ವಿ.ಕೃ.ಗೋಕಾಕ್ ಪ್ರಶಸ್ತಿಗೆ ಜಗದೀಶ ಕೊಪ್ಪ ಆಯ್ಕೆ

jagdish-koppa
jagdish-koppa
Published on

ಪ್ರಮುಖ ಮುಖ್ಯಾಂಶಗಳು

  • - ಪ್ರಶಸ್ತಿಯು ₹ 25 ಸಾವಿರ ನಗದು ಮತ್ತು ಫಲಕ ಒಳಗೊಂಡಿದೆ.
  • - ಆ.28ರಂದು ಸಂಜೆ 6 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ

ಬೆಂಗಳೂರು: ಭಾರತೀಯ ವಿದ್ಯಾಭವನ ಮತ್ತು ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್ ಸಹಯೋಗದಲ್ಲಿ ನೀಡುವ 2026ನೇ ಸಾಲಿನ ವಿ.ಕೃ.ಗೋಕಾಕ್ ಪ್ರಶಸ್ತಿಗೆ ಲೇಖಕ ಎನ್. ಜಗದೀಶ ಕೊಪ್ಪ ಆಯ್ಕೆಯಾಗಿದ್ದಾರೆ.

ನಗರದ ರೇಸ್ ಕೋರ್ಸ್ ರಸ್ತೆಯಲ್ಲಿನ ಭಾರತೀಯ ವಿದ್ಯಾಭವನದಲ್ಲಿ ಆ.28ರಂದು ಸಂಜೆ 6 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ರವಿಕುಮಾರ್ ತಿಳಿಸಿದ್ದಾರೆ.

ಪ್ರಶಸ್ತಿಯು ₹ 25 ಸಾವಿರ ನಗದು ಮತ್ತು ಫಲಕ ಒಳಗೊಂಡಿದೆ. ಟ್ರಸ್ಟ್ ಅಧ್ಯಕ್ಷ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ, ಗೌರವಾಧ್ಯಕ್ಷ ಅನಿಲ್ ಗೋಕಾಕ್, ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್.ಸುರೇಶ್, ಟ್ರಸ್ಟ್ ಕಾರ್ಯದರ್ಶಿ ಅಭಿನವ ರವಿಕುಮಾರ ಅವರನ್ನು ಒಳಗೊಂಡ ಸಮಿತಿ ಈ ಆಯ್ಕೆ ಮಾಡಿದೆ.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದ ಜಗದೀಶ ಕೊಪ್ಪ ಅವರು 1956ರಲ್ಲಿ ರೈತ ಕುಟುಂಬದಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ಅರ್ಥಶಾಸದಲ್ಲಿ ಎಂ.ಎ. ಪದವಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಜಾಗತೀಕರಣ ಮತ್ತು ಗ್ರಾಮಭಾರತದ ಪ್ರೌಢ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ. 1981ರಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದ ಅವರು ಮಾಧ್ಯಮ ಕ್ಷೇತ್ರದಲ್ಲಿ ಸೃಜನಶೀಲ ಆಲೋಚನೆಗಳ ಮೂಲಕ ಹೆಸರಾಗಿದ್ದಾರೆ. ಅನುವಾದ ಸೇರಿ ವೈವಿಧ್ಯಮಯ ವಿಷಯಗಳಲ್ಲಿ 45 ಕೃತಿಗಳನ್ನು ರಚಿಸಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 2013ರಲ್ಲಿ ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಅತ್ಯುತ್ತಮ ಅನುವಾದ ಪ್ರಶಸ್ತಿ, ಪತ್ರಿಕೋದ್ಯಮದ ಸೇವೆಗಾಗಿ 2015ರಲ್ಲಿ ಕರ್ನಾಟಕ ಸರ್ಕಾರದಿಂದ ಪರಿಸರ ಮತ್ತು ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, 2017ರಲ್ಲಿ ಎಚ್.ಕೆ.ವೀರಣ್ಣಗೌಡ ಪತ್ರಿಕೋದ್ಯಮ ಪ್ರಶಸ್ತಿ, 2018ರಲ್ಲಿ ಬೆಳಗಾವಿಯ ಬಸವರಾಜಕಟ್ಟಿಮನಿ ರಾಷ್ಟಿಯ ಸ್ಮಾರಕ ಟ್ರಸ್ಟಿನಿಂದ ಬಸವರಾಜ ಕಟ್ಟಿಮನಿ ಪತ್ರಿಕೋದ್ಯಮ ಪ್ರಶಸ್ತಿ, ಬೆಂಗಳೂರಿನ ತೇಜಸ್ವಿ ಪ್ರತಿಷ್ಠಾನದಿಂದ ತೇಜಸ್ವಿ ಪ್ರಶಸ್ತಿ ಹಾಗೂ ಬಿ.ಎಂ.ಶ್ರೀಪ್ರತಿಷ್ಠಾನದ ಪ್ರಶಸ್ತಿ ಸೇರಿ ಹಲವು ಗೌರವಗಳು ಸಂದಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net