ಬೆಂಗಳೂರು: ಅಂಗವಿಕಲರು ಯಾರಿಗೂ ಎರಡನೆಯವರಲ್ಲ. ಅವರಲ್ಲಿಯೂ ವಿಶೇಷ ಬುದ್ಧಿವಂತಿಕೆ ಇರಲಿದೆ ಎಂದು ಕೌಶಲ ಅಭಿವೃದ್ಧಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ತಿಳಿಸಿದರು.
ವಿಕಾಸಸೌಧದಲ್ಲಿ ಅಸಿಸ್ಟೆಕ್ ಫೌಂಡೇಶನ್(ಎಟಿಎಫ್) ಸಹಯೋಗದಲ್ಲಿ ಕೌಶಲ ಅಭಿವೃದ್ಧಿ ಇಲಾಖೆ ಹೊರತಂದಿದ್ದ ಆದಿದ್ವಾರ ಅಪ್ಲಿಕೇಶನ್ ಬಿಡುಗಡೆಗೊಳಿಸಿದರು. ಆಗಸ್ಟ್‌ನಲ್ಲಿ ಅಂಗವಿಕಲರಿಗೆ (ಪಿಡಬ್ಲ್ಯುಡಿಗಳು) ನಡೆಯುವ ವಿಶೇಷ ಉದ್ಯೋಗ ಮೇಳದ ಅಧಿಕೃತ ಲೋಗೋ ಅನಾವರಣಗೊಳಿಸಿದ ಸಚಿವರು, ಮೇಳವನ್ನು ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸುವುದಾಗಿ ೋಷಣೆ ಮಾಡಿದರು.
ಈ ಸಲುವಾಗಿ ಆದಿದ್ವಾರ ಅಪ್ಲಿಕೇಶನ್ ಸಮಗ್ರ ಉದ್ಯೋಗ ಮತ್ತು ಕೌಶಲ ವೇದಿಕೆಯಾಗಿ ಸಹಕಾರಿಯಾಗಲಿದೆ. ಅಂಗವಿಕಲರು ಬೇರೆಯವರಂತೆ ಪ್ರತಿಭಾನ್ವಿತರು, ಕಾರ್ಪೊರೇಟ್‌ಗಳು ನೇಮಕಾತಿಯ ಸಮಯದಲ್ಲಿ ಅವರಿಗೆ ಸಮಾನ ಅವಕಾಶ ಮತ್ತು ಚಿಕಿತ್ಸೆ ನೀಡಬೇಕು ಎಂದು ಹೇಳಿದರು.
ಆದಿದ್ವಾರ ವೇದಿಕೆಯು ಉದ್ಯೋಗಾವಕಾಶ, ಇಂಟರ್ನ್‌ಶಿಪ್ ಮತ್ತು ಕೌಶಲ ಮತ್ತು ಕೌಶಲಾಭಿವೃದ್ಧಿ ಕಾರ್ಯಕ್ರಮಗಳಿಗೆ ಸೇತುವೆಯಾಗಲಿದೆ. ಎಐ ತಂತ್ರಜ್ಞಾನ ಬಳಸಿಕೊಂಡು ಉದ್ಯೋಗ-ಅಭ್ಯರ್ಥಿ ಹೊಂದಾಣಿಕೆಗೆ ಸಹಕಾರಿಯಾಗಲಿದೆ. ಅರ್ಹರನ್ನು ಮತ್ತು ಅವಶ್ಯಕತೆ ಇರುವ ಜಾಗದಲ್ಲಿ ಜೋಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ಆ್ಯಪ್‌ನಿಂದ ಹೊಸ ಸ್ಟಾರ್ಟ್‌ಅಪ್‌ಗಳು ಅಭಿವೃದ್ಧಿ ಮತ್ತು ಉದ್ಯಮಿಗಳ ಸಂಪರ್ಕ ಹೆಚ್ಚಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
2026ರ ಆಗಸ್ಟ್ನಲ್ಲಿ ನಿಗದಿಯಾಗಿರುವ ಮೇಳವು ಉದ್ಯೋಗಸ್ಥರು, ಕಂಪನಿಗಳು, ತರಬೇತಿ ಪಾಲುದಾರರು ಮತ್ತು ಸಹಾಯಕ ತಂತ್ರಜ್ಞಾನ ಸ್ಟಾರ್ಟಪ್‌ಗಳೊಂದಿಗೆ ಸಂಪರ್ಕಿಸಲು ವಿನ್ಯಾಸಗೊಳಿಸಲಾಗಿದೆ. ಕಾರ್ಯಕ್ರಮವು ನೇರ ನೇಮಕಾತಿ, ವೃತ್ತಿ ಮಾರ್ಗದರ್ಶನ, ಕೌಶಲ ಮಾರ್ಗ ಜಾಗೃತಿ ಕಾರ್ಯಕ್ರಮಗಳು ಮತ್ತು ತಂತ್ರಜ್ಞಾನ
ಪ್ರದರ್ಶನಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ಐಟಿ-ಬಿಟಿ ಕಂಪನಿ, ವ್ಯಾಪಾರ ಕ್ಷೇತ್ರ, ಉತ್ಪಾದನೆ, ಅತಿಥಿ ಆತಿಥ್ಯ ಮತ್ತು ಸೇವಾ ಕ್ಷೇತ್ರ ಸೇರಿ ವಿವಿಧ ವಲಯಗಳ ಉದ್ಯಮಿಗಳು ಭಾಗವಹಿಸುವ ನಿರೀಕ್ಷೆಯಿದೆ. 3 ಸಾವಿರಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಭಾಗವಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ನೇರ ನೇಮಕಾತಿ ಮತ್ತು ಕಂಪನಿ ಪ್ರತಿನಿಧಿಗಳು-ಅಭ್ಯರ್ಥಿ ಸಂವಾದ ಅವಕಾಶಗಳಿವೆ ಎಂದು ಸಚಿವರು ಮಾಹಿತಿ ನೀಡಿದರು.