ಕೆಪಿಸಿಸಿ ನೂತನ ಅಧ್ಯಕ್ಷರ ಪರಿಚಯ

 ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್
ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್
Published on
ಬೆಂಗಳೂರು: ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ತೆರವಾದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರನ್ನು ಎಐಸಿಸಿ ನೇಮಕ ಮಾಡಿದೆ. 24ನೇ ಅಧ್ಯಕ್ಷರಾಗಿ ಹರಿಪ್ರಸಾದ್ ನೇಮಕರಾಗಿದ್ದಾರೆ. ಶೀಘ್ರದಲ್ಲೇ ಅಧ್ಯಕ್ಷ ಹುದ್ದೆ ಪದಗ್ರಹಣ ಮಾಡಲಿದ್ದಾರೆ. ಡಿ.ಕೆ.ಶಿವಕುಮಾರ್ ಸತತ 6 ವರ್ಷ ಅಧ್ಯಕ್ಷ ಜವಾಬ್ದಾರಿ ನಿರ್ವಹಿಸಿದ್ದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಬಿ.ಕೆ. ಹರಿಪ್ರಸಾದ್ ಅವರನ್ನು ನೇಮಕ ಮಾಡಿ ಆದೇಶಿಸಿದರು. 1972ರಲ್ಲಿ ಕಾಂಗ್ರೆಸ್ ಪ್ರವೇಶ ಮಾಡಿದ ಬಿ.ಕೆ. ಹರಿಪ್ರಸಾದ್, ಅಖಿಲ ಭಾರತ ಎನ್‌ಎಸ್‌ಯುಐ ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷ, ರಾಜ್ಯ ಸಂಸದರ ವೇದಿಕೆ ಸಂಯೋಜಕ, ಅಖಿಲ ಭಾರತ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ, ಅಖಿಲ ಭಾರತ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಮತ್ತು ಹಾಲಿ ಹರಿಯಾಣ ಕಾಂಗ್ರೆಸ್ ಉಸ್ತುವಾರಿಯಾಗಿದ್ದಾರೆ.
ಇದಕ್ಕೂ ಮೊದಲು ಗುಜರಾತ್, ಪುದುಚೇರಿ, ದಿಯೂ ಮತ್ತು ದಮನ್, ಗೋವಾ, ದಾದರ್ ನಗರ್ ಹವೇಲಿ, ಮಧ್ಯಪ್ರದೇಶ, ಛತ್ತೀಸ್‌ಗಢ, ಜಾರ್ಖಂಡ್, ಒಡಿಶಾ, ಬಿಹಾರ, ರಾಜಸ್ಥಾನ, ಪಂಜಾಬ್, ಮಹಾರಾಷ್ಟ್ರ, ಹಿಮಾಚಲ ಪ್ರದೇಶ, ತ್ರಿಪುರ, ಮಣಿಪುರ ಮತ್ತು ಉತ್ತರ ಪ್ರದೇಶದ ಎಐಸಿಸಿ ಉಸ್ತುವಾರಿ ಸೇವೆ ಸಲ್ಲಿಸಿದ್ದರು.
ರಾಜ್ಯಸಭೆ ಸದಸ್ಯರಾಗಿ ನಾಲ್ಕು ಬಾರಿ ಆಯ್ಕೆಯಾಗಿದ್ದರು. ಆ ನಂತರ ವಿಧಾನ ಪರಿಷತ್ ಸದಸ್ಯರಾಗಿ ರಾಜ್ಯ ರಾಜಕೀಯಕ್ಕೆ ಕಾಲಿಟ್ಟು ಪರಿಷತ್ ವಿಪಕ್ಷದ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದರು.
ಇದಕ್ಕೂ ಮೊದಲು ರಾಜ್ಯ ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷ, ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಮಿತಿಗಳ ಸಲಹಾ ಸಮಿತಿ ಸೇರಿ ಹಲವು ಸರ್ಕಾರದ ಪ್ರಾಧಿಕಾರಗಳಲ್ಲಿ ಕಾರ್ಯನಿರ್ವಹಿಸಿದ್ದರು.

22ನೇ ಯುವ ಒಲಿಂಪಿಕ್ ಕ್ಯಾಂಪ್‌ಗಾಗಿ 1980ರಲ್ಲಿ ಮಾಸ್ಕೋಗೆ ಭೇಟಿ ನೀಡಿದ್ದ ನಿಯೋಗದ ನೇತೃತ್ವ ವಹಿಸಿದ್ದರು. ಅಲಿಪ್ತ ಚಳವಳಿಯ ನೇತಾರರಲ್ಲಿ ಒಬ್ಬರಾಗಿದ್ದ ಸರ್ ಜೋಸೆಫ್ ಬೋಸ್ ನಿಧನದ ಪ್ರಯುಕ್ತ ಬೆಲ್‌ಗ್ರೇಡ್‌ಗೆ ಭೇಟಿ(1980), ಸ್ಪೇನ್‌ನಲ್ಲಿ ಅಂತಾರಾಷ್ಟ್ರೀಯ ಯುವ ಸಮಾವೇಶ (1981), ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಪ್ರತಿನಿಧಿ (2009) ಮತ್ತು ಜಿನೀವಾದಲ್ಲಿ ನಡೆದ ಅಂತಾರಾಷ್ಟ್ರೀಯ ಸಮಾಜವಾದಿಗಳ ಸಮಾವೇಶದಲ್ಲಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net