ಗಿರಿಜಿಲ್ಲೆ ಪೊಲೀಸರ ಮೂಡಿಗೆರುವುದೇ ಹವಾ ನಿಯಂತ್ರಿತ ಹೆಲ್ಮೆಟ್​?

ಯಾದಗಿರಿ ನಗರದ ಮುಖ್ಯರಸ್ತೆಯಲ್ಲಿ ಸಂಚಾರ ನಿಯಂತ್ರಣದ ಕರ್ತವ್ಯದಲ್ಲಿ ಇರುವ ಪೊಲೀಸ್​ ಪೇದೆ
ಯಾದಗಿರಿ ನಗರದ ಮುಖ್ಯರಸ್ತೆಯಲ್ಲಿ ಸಂಚಾರ ನಿಯಂತ್ರಣದ ಕರ್ತವ್ಯದಲ್ಲಿ ಇರುವ ಪೊಲೀಸ್​ ಪೇದೆ
Published on

ಪ್ರಮುಖ ಮುಖ್ಯಾಂಶಗಳು

  • ಬಿಸಿಲಿನ ಝಳಕ್ಕೆ ಬಳಲಿ ಬೆಂಡಾಗುತ್ತಿರುವ ಸಂಚಾರಿ ಪೊಲೀಸರು
  • ತಂಪು ಪಾನಿಯ ವ್ಯವಸ್ಥೆಯೂ ಆಗಬೇಕಿದೆ
ಯಾದಗಿರಿ: ಅತಿಯಾದ ಬಿಸಿಗಾಳಿಯ ಹೊಡೆತದಿಂದ ತತ್ತರಿಸಿರುವ ಗಿರಿಜಿಲ್ಲೆಯ ಸಂಚಾರಿ ಪೊಲೀಸರು ಟ್ರಾಫಿಕ್​ ನಿಯಂತ್ರಕ್ಕೆ ಹಗಲಿರುಗಳು ಕೆಲಸ ಮಾಡಿ,ಬಳಲಿ ಬೆಂಡಾಗುತ್ತಿದ್ದು, ಅವರಿಗಾಗಿ ಹವಾ ನಿಯಂತ್ರಿತ ಹೆಲ್ಮೆಟ್​ ಮತ್ತು ತಂಪು ಪಾನಿಯ ಅಗತ್ಯತೆ ಇದೆ. ಕಳೆದ ಐದಾರು ದಿನಗಳಿಂದ 40,41ಮತ್ತು 42 ಡಿಗ್ರಿ ಸೆಲ್ಸಿಯೆಸ್​ ಉಷ್ಣತೆ ಇದ್ದು, ಕೆಂಡದಂತಹ ಬಿಸಿಲು ರಾಚುತ್ತಿದ್ದು, ದಿನೆ,ದಿನೆ ತಾಪಮಾನ ಹೆಚ್ಚಾಗುತ್ತಿದೆ.ಬೆಳಗ್ಗೆ 11 ರಿಂದ 4ರವರೆಗೂ ಸೂರ್ಯನ ನೇರವಾಗಿ ಮೈಒಡ್ಡುವುದು ಬೇಡ ಎಂಬ ಮುನ್ನೆಚ್ಚರಿಕೆಯ ಮಧ್ಯೆಯೂ ನಿರಂತರ ಕೆಲಸ ಮಾಡಬೇಕಾದ ಅನಿವಾರ್ಯತೆ ಸಂಚಾರ ಪೊಲೀಸರಿಗೆ ಎದುರಾಗಿದ್ದು, ಸ್ವಲ್ಪ ನೆಮ್ಮದಿಗಾದರೂ ಎರ್​ಕಂಡಿಷನರ್​ ಹೆಲ್ಮೆಟ್​ ನೀಡಿದರೇ ಉತ್ತಮ ಎಂಬ ಮಾತುಗಳು ಪ್ರಜ್ಞಾವಂತರಿಂದ ಕೇಳಿಬರುತ್ತಿವೆ.ಮಳೆ,ಚಳಿ ಮತ್ತು ಬಿಸಿಲು ಈ ಎಲ್ಲ ವೇಳೆಯಲ್ಲೂ ಸುಗಮ ಸಂಚಾರಕ್ಕೆ ಪೊಲೀಸರು ನಡುರಸ್ತೆಯಲ್ಲಿ ಕಾಯಕ ಮಾಡಲೇಬೇಕು. ಮೊದಲೇ ನಗರದಲ್ಲಿ ಸಂಚಾರ ನಿಯಮಗಳನ್ನು ಬಲ್ಲವರೇ ಕಡಿಮೆ. ತಿಳಿದವರಿದ್ದರೂ ವಾಹನಗಳನ್ನು ಅಡ್ಡಾದಿಡ್ಡಿ ಚಲಾಯಿಸಿಕೊಂಡು ಮುಂದೇ ಸಾಗುವವರ ಸಂಖ್ಯೆ ಅಧಿಕ. ಇದೆಲ್ಲವೂ ನಿಯಂತ್ರಿಸಲು ಸಂಚಾರ ಪೊಲೀಸರು ತಮ್ಮ ಕರ್ತವ್ಯ ಮಾಡಲೇಬೇಕು. ಹೀಗೆ ಕರ್ತವ್ಯದಲ್ಲಿ ಇರುವವರ ಮನಸ್ಸು, ಮಿದುಳು ಶಾಂತವಾಗಿದ್ದರೇ ಎಲ್ಲವೂ ಸರಿ. ಆದರೇ ಬಿಸಿಲಿನ ಪ್ರಖರತೆ ಹೆಚ್ಚಾಗಿ ಅದರಿಂದ ಝಳವೂ ವಿಪರೀತವಾಗಿದ್ದು, ಕೇವಲ ಐದೇ ನಿಮಿಷದಲ್ಲಿ ರಸ್ತೆ ನಿಂತಿರುವ ಪೊಲೀಸರಿಗೆ ಬೆವರಿನ ಸ್ನಾನ ಆಗುತ್ತಿರುತ್ತದೆ. ಇದು ಒಂದಡೆ ದೇಹದಲ್ಲಿ ಕಿರಿ, ಕಿರಿ ಅನಿಸಿ ಮನಸ್ಸು ಚಂಚಲವಾಗಿ ಸಂಚಾರ ನಿಯಂತ್ರಣಕ್ಕೆ ಪೂರ್ತಿಯಾಗಿ ಒಗ್ಗಿಕೊಂಡು ಕೆಲಸ ಮಾಡುವುದು ಕಷ್ಟಕರವಾಗುತ್ತಿದೆ. ಹೀಗೆ ಎಂದು ಮೇಲಾಧಿಕಾರಿಗಳಿಗೆ ಹೇಳಿ ಕರ್ತವ್ಯದಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಕಾರಣ ಕೆಲಸವೂ ಮಾಡಬೇಕು, ಮೇಲಾಗಿ ಬಿಸಿಲಿನ ಝಳವೂ ಸಹಿಸಿಕೊಳ್ಳಬೇಕು. ಈ ಎರಡರಿಂದ ನಗರ ಸೇರಿದಂತೆಯೇ ಇಡಿ ಜಿಲ್ಲೆಯ ಸಂಚಾರಿ ಪೊಲೀಸರು ಹೈರಾಣಕ್ಕೆ ಸಿಲುಕಿದ್ದಾರೆ. ಅದಕ್ಕೆ ಪೂರಕವಾಗಿ ಅಲ್ಪ ನೆಮ್ಮದಿ ನೀಡಲು ಬ್ಯಾಟರಿ ಚಾಲಿತ ಎರ್​ಕಂಡಿಷನರ್​ ಹೆಲ್ಮೆಟ್​ ಮತ್ತು ಎರಡು ಸಲ ತಂಪು ಪಾನಿಯ ವ್ಯವಸ್ಥೆ ಮಾಡಬೇಕು ಎಂಬ ಮಾನವಿಯ ಕಳಕಳಿಯ ಮಾತುಗಳು ಅಲ್ಲಲ್ಲಿ ಕೇಳಿಬರುತ್ತಿವೆ.

ಎರ್​ಕಂಡಿಷನರ್​ ಹೆಲ್ಮೆಟ್​ ವ್ಯವಸ್ಥೆ ಮಾಡಬೇಕು:

ಜನ, ಜಾನುವಾರುಗಳ ಜೀವ ರಕ್ಷಣೆಗೆ ಸದಾ ಕರ್ತವ್ಯದಲ್ಲಿರುವ ಇರುವ ಸಂಚಾರಿ ಪೊಲೀಸರಿಗೆ ಈ ತೀವ್ರ ಬಿಸಿಗಾಳಿಯ ಬೀಸುವ ವೇಳೆ ಎರ್​ಕಂಡಿಷನರ್​ ಹೆಲ್ಮೆಟ್​ ಪೊಲೀಸ್​ ಇಲಾಖೆ ನೀಡಬೇಕು. ಅವರು ನಮ್ಮಂತೆಯೇ ಮನುಷ್ಯರೇ, ಸುರಕ್ಷಿತವಾಗಿ ಕೆಲಸ ಮಾಡಲು ಸೂಕ್ತ ವ್ಯವಸ್ಥೆ ಮಾಡಬೇಕು.ಲಲಿತಾ ಅನಪುರ
ಮಾಜಿ ಅಧ್ಯಕ್ಷರು, ನಗರಸಭೆ ಯಾದಗಿರಿ

ಪರಿಶೀಲಿಸಿ ಕ್ರಮ: ಪ್ರಥ್ವಿಕ್​ ಶಂಕರ್.​ ಎಸ್​ಪಿ, ಯಾದಗಿರಿ

ರಾಜ್ಯದಲ್ಲಿಯೇ ಅತಿಹೆಚ್ಚು ಬಿಸಿಲು ಇರುವ ಜಿಲ್ಲೆ ನಮ್ಮದು. ನಮ್ಮ ಸಿಬ್ಬಂದಿಗೆ ಕರ್ತವ್ಯ ನಿರ್ವಹಿಸಲು ತೊಂದರೆಯಾಗುತ್ತಿದೆ ಎನ್ನುವುದು ಗಮನಕ್ಕೆ ಇದೆ. ಈ ನಿಟ್ಟಿನಲ್ಲಿ ಬ್ಯಾಟರಿ ಚಾಲಿತ ಎರ್​ಕಂಡಿಷನರ್​ ಹೆಲ್ಮೆಟ್​ ಮತ್ತು ತಂಪು ಪಾನಿಯ ವ್ಯವಸ್ಥೆ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net