 15-49 ವರ್ಷ ವಯಸ್ಸಿನ ಪುರುಷರಲ್ಲಿ ಶೇ.18.3 ಮತ್ತು ಮಹಿಳೆಯರಲ್ಲಿ ಶೇ.4.8 ಮದ್ಯ ಸೇವಿಸುತ್ತಿದ್ದಾರೆ. ನಗರ ಪ್ರದೇಶಗಳಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲಿ ಮದ್ಯ ಸೇವಿಸುವ ಪ್ರಮಾಣಹೆಚ್ಚಾಗಿದೆ. ಪ್ರತಿನಿತ್ಯ ಕುಡಿಯುವವರ ಪೈಕಿ ಕೆಲವರು ಅತಿಯಾಗಿ ಮದ್ಯ ಸೇವಿಸುತ್ತಿದ್ದಾರೆ. ಇದರಿಂದಾಗಿ ರಸ್ತೆ ಅಪಘಾತ, ಕೌಟುಂಬಿಕ ಹಿಂಸೆ ಮತ್ತು ಯಕೃತ್ತಿನ ಕಾಯಿಲೆ ಸೇರಿ ಇತರ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಭಾರತದಲ್ಲಿ ಮದ್ಯ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ಈ ಮದ್ಯ ಉದ್ಯಮವು ಕೃಷಿ, ಉತ್ಪಾದನೆ, ಸೇವೆಗಳು ಮತ್ತು ಸಾರ್ವಜನಿಕ ಹಣಕಾಸಿನಲ್ಲಿ ವ್ಯಾಪಕ ಸಂಪರ್ಕ ಹೊಂದಿರುವ ಪ್ರಮುಖ ಆರ್ಥಿಕ ವಲಯವಾಗಿದೆ. ಮದ್ಯದ ಮೇಲಿನ ತೆರಿಗೆಯು ಭಾರತದ ಜಿಡಿಪಿಗೆ ಶೇ.1.2 ಮತ್ತು ಒಟ್ಟು ತೆರಿಗೆ ಸಂಗ್ರಹದಲ್ಲಿ ಶೇ 7-8 ಕೊಡುಗೆ ನೀಡುತ್ತಿದೆ.
* ಗಂಡಂದಿರ ಮದ್ಯ ಸೇವೆನೆಯಿಂದ ಶೇ.73.4 ಮಂದಿ ಕೌಟುಂಬಿಕ ಹಿಂಸಾಚಾರ
* ವರ್ಷದಿಂದ ವರ್ಷಕ್ಕೆ ಮದ್ಯ ಚಟ ಅಂಟಿಸಿಕೊಳ್ಳುತ್ತಿರುವ ಹದಿಹರೆಯದವರು
* ಕರ್ನಾಟಕದಲ್ಲಿ ಮದ್ಯ ಸೇವನೆಯು ಸಾಮಾಜಿಕ ವೆಚ್ಚದ ಮೇಲೆ ಪರಿಣಾಮ
* 14ನೇ ವಯಸ್ಸಿನಿಂದ ಮದ್ಯ ಸೇವಿಸಲು ಶುರು
* 15-19ನೇ ವಯಸ್ಸಿನವರಲ್ಲಿ ಶೇ.8.1 ಮಂದಿ ಈಗಾಗಲೇ ಮದ್ಯ ಸೇವನೆ
* 21ನೇ ವಯಸ್ಸಿನ ವೇಳೆ ಇದರ ಸಂಖ್ಯೆ ಹೆಚ್ಚಳ
* ಮದ್ಯಪಾನದ ವಯಸ್ಸು 19 ವರ್ಷದಿಂದ 13 ವರ್ಷಕ್ಕೆ ಇಳಿಕೆ
ಹದಿಹರೆಯದಲ್ಲಿ ಮದ್ಯಪಾನಕ್ಕೆ ಒಳಗಾಗುವುದರಿಂದ ಭವಿಷ್ಯದಲ್ಲಿ ತೀವ್ರ ಆರೋಗ್ಯ ಸಮಸ್ಯೆಗಳನ್ನು ಎದುರಿಸಲಿದ್ದಾರೆ. ಮದ್ಯಪಾನ ಆರಂಭಿಸುವ ವಯಸ್ಸನ್ನು ಮುಂದೂಡುವುದು ಸಾರ್ವಜನಿಕ ಆರೋಗ್ಯ ರಕ್ಷಣೆಯ ಅತ್ಯಂತ ಪರಿಣಾಮಕಾರಿ ಕ್ರಮಗಳಲ್ಲಿ ಒಂದಾಗಿದೆ. 15 ಅಥವಾ 16ನೇ ವಯಸ್ಸಿನಲ್ಲಿಯೇ ಮದ್ಯ ಸೇವನೆ ಆರಂಭಿಸುವ ಯುವಜನರು, 25 ವರ್ಷಗಳ ನಂತರ ಮದ್ಯಪಾನ ಆರಂಭಿಸುವವರಿಗಿಂತ ಭವಿಷ್ಯದಲ್ಲಿ ಅತಿ ಹೆಚ್ಚು ಮದ್ಯ ಸಂಬಂಧಿಗಳ ಸಮಸ್ಯೆ ಎದುರಿಸುತ್ತಾರೆ.
-ಡಾ. ವಿವೇಕ್ ಬೆನಗಲ್, ನಿಮ್ಹಾನ್ಸ್ ಮನೋವೈದ್ಯಕೀಯ ವಿಭಾಗದ ಮಾಜಿ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net