ಚಿತ್ತಾಪುರದಲ್ಲಿ ಮಂಗಳವಾರ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ಕಾಶಿರಾಯ ಕಲಾಲ್, ವೀರಭದ್ರಪ್ಪ ಗುರುಮಿಠಕಲ್, ರವೀಂದ್ರ ಸಜ್ಜನಶೆಟ್ಟಿ, ಜಗದೀಶ ಚವ್ಹಾಣ್ ಇತರರಿದ್ದರು.
ಚಿತ್ತಾಪುರ: ನೆಲ-ಜಲ, ಭಾಷೆ ಸಂರಕ್ಷಣೆ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್ ಜನ್ಮ ತಾಳಿದೆ ಎಂದು ಸರ್ಕಾರಿ ಬಾಲಕರ ಪ್ರೌಢಶಾಲೆ ಮುಖ್ಯಗುರು ಕಾಶಿರಾಯ ಕಲಾಲ್ ಹೇಳಿದರು.
ಪಟ್ಟಣದ ವಿದ್ಯಾನಿಕೇತನ ಪ್ರೌಢಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಕಸಾಪ 112ನೇ ಸಂಸ್ಥಾಪನಾ ದಿನ, ವಿಶೇಷ ಉಪನ್ಯಾಸ ಮತ್ತು ಹಿರಿಯ ಸದಸ್ಯರಿಗೆ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಸರಳ ಭಾಷೆ, ಪ್ರತಿಯೊಬ್ಬರ ಮನೆ ಹೆಬ್ಬಾಗಿಲು ಇದ್ದಂತೆ. ಬೇರೆ ಭಾಷೆಗಳಿಗೆ ದ್ವೇಷಿಸದೆ ಎಲ್ಲರೂ ಕನ್ನಡ ಭಾಷಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ಕನ್ನಡ ವಿಶ್ವದಲ್ಲೇ ಶ್ರೇಷ್ಠವಾದ ಭಾಷೆ. ಎಲ್ಲರಲ್ಲೂ ಅರಿವು ಮೂಡಿಸುವ ಕೆಲಸ ಕಸಾಪ ಮಾಡುತ್ತಿದೆ. ಮಾತೃಭಾಷೆ ಕನ್ನಡಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು. ಉಳಿದ ಇಂಗ್ಲಿಷ್, ಹಿಂದಿ ಜತೆಗಿರಲಿ. ಕನ್ನಡ ಕಟ್ಟುವ, ಬೆಳೆಸುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕು ಅಧ್ಯಕ್ಷ ವೀರಭದ್ರಪ್ಪ ಗುರುಮಿಠಕಲ್, ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಪುರಸಭೆ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಜಗದೀಶ ಚವ್ಹಾಣ್, ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಶರಣಪ್ಪ ಮಠಾಳೆ ಮಾತನಾಡಿದರು.
ಗೌರವ ಕಾರ್ಯದರ್ಶಿ ನರಸಪ್ಪ ಚಿನ್ನಕಟ್ಟಿ ಪ್ರಾರ್ಥನೆ ಗೀತೆ ಹಾಡಿದರು. ಲಲಿತಮ್ಮ ರೇಷ್ಮಿ ಸ್ವಾಗತಿಸಿದರು. ಬಸಪ್ಪ ಯಂಬತ್ನಾಳ ನಿರೂಪಣೆ ಮಾಡಿದರು. ಅನಿಲಕುಮಾರ ಸನ್ಮುಖ ವಂದಿಸಿದರು. ಕಸಾಪ ಹಿರಿಯ ಸದಸ್ಯರಾದ ರಾಜಶೇಖರ ಗೋಣಗಿ, ಸಂಜಯ ಕೋಟ್ರಕಿ, ಸಂಜಯ ಕೋಟ್ರಕಿ ಅವರಿಗೆ ಗೌರವ ಸನ್ಮಾನ ಮಾಡಲಾಯಿತು.