ಬಾರದ ವಿಮೆ ಹಣ, ಶಾಸಕರು ಮೌನ

ಹರ್ಷಾನಂದ ಗುತ್ತೇದಾರ್
ಹರ್ಷಾನಂದ ಗುತ್ತೇದಾರ್
Published on

ಪ್ರಮುಖ ಮುಖ್ಯಾಂಶಗಳು

  • ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ವ್ಯಂಗ್ಯ

ಆಳಂದ: ಕಳೆದ ಬಾರಿ ಬೆಳೆ ವಿಮೆ ಪರಿಹಾರ ಮಂಜೂರಾದ ಸಂದರ್ಭದಲ್ಲಿ ನನ್ನ ಪ್ರಯತ್ನದಿಂದಲೇ ರೈತರಿಗೆ ಬೆಳೆ ವಿಮೆ ದೊರೆತಿದೆ ಎಂದು ಹೇಳಿಕೊಂಡು ಅದ್ದೂರಿ ಸನ್ಮಾನ ಮಾಡಿಸಿಕೊಂಡಿದ್ದ ಶಾಸಕ ಬಿ.ಆರ್​.ಪಾಟೀಲ್​ ಅವರು, ಇದೀಗ ಸಾವಿರಾರು ರೈತರು ಬೆಳೆ ವಿಮೆ ಪರಿಹಾರದಿಂದ ವಂಚಿತರಾದರೂ ಮೌನವಹಿಸಿರುವುದು ಏಕೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ್​ ಪ್ರಶ್ನಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬೆಳೆ ವಿಮೆ ಮಂಜೂರಾದಾಗ ಅದರ ಸಂಪೂರ್ಣ ಕ್ರೆಡಿಟ್​ ಪಡೆದಿದ್ದ ಶಾಸಕರು, ಇದೀಗ ಸಾಕಷ್ಟು ರೈತರು ವಿಮೆ ಹಣ ಬಾರದೆ ಪರದಾಡುತ್ತಿದ್ದರೂ ಸರ್ಕಾರದ ಗಮನ ಸೆಳೆಯುವಲ್ಲಿ ವಿಫಲರಾಗಿದ್ದಾರೆ. ತಾಲೂಕಿನ ಹಲವು ಗ್ರಾಮಗಳ ರೈತರು ಅಗತ್ಯ ದಾಖಲೆ ಸಲ್ಲಿಸಿದ್ದರೂ ವಿವಿಧ ತಾಂತ್ರಿಕ ಹಾಗೂ ಆಡಳಿತಾತ್ಮಕ ಕಾರಣಗಳಿಂದ ಬೆಳೆ ವಿಮೆ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಇದರಿಂದ ಈಗಾಗಲೇ ಬರ ಹಾಗೂ ಬೆಳೆ ನಷ್ಟದಿಂದ ತೊಂದರೆ ಅನುಭವಿಸುತ್ತಿರುವ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದ್ದಾರೆ. ರೈತರ ಸಮಸ್ಯೆಗಳ ಕುರಿತು ನಿರಂತರವಾಗಿ ಧ್ವನಿ ಎತ್ತಬೇಕಾದ ಜನಪ್ರತಿನಿಧಿಗಳು, ಇಂತಹ ಗಂಭೀರ ವಿಷಯದಲ್ಲಿ ಮೌನ ವಹಿಸಿರುವುದು ಬೇಸರದ ಸಂಗತಿ. ಬೆಳೆ ವಿಮೆಯಿಂದ ವಂಚಿತರಾದ ಪ್ರತಿ ಅರ್ಹ ರೈತನಿಗೂ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆಗೆ ತಕ್ಷಣ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net